ಸೋಮವಾರ, ಜೂನ್ 14, 2021
20 °C
ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ

ಲಾಕ್‌ಡೌನ್‌ ಹಿನ್ನೆಲೆ: ಬೆಳಗಾವಿ ಜಿಲ್ಲೆಯಾದ್ಯಂತ ‘ಬ್ಯಾರಿಕೇಡ್ ಕೋಟೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್–19 ಪರಿಷ್ಕೃತ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಪೊಲೀಸರು ವ್ಯಾಪಕ ಸಿದ್ಧತೆ ಮಾಡಿಕೊಂಡಿದ್ದಾರೆ. ರಸ್ತೆಗಳು, ವೃತ್ತಗಳು ಹಾಗೂ ಅಂತರ ಜಿಲ್ಲೆ ಮತ್ತು ಗಡಿಗಳಲ್ಲಿ ಬ್ಯಾರಿಕೇಡ್‌ ಕೋಟೆಗಳನ್ನು ನಿರ್ಮಿಸಿದ್ದು, ಅಗತ್ಯ ಸೇವೆಗಳಿಗಷ್ಟೆ ಸಂಚಾರಕ್ಕೆ ಅವಕಾಶ ಇರಲಿದೆ.

ಮುನ್ನಾ ದಿನವಾದ ಭಾನುವಾರ ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12ರವರೆಗೆ ಅವಕಾಶ ನೀಡಲಾಗಿತ್ತು. ಕರ್ಫ್ಯೂ ನಡುವೆಯೂ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ಮೇ 10ರಿಂದ ಲಾಕ್‌ಡೌನ್‌ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಕಟಿಸಿದ ಹಿನ್ನೆಲೆಯಲ್ಲಿ, ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದರು. ಈ ವೇಳೆ, ಅಂತರವನ್ನು ಮರೆತರು. ನಗರಪಾಲಿಕೆ ಮಾರ್ಷಲ್‌ಗಳು ಹಾಗೂ ಪೊಲೀಸರ ಸೂಚನೆಯನ್ನೂ ಲೆಕ್ಕಿಸದೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. 3ನೇ ರೈಲ್ವೆ ಗೇಟ್ ಸಮೀಪದ ಮಾರ್ಟ್‌ವೊಂದರಲ್ಲಿ ಸಾಮಗ್ರಿಗಳ ಖರೀದಿಗೆ ಬಂದಿದ್ದ ಜನರು, ಅಂತರ ಕಾಪಾಡಿಕೊಂಡು ಸರದಿ ಸಾಲಿನಲ್ಲಿ ನಿಂತಿದ್ದರು. ಮಾರ್ಟ್‌ನಿಂದ ರೈಲ್ವೆ ಟ್ರ್ಯಾಕ್‌ ಗೇಟ್‌ವರೆಗೂ ಸಾಲು ಕಂಡುಬಂದಿದ್ದು ವಿಶೇಷವಾಗಿತ್ತು!

ರಾಣಿ ಚನ್ನಮ್ಮ ವೃತ್ತದಲ್ಲಿ ಬಹಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದುದ್ದನ್ನು ಗಮನಿಸಿದ ಪೊಲೀಸರು, ಕೆಲವು ದ್ವಿಚಕ್ರವಾಹನಗಳ ಸವಾರರನ್ನು ತಡೆದು ವಿಚಾರಿಸಿದರು. ಅನಗತ್ಯವಾಗಿ ರಸ್ತೆಗಿಳಿದಿದ್ದವರಿಗೆ ದಂಡ ವಿಧಿಸುವಂತೆ ಹಾಗೂ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದರು. ಮಧ್ಯಾಹ್ನ 12ರವರೆಗೂ ಬಹುತೇಕ ರಸ್ತೆಗಳಲ್ಲಿ ವಾಹನಗಳು ಕಂಡುಬಂದವು. ಬಳಿಕ ನಗರವು ಬಹುತೇಕ ಸ್ತಬ್ಧವಾಯಿತು.

ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

‘ಸೋಂಕು ಹರಡುವಿಕೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮೇ 10ರ ರಾತ್ರಿ 9 ಗಂಟೆಯಿಂದ ಮೇ 24ರ ಬೆಳಿಗ್ಗೆ 6ರವರೆಗೆ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

‘ಒಂದು ವೇಳೆ ವಿಧಿಸಿದ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಅಥವಾ ಯಾವುದೇ ಕ್ರಮಗಳನ್ನು ಅನುಷ್ಠಾನಗೊಳಿಸದೆ ಇದ್ದಲ್ಲಿ ಅಂಥವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರ ಸೆಕ್ಷನ್ 51ರಿಂದ 60ರ ಉಪಬಂಧಗಳು ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 108ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯ ಆಗಬಹುದಾದ ಇತರ ಕಾನೂನು ಹಾಗೂ ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಬೆಳಿಗ್ಗೆ 10ರ ನಂತರ ಅವಕಾಶವಿಲ್ಲ’

‘ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಈ ವೇಳೆ ಯಾರೂ ದ್ವಿಚಕ್ರವಾಹನ, ನಾಲ್ಕು ಚಕ್ರದ ವಾಹನ ಉಪಯೋಗಿಸಿ ಮಾರುಕಟ್ಟೆಗೆ ಬರುವಂತಿಲ್ಲ. ತಳ್ಳು ಗಾಡಿಯಲ್ಲಿ ಬರುವ ತರಕಾರಿ, ಹಣ್ಣು ಮಾರಲು ಅವಕಾಶ ನೀಡಲಾಗಿದ್ದು, ಅವರಿಂದಲೇ ಖರೀದಿಸಬಹುದು’ ಎಂದು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ತಿಳಿಸಿದ್ದಾರೆ.

‘ಬೆಳಿಗ್ಗೆ 10ರ ನಂತರ ಹೊರಗಡೆ ಬರಲು ಅವಕಾಶ ಇಲ್ಲ. ಆಂಬುಲೆನ್ಸ್, ತುರ್ತು ವಾಹನಗಳಿಗೆ ನಿಯಮಗಳನ್ನು ಅನುಸರಿಸಿ ಸಂಚಾರಕ್ಕೆ ಅವಕಾಶ ಕೊಡಲಾಗುವುದು. ವಿಮಾನನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಹೋಗುವವರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರೆ ಅವರಿಗೆ ಅನುವು ಮಾಡಿಕೊಡಲಾಗುವುದು. ಮಾರ್ಗಸೂಚಿ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ತ್ಯಾಗರಾಜನ್‌ ಹಾಗೂ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು