ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು | ನರೇಗಾ ನೆರವು: ಅರಳಿದ ಸೀತಾಫಲ ತೋಟ

Published 15 ಸೆಪ್ಟೆಂಬರ್ 2023, 5:39 IST
Last Updated 15 ಸೆಪ್ಟೆಂಬರ್ 2023, 5:39 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಗ್ರಾಮಾಂತರ ಪ್ರದೇಶದ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಕೆರೆ, ಕಟ್ಟೆ, ಹೊಲಗಳ ಬದು ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳಿಗೆ ನೆರವಾಗಿದ್ದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ತೋಟಗಾರಿಕೆ ಬೇಸಾಯಕ್ಕೆ ಮಾನವ ಸಂಪನ್ಮೂಲದ ನೆರವು ನೀಡುತ್ತಿದೆ.

ತಾಲ್ಲೂಕಿನ ಕಲಭಾಂವಿಯ ಮಹಾಂತೇಶ ಉಳವಯ್ಯ ಜಮಳೂರಮಠ ನರೇಗಾ ನೆರವಿನಿಂದ ಎಕರೆ ಪ್ರದೇಶದಲ್ಲಿ ಸೀತಾಫಲ ಗಿಡಗಳನ್ನು ಬೆಳೆಸಿ ಬದುಕು ಹೆಚ್ಚು ಸಿಹಿ ಮಾಡಲು ಹೊರಟಿದ್ದಾರೆ.

ಕಲಭಾಂವಿ– ಖೋದಾನಪುರ ರಸ್ತೆಯಲ್ಲಿ ಬರುವ ಹೊಲದಲ್ಲಿ ಮಹಾಂತೇಶ ಸುಮಾರು 850 ಸೀತಾಫಲ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಈಗಾಗಲೇ 4 ಕ್ವಿಂಟಲ್ ಹಣ್ಣು ಮಾರಾಟ ಮಾಡಿದ್ದಾರೆ. ವಾರ್ಷಿಕ ಉತ್ಪನ್ನವಾಗಿರುವ ಸೀತಾಫಲಕ್ಕೆ ರೋಗ ಮತ್ತು ಮಂಗಗಳ ಕಾಟವಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎನ್ನುತ್ತಾರೆ ಮಹಾಂತೇಶ್.

ಬೆಳೆ ಪದ್ಧತಿ: ನೆರೆಯ ಮಹಾರಾಷ್ಟ್ರದ ಸೋಲಾಪುರದಿಂದ ₹ 30ಕ್ಕೆ ಒಂದರಂತೆ 850 ಸಸಿಗಳನ್ನು ತಂದು, ಸಾಲಿನಿಂದ ಸಾಲಿಗೆ ಐದು ಅಡಿ, ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನೆಟ್ಟಿದ್ದಾರೆ. ಹೆಚ್ಚು ನೀರು ಬೇಡದ ಫಸಲಿದು. ಕಲ್ಲು ಮಸಾರಿ ಅಥವಾ ಯರಿ ಭೂಮಿಯೂ ಗಿಡ ನಾಟಿ ಮಾಡಲು ಸೂಕ್ತ. ಆದರೆ ಹೆಚ್ಚು ನೀರು ನಿಲ್ಲುವಂತಿರಬಾರದು ಎಂದು ಮಹಾಂತೇಶ್ ಮಾಹಿತಿ ನೀಡುತ್ತಾರೆ.

ಬೆಳೆಗಳಿಗೆ ನೀರುಣ್ಣಿಸಲು ಸುಮಾರು 2 ಕಿ.ಮೀ ಅಂತರದ ಮೇಲಿರುವ ಕೊಳವೆ ಬಾವಿಯಿಂದ ಪೈಪ್ ಲೈನ್ ಮೂಲಕ ನೀರಾವರಿ ಸೌಲಭ್ಯ ಪಡೆದುಕೊಂಡಿದ್ದಾರೆ. ಸಕಾಲಕ್ಕೆ ಸಹಾಯಧನ ಸಿಗದೆ ಇರುವುದರಿಂದಾಗಿ ₹ 30 ಸಾವಿರ ಖರ್ಚು ಮಾಡಿ ಹನಿ ನೀರಾವರಿ ಸೌಲಭ್ಯ ಪಡೆದುಕೊಂಡಿದ್ದಾರೆ. ಗಿಡದ ಬುಡದಲ್ಲಿ ಅಗತಿ ಮಾಡಿಸಲು ನರೇಗಾದ ನೆರವನ್ನು ಕಲಭಾಂವಿ ಗ್ರಾಮ ಪಂಚಾಯ್ತಿಯಿಂದ ಪಡೆದುಕೊಂಡಿದ್ದಾರೆ.

ಅಂತರ ಬೆಳೆಯಾಗಿ ಕುಂಬಳಕಾಯಿ, ಶೇಂಗಾ, ಮೆಣಸಿನ ಗಿಡ, ಶೇಂಗಾ ಬೆಳೆದು ಈಗಾಗಲೇ ₹ 1 ಲಕ್ಷ ಆದಾಯ ಪಡೆದಿದ್ದೇನೆ ಎಂದು ಅವರು ಸಂತಸ ಹಂಚಿಕೊಂಡರು.

ಈಗ ನಡುವೆ ಬಿಳಿ ಶ್ರೀಗಂಧ ಗಿಡಗಳನ್ನು ನೆಟ್ಟಿದ್ದಾರೆ. ಸೀತಾಫಲ ಹಾಗೂ ಶ್ರೀಗಂಧದಿಂದ ಆದಾಯ ಪಡೆಯಲು ನರೇಗಾ ನೆರವಾಗಿರುವುದನ್ನು ಅವರು ಸ್ಮರಿಸುತ್ತಾರೆ.

ಬಿಇ ಪದವಿಧರ: ಬಿಇ ಮೆಕ್ಯಾನಿಕಲ್ ಆಗಿರುವ ಮಹಾಂತೇಶ ಜಮಳೂರಮಠ ಮುಂಬೈಯಲ್ಲಿ ಉದ್ಯೋಗದಲ್ಲಿದ್ದರು. ತಂದೆಯ ಸುಮಾರು 12 ಎಕರೆ ಜಮೀನಿನಲ್ಲಿ ಏನಾದರೂ ಸಾಧನೆ ಮಾಡಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲ ಅವರದು. ಹೀಗಾಗಿ ಅಲ್ಲಿ ನೌಕರಿ ತೊರೆದು ಬೇಸಾಯ ಮಾಡಲು ನಿರ್ಧರಿಸಿದ್ದೇನೆ. ಸಾವಯವ ಕೃಷಿ ಮಾಡುವ ಒಲವು ಹೊಂದಿರುವೆ. ಜೀವಾಮೃತ ಮತ್ತು ಗೋ ಕೃಪಾಮೃತ ಸಿದ್ಧಪಡಿಸಿ ಸೀತಾಫಲ ಬೆಳೆಗೆ ಬಳಸುತ್ತಿದ್ದೇನೆ ಎಂದು ತಿಳಿಸಿದರು.

ಯುವ ರೈತರು ನರೇಗಾ ಹಾಗೂ ತೋಟಗಾರಿಕೆ ಇಲಾಖೆ ನೀಡುವ ಸವಲತ್ತು ಪಡೆದುಕೊಂಡು ಹೆಚ್ಚು ಆದಾಯ ಗಳಿಸಲು ಯತ್ನಿಸಬೇಕು
- ಸುಭಾಷ ಸಂಪಗಾಂವಿ, ಇಒ ತಾಲ್ಲೂಕು ಪಂಚಾಯಿತಿ ಕಿತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT