ಮಂಗಳವಾರ, ಜೂನ್ 22, 2021
23 °C
ಹೋರಾಟಗಾರ ಬಾಬಾಗೌಡ ಪಾಟೀಲ ಯುಗಾಂತ್ಯ

ಕಳಚಿತು ರೈತ ಪರ ಗಟ್ಟಿ ಧ್ವನಿ: ಹೋರಾಟಗಾರ ಬಾಬಾಗೌಡ ಪಾಟೀಲ ಯುಗಾಂತ್ಯ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಮಾಸಿದ ಧೋತರ, ಅಂಗಿ, ಹೆಗಲ ಮೇಲೊಂದು ಟವೆಲ್. ಈ ರೂಪಕವೊಂದು ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ಹೋದರೆ, ಮೊದಲು ಕಚೇರಿ ಬಾಗಿಲಲ್ಲಿ ಚಪ್ಪಲಿ ಬಿಡಬೇಕಿತ್ತು. ಎರಡೂ ಕೈಗಳನ್ನೆತ್ತಿ ಅಲ್ಲಿ ಕುಳಿತಿರುವ ನೌಕರನೊ ಅಥವಾ ಸಿಪಾಯಿಗೆ ಕೈ ಮುಗಿದು ಒಳಗೆ ಹೋಗಬೇಕಿತ್ತು.

ಸ್ವಾತಂತ್ರ್ಯಾನಂತರ ಸಾರ್ವಜನಿಕರ ಸೇವೆಗೆಂದೇ ಇರುವ ಸರ್ಕಾರಿ ಕಚೇರಿಯೊಳಗೆ ಹೋಗಬೇಕೆಂದರೆ ರೈತ ಹೀಗಲ್ಲಿ ನಡೆದುಕೊಳ್ಳಬೇಕಿತ್ತು. ಅನ್ನದಾತನಿಗೆ ಹಾಕಿದ ಅಲಿಖಿತ ನಿಯಮವೂ ಇದಾಗಿತ್ತು! ದೇಶಕ್ಕೆ ಅನ್ನ ಹಾಕುವ ರೈತನ ಈ ಚಿತ್ರಣ ಸಂಪೂರ್ಣ ಬದಲಾಗಿದ್ದು 80ರ ದಶಕದಲ್ಲಿ. ಅನ್ನದಾತನಲ್ಲಿ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ತುಂಬಿದವರು ರೈತಪರ ಹೋರಾಟಗಾರರಾದ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಎನ್.ಡಿ. ಸುಂದರೇಶ್ ಮೊದಲಾದ ನಾಯಕರು.

ರೈತರ ಸಮಸ್ಯೆಗಳ ವಿರುದ್ಧ ಗಟ್ಟಿ ಧ್ವನಿಯೆತ್ತಿ ಆಳುವ ಸರ್ಕಾರಗಳ ಕಿವಿ ಹಿಂಡಿದ್ದ ನಾಯಕರು ಇವರು. ಇವರ ವಾರಸುದಾರರಾಗಿ ಕೊನೆಯ ಕೊಂಡಿ ಎಂಬಂತೆ ಉಳಿದುಕೊಂಡಿದ್ದ ಬಾಬಾಗೌಡ ಪಾಟೀಲ ಅವರ ಯುಗವೂ ಅಂತ್ಯವಾಗಿದೆ. ಅನಾರೊಗ್ಯದಿಂದ ಅವರು ಶುಕ್ರವಾರ ಕೊನೆಯುಸಿರೆಳೆದರು.

ದೈತ್ಯ ಸಂಘಟಕ

ಉತ್ತರ ಕರ್ನಾಟಕದಲ್ಲಿ ರೈತ ಚಳವಳಿಗೆ ದೈತ್ಯ ಶಕ್ತಿ ತುಂಬಿದವರು ಬಾಬಾಗೌಡ ಪಾಟೀಲ. ಮಧ್ಯವರ್ತಿಗಳ ಶೋಷಣೆ, ಬೆಳೆಗಳಿಗೆ ಸಮರ್ಪಕ ಬೆಲೆ ಇಲ್ಲದಿರುವುದು, ಸರ್ಕಾರದ ಲೆವಿ ದಬ್ಬಾಳಿಕೆ, ಕಾಲುವೆಗಳಿಗೆ ನೀರು ಹರಿಸದೇ ಕಂದಾಯ ಕಟ್ಟುವುದು ಹೀಗೆ... ಸಮಸ್ಯೆಗಳ ಕುಲುಮೆಯನ್ನು ಬದುಕನ್ನೇ ಸುಟ್ಟುಕೊಂಡು ಹೈರಾಣವಾಗಿದ್ದ ಬಡಪಾಯಿ ರೈತನಿಗೆ ಮೇಟಿಯಾಗಿ ನಿಂತು ಧ್ವನಿ ಕೊಟ್ಟವರು ಬಾಬಾಗೌಡ ಪಾಟೀಲ.

ರೈತನ ಮೇಲೆ ಸವಾರಿ ಮಾಡುತ್ತಿದ್ದ ಸರ್ಕಾರದ ನೀತಿಗಳನ್ನು ಪ್ರಖರ ವಿಚಾರಗಳ ಮೂಲಕ ಜವಾರಿ ಮಾತುಗಳಲ್ಲಿ ಖಂಡಿಸುತ್ತ ಇಡೀ ರೈತ ಕುಲದಲ್ಲಿ ಜಾಗೃತಿಯ ಗಂಟೆ ಮೊಳಗಿಸಿದರು. ಪ್ರೊ.ಎಂ.ಡಿ. ನಂಜುಂಡ್ವಾಮಿ ಮತ್ತು ಬಾಬಾಗೌಡ ಅವರು ರೈತ ಚಳವಳಿಯ ಎರಡು ಚಕ್ರಗಳಂತಿದ್ದರು. ಕೂಗು ಹಾಕಿದರೆ ಸಾಕು, ಸರ್ಕಾರ ಗಡ, ಗಡ ನಡುಗುತ್ತಿದ್ದವು. ರೈತರ ಮೇಲೆ ಗೋಲಿಬಾರ್ ನಡೆಸಿದ ಅಪವಾದಕ್ಕೆ ಕಾರಣವಾಗಿದ್ದ ಗುಂಡೂರಾವ್ ಸರ್ಕಾರದ ಬದಲಾವಣೆಗೂ ಈ ಜೋಡೆತ್ತುಗಳು ಕಾರಣವಾಗಿದ್ದವು.

ಐತಿಹಾಸಿಕ ದಾಖಲೆ

ಒಂದು ಕರೆ ಕೊಟ್ಟರೆ ಸಾಕು, ಸಾವಿರಾರು ರೈತರು ಬೀದಿಗಿಳಿಯುತ್ತಿದ್ದರು. ಒಂದು ಚಳವಳಿಯ ಸಂದರ್ಭದಲ್ಲಿ ಒಂದೇ ದಿನ 35ಸಾವಿರ ರೈತರು ಬಂಧನವಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಇಷ್ಟು ಸಂಖ್ಯೆಯ ಜನ ಒಂದೇ ದಿನದಲ್ಲಿ ಬಂಧನವಾದ ಇತಿಹಾಸವಿಲ್ಲ ಎಂದು ಅಂದಿನ ಹಿರಿಯರು ಸ್ಮರಿಸುತ್ತಾರೆ.

ವಿಧಾನಸೌಧದ ಒಳಗೂ ರೈತರ ಬಲವಾದ ಧ್ವನಿ ಕೇಳಿಸಬೇಕು, ರೈತರೇ ಸರ್ಕಾರ ರಚಿಸಿದರೆ ಅವರ ಸಮಸ್ಯೆಗಳು ಇತ್ಯರ್ಥವಾಗಲು ಸಾಧ್ಯವೆಂದು ನಿಲುವು ತಾಳಿದ್ದ ರೈತ ಸಂಘಟನೆ ಪ್ರಮುಖರು 1989ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.

ಗೆದ್ದಿದ್ದವರು ಒಬ್ಬರೆ

ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಬಾಬಾಗೌಡ ಪಾಟೀಲರು ಕಣಕ್ಕಿಳಿದಿದ್ದರು. ರಾಜ್ಯದಾದ್ಯಂತ 150 ಸ್ಥಾನಗಳಲ್ಲಿ ಸಂಘದ ಅಭ್ಯರ್ಥಿಗಳಿದ್ದರು. ಆದರೆ, ಗೆಲುವು ಪಡೆದಿದ್ದು ಬಾಬಾಗೌಡ ಒಬ್ಬರೆ. ಎರಡೂ ಕ್ಷೇತ್ರಗಳಲ್ಲಿ ಅಧಿಕ ಮತಗಳನ್ನು ಪಡೆದು ಗೆದ್ದು ಬಂದಿದ್ದರು. ರೈತರೇ ರೊಟ್ಟಿಗಂಟು ಕಟ್ಟಿಕೊಂಡು, ಟ್ರ್ಯಾಕ್ಟರ್ ದಲ್ಲಿ ಸಂಚರಿಸಿ ಎರಡೂ ಕ್ಷೇತ್ರಗಳಲ್ಲಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದರು. ಸಂಘಟನೆ ಬಲಕ್ಕೆ ಘಟಾನುಘಟಿ ನಾಯಕರೇ ಅಂದಿನ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಆಯ್ಕೆಯಾಗಿ ಬಂದಿದ್ದರು.

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಪ್ರೊ.ಎ.ಡಿ.ಎನ್. ಅವರನ್ನು ಗೆಲ್ಲಿಸಿ ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿಸಿದ್ದರು. ಅಂತಹ ಪ್ರಭಾವಿ ಸಂಘಟನೆಗಾರ ಬಾಬಾಗೌಡ.

ಬದಲಾದ ಪರಿಸ್ಥಿತಿಯಿಂದಾಗಿ ಸಂಘಟನೆ ತೊರೆದು ಭಾರತೀಯ ಜನತಾ ಪಕ್ಷ ಸೇರಿದ್ದರು. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದರು. ವಾಜಪೇಯಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ರೈತರಿಗೆ, ಗ್ರಾಮೀಣ ಪ್ರದೇಶದವರಿಗೆ ಕೆಲವು ಮಹತ್ವದ ನೀತಿಗಳನ್ನು ರೂಪಿಸಿದರು.

ಮುಂದೆ ರಾಜಕೀಯ ಕ್ಷೇತ್ರ ಈ ಅದ್ಭತ ಮಾತುಗಾರನಿಗೆ ಒಲಿಯಲಿಲ್ಲ. ಅವರೂ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಒಗ್ಗಿಕೊಳ್ಳಲಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು. ಉತ್ತರಾಧಿಕಾರಿಯನ್ನು ಬಾಬಾಗೌಡರು ಬೆಳೆಸಲಿಲ್ಲ. ಅವರು ಬಿಟ್ಟ ಹೋದ ಸ್ಥಾನ ಹಾಗೇ ಇರಲಿದೆ. ರೈತ ಕುಲದಲ್ಲಿ ನೋವು ಮಡುಗಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು