ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್‌ ಹಠಾತ್ ನಿಧನದ ಪರಿಣಾಮ: ಹೃದಯ ತಪಾಸಣೆ ಕಾಳಜಿ ಹೆಚ್ಚಳ

Last Updated 4 ನವೆಂಬರ್ 2021, 12:49 IST
ಅಕ್ಷರ ಗಾತ್ರ

ಬೆಳಗಾವಿ: ಖ್ಯಾತ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಹೃದಯಾಘಾತದಿಂದ ಹಠಾತ್ ನಿಧನರಾದ ನಂತರ, ಹೃದಯದ ತಪಾಸಣೆಗಾಗಿ ವೈದ್ಯರ ಬಳಿಗೆ ಬರುವವರ ಪ್ರಮಾಣ ಹೆಚ್ಚಾಗಿದೆ.

ನಗರದಲ್ಲಿ ಸರ್ಕಾರಿ ಹೃದ್ರೋಗ ಆಸ್ಪತ್ರೆ ಇಲ್ಲ. ಕೆಎಲ್‌ಇ, ಲೇಕ್‌ವ್ಯೂ ಸೇರಿದಂತೆ ಕೆಲವೇ ಖಾಸಗಿ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರಿದ್ದಾರೆ. ಅವರ ಬಳಿಗೆ ಹಾಗೂ ತಮ್ಮ ಕುಟುಂಬದ ವೈದ್ಯರ ಬಳಿಗೆ ಬರುತ್ತಿರುವ ಜನರು ಒಮ್ಮೆ ‘ಹೃದಯದ ಆರೋಗ್ಯ ತಪಾಸಣೆ ಮಾಡಿಕೊಡಿ’ ಎಂದು ಮನವಿ ಮಾಡುತ್ತಿದ್ದಾರೆ. ಹಿಂದೆಯೂ ಹೀಗೆ ಬರುವವರು ಇರುತ್ತಿದ್ದರು. ಆದರೆ, ಪುನೀತ್‌ ನಿಧನದ ನಂತರ ಪ್ರಮಾಣ ಹೆಚ್ಚಾಗಿದೆ. ಕಾಳಜಿ ವೃದ್ಧಿಸಿದೆ. ಹೊರರೋಗಿಗಳ ವಿಭಾಗದಲ್ಲಿ ಅಂಥವರ ಸಂಖ್ಯೆ ಜಾಸ್ತಿ ವರದಿಯಾಗುತ್ತಿದೆ ಎನ್ನುತ್ತಾರೆ ವೈದ್ಯರು.

ಮುಂಜಾಗ್ರತೆ ವಹಿಸುತ್ತಿದ್ದಾರೆ: ‘ಪುನೀತ್‌ ರಾಜ್‌ಕುಮಾರ್‌ ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಅವರು ದೈಹಿಕ ಸದೃಢತೆಗಾಗಿ ಕಸರತ್ತು ನಡೆಸುವ ಹತ್ತು ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಿಯಮಿತವಾಗಿ ಅವರು ದೇಹವನ್ನು ದಂಡಿಸುತ್ತಿದ್ದರು. ಹೀಗಿದ್ದರೂ ಕಸರತ್ತು ನಡೆಸುವಾಗಲೇ ಹೃದಯದ ನೋವು ಕಾಣಿಸಿಕೊಂಡಿರುವುದು ಬಳಿಕ ಅವರು ಸಾವಿಗೀಡಾಗಿರುವುದು ಬಹುತೇಕರಲ್ಲಿ ದಿಗ್ಭ್ರಮೆ ಮೂಡಿಸಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೆ ಮುಂದಾಗುವವರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುವ ಮಾಹಿತಿ ವೈದ್ಯರಿಂದ ಲಭ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಲ್‌ಇ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುರೇಶ ಪಟ್ಟೇದ, ‘ಪುನೀತ್‌ ಅಕಾಲಿಕ ನಿಧನದ ನಂತರ ಬಹಳಷ್ಟು ಮಂದಿ ಹೃದಯ ತಪಾಸಣೆಗೆಂದು ಬರುತ್ತಿದ್ದಾರೆ. ಹಿಂದೆ ಹೊರ ರೋಗಿಗಳ ವಿಭಾಗದಲ್ಲಿ ದಿನವೊಂದಕ್ಕೆ ಸರಾಸರಿ 30 ಮಂದಿಯನ್ನು ತಪಾಸಣೆಗೆ ಒಳಪಡಿಸುತ್ತಿದ್ದೆವು. ಇತ್ತೀಚೆಗೆ ಈ ಸಂಖ್ಯೆ ಸರಾಸರಿ 60ಕ್ಕೇರಿದೆ. ಎದೆ ನೋವು ಕಾಣಿಸಿಕೊಂಡಿದೆ ಎಂದು ಭಯ ಅಥವಾ ಆತಂಕದಿಂದ ಬರುವವರ ಸಂಖ್ಯೆ ಜಾಸ್ತಿ ಇರುವುದನ್ನು ಗಮನಿಸಿದ್ದೇವೆ’ ಎಂದು ತಿಳಿಸಿದರು.

ಒಳ್ಳೆಯ ಬೆಳವಣಿಗೆಯೇ: ‘ಜನರಿಗೆ ಹೃದಯದ ಕಾಳಜಿ ಬಂದಿರುವುದು ಹಾಗೂ ಅವರು ತಪಾಸಣೆಗೆ ಮುಂದಾಗುತ್ತಿರುವುದು ಒಳ್ಳೆಯ ಸೂಚನೆಯೇ. ಆದರೆ, ಆ ರೀತಿಯ ಆತಂಕ ಅಥವಾ ಭಯದಲ್ಲೇ ಇರುವುದು ಒಳ್ಳೆಯದಲ್ಲ. ಅಧಿಕ ರಕ್ತದೊತ್ತಡ, ಮಧುಮೇಹ ನ್ಯೂನತೆ, ಕೊಬ್ಬಿನ ಪ್ರಮಾಣ ಜಾಸ್ತಿ ಇರುವವರು, ಕುಟುಂಬದಲ್ಲಿ ಹಿಂದೆ ಯಾರಿಗಾದರೂ ಚಿಕ್ಕವ ವಯಸ್ಸಿನಲ್ಲೇ ಹೃದಯಾಘಾತ ಆಗಿದ್ದ ಉದಾಹರಣೆ ಇರುವವರು ತಪಾಸಣೆಗೆ ಬರುತ್ತಿದ್ದಾರೆ. 25ರಿಂದ 45 ವರ್ಷ ವಯಸ್ಸಿನವರು ಬರುವುದನ್ನು ಗುರುತಿಸಿದ್ದೇವೆ. ಹೀಗೆ ಬಂದವರಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವುದು ವರದಿಯಾಗಿಲ್ಲ’ ಎನ್ನುತ್ತಾರೆ ಅವರು.

‘ಫಿಟ್‌ ಆಗಿದ್ದ ಪುನೀತ್‌ಗೆ ಅವರಿಗೇ ಹೀಗಾಯ್ತಲ್ಲ; ಹೀಗಾಗಿ ಒಮ್ಮೆ ತಪಾಸಣೆ ಮಾಡಿಸೋಣ ಎಂದು ಬಂದೆವು’ ಎಂದು ಹಲವರು ತಿಳಿಸಿದರು. ಇಬ್ಬರು ಜಿಮ್‌ ಟ್ರೇನರ್‌ಗಳು ಕೂಡ ಬಂದಿದ್ದರು. 40 ವರ್ಷವಾದ ನಂತರ ವರ್ಷಕ್ಕೊಮ್ಮೆ ಹೃದಯ ಸೇರಿದಂತೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಮಸ್ಯೆ ಇದ್ದರೆ ತ್ವರಿತವಾಗಿ ಪರಿಹರಿಸಿಕೊಳ್ಳಬಹುದು. ಜನ್ಮದಿನದ ಸಂದರ್ಭದಲ್ಲಿ ನಮಗೆ ಹಾಗೂ ಇಡೀ ಕುಟುಂಬಕ್ಕೆ ಕೊಟ್ಟುಕೊಳ್ಳಬಹುದಾದ ದೊಡ್ಡ ಉಡುಗೊರೆಯದು. ಜನರು ಅನವಶ್ಯವಾಗಿ ಭಯ–ಅತಂಕಪಟ್ಟುಕೊಳ್ಳುವ ಅಗತ್ಯವಿಲ್ಲ. ನಮ್ಮ ಹೃದಯ ಪ್ರೀತಿಸುವುದಕ್ಕೆ ಆದ್ಯತೆ ಕೊಡಬೇಕು’ ಎನ್ನುವ ಸಲಹೆ ಅವರದು.

‘ಜಿಮ್‌ಗೆ ಸೇರುವುದಕ್ಕೆ ಮುನ್ನ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ಜಿಮ್‌ ಟ್ರೇನರ್ ಒಬ್ಬರು ಪ್ರತಿಕ್ರಿಯಿಸಿದರು.

ವೈದ್ಯರ ಸಲಹೆಗಳೇನು?

* 40 ವರ್ಷ ವಯಸ್ಸಿನ ನಂತರ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

* ಜಿಮ್‌ಗೆ ಸೇರುವುದಕ್ಕೆ ಮುನ್ನ ಹೃದಯದ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

*ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರುವವರು ಹೆಚ್ಚಿನ ಭಾರ ಎತ್ತುವ ಕಸರತ್ತಿಗಿಂತಲೂ ರನ್ನಿಂಗ್, ಜಾಗಿಂಗ್, ಸೈಕ್ಲಿಂಗ್‌ಗೆ ಆದ್ಯತೆ ಕೊಡುವುದು ಒಳಿತು.

* ದಿನಕ್ಕೆ 45 ನಿಮಿಷ ವ್ಯಾಯಾಮ ಮಾಡಿದರೆ ಸಾಕು. ನಡುವೆ, ವಿಶ್ರಾಂತಿ ಪಡೆಯಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು.

* ದಿಢೀರ್‌ ದೇಹದಾರ್ಢ್ಯತೆಗಾಗಿ ಸ್ಟೆರಾಯ್ಡ್‌ ಇಂಜೆಕ್ಷನ್ ಮೊರೆ ಹೋಗುವುದು ಅಪಾಯಕಾರಿ.

* ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿರಬೇಕು.

* ಮಧುಮೇಹ, ರಕ್ತದೊತ್ತಡ, ಕೊಬ್ಬಿನ ಪ್ರಮಾಣ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

* ಒತ್ತಡ ನಿವಾರಣೆಗೆ ಯೋಗ, ಧ್ಯಾನ ಮೊದಲಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

***

ಮುನ್ನೆಚ್ಚರಿಕೆ ವಹಿಸಬೇಕು

ಎದೆ ನೋವು, ಉಬ್ಬಸ, ಎಡಗೈಯಲ್ಲಿ ನೋವು, ಅತಿಯಾಗಿ ಸುಸ್ತಾಗುವುದು, ಬೆನ್ನು ನೋವು ಮೊದಲಾದವು ಕಾಣಿಸಿಕೊಳ್ಳುವುದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಆಗ ಕೂಡಲೇ ವೈದ್ಯರನ್ನು ಕಾಣಬೇಕು. ಮುನ್ನೆಚ್ಚರಿಕೆ ವಹಿಸಬೇಕು.

–ಡಾ.ಸುರೇಶ ಪಟ್ಟೇದ, ಕೆಎಲ್‌ಇ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT