ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 9 ತಾಲ್ಲೂಕುಗಳಲ್ಲಿ ಮೇ 4ರಿಂದ ಎಲ್ಲ ಚಟುವಟಿಕೆ ಆರಂಭ

Last Updated 2 ಮೇ 2020, 10:01 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಒಂಬತ್ತು ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿಲ್ಲ. ಆದ್ದರಿಂದ ಮೇ 4 ರಿಂದ ವ್ಯಾಪಾರ ವಹಿವಾಟು, ಬಸ್ ಸಂಚಾರ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಆರಂಭಿಸಲಾಗುವುದು‘ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದ ಪಾಲ್ಗೊಂಡ ಅವರು, ಈ ವಿಷಯವನ್ನು ತಿಳಿಸಿದರು.

‘ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿರುವುದರಿಂದ ಸದ್ಯಕ್ಕೆ ಅಲ್ಲಿಂದ ಯಾರನ್ನೂ ಕರೆತರುವುದಿಲ್ಲ. ಆದರೆ ಹಸಿರು ವಲಯವಾಗಿರುವ (ಗ್ರೀನ್ ಝೋನ್) ಗೋವಾ ರಾಜ್ಯದಿಂದ ಬರಲು ಇಚ್ಛಿಸುವವರಿಗೆ ಅವಕಾಶ ನೀಡಲಾಗುವುದು’ ಎಂದರು.

‘ತಮ್ಮ ತಮ್ಮ ಊರುಗಳಿಗೆ ವಾಪಸ್‌ ತೆರಳಲು ಬಯಸಿರುವ ವಲಸೆ ಕಾರ್ಮಿಕರ ಬಳಿ ಬಸ್‌ ಟಿಕೆಟ್‌ ಖರೀದಿಸಲು ಹಣವಿಲ್ಲ. ಕಾರ್ಮಿಕರ ನಿಧಿಯಿಂದ ಈ ವೆಚ್ಚವನ್ನು ಭರಿಸುವುದಾದರೆ ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಕಳಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆದೇಶ ನೀಡಬೇಕು’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೋರಿದರು. ಇದಕ್ಕೆ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಹೆಬ್ಬಾಳಕರ ಮನವಿ:

‘ನನ್ನ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ 37 ಪ್ರಕರಣಗಳು ಕಂಡುಬಂದಿದ್ದು, ಇಡೀ ಪಟ್ಟಣ ಸೀಲ್‌ಡೌನ್‌ ಆಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಗ್ರಾಮದಲ್ಲಿರುವ 4 ಸಾವಿರ ಕುಟುಂಬಗಳ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರವೇ ಹಾಲು, ದಿನಸಿ ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೋರಿದರು.

ಕಾರ್ಮಿಕ ಇಲಾಖೆಯ ವತಿಯಿಂದ ಎಲ್ಲ ಕುಟುಂಬಗಳಿಗೆ ಕಿಟ್ ನೀಡಬೇಕು ಎಂದೂ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ‘ನರೇಗಾ ಜಾಬ್ ಕಾರ್ಡ್‌ ಇರುವ ಹಿರೇಬಾಗೇವಾಡಿಯ ಪ್ರತಿ ಕುಟುಂಬಕ್ಕೆ ಕಾರ್ಮಿಕ ಇಲಾಖೆಯ ವತಿಯಿಂದ ತಲಾ ₹ 2 ಸಾವಿರ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದರು. ಹಣದ ಬದಲು ಅಗತ್ಯವಿರುವ ಆಹಾರ ಧಾನ್ಯಗಳ ಕಿಟ್ ನೀಡುವ ಕುರಿತು ಬಗ್ಗೆ ಕೂಡ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಡಾ‌‌‌.ಎಸ್.ಬಿ. ಬೊಮ್ಮನಹಳ್ಳಿ, ‘ಜಿಲ್ಲೆಯಲ್ಲಿ 11 ಕಂಟೈನ್ಮೆಂಟ್ ಝೋನ್ ಇದ್ದು, ಅದರಲ್ಲಿ ಬೆಳಗುಂದಿಯನ್ನು ಡಿನೋಟಿಫೈ ಮಾಡಲಾಗುವುದು. ಜಿಲ್ಲೆಯಲ್ಲಿ ಗರಿಷ್ಠ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಹಿರೇಬಾಗೇವಾಡಿಯಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ 2 ಸಾವಿರ ಕಿಟ್ ವಿತರಿಸಲಾಗಿದೆ’ ಎಂದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ, ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ ಮಾಮನಿ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಪಿ.ರಾಜೀವ, ದುರ್ಯೋಧನ ಐಹೊಳೆ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡ್ರ, ಮಹೇಶ ಕುಮಠಳ್ಳಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿಲ್ಲೆಯ ಕೋವಿಡ್-19ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT