ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಿಎಂ ಬಸವರಾಜ ಬೊಮ್ಮಾಯಿ ಆಯ್ಕೆ ಬಗ್ಗೆ ರಂಭಾಪುರಿ ಶ್ರೀ ಏನಂದ್ರು?

ಸರ್ವಾನುಮತದ ಆಯ್ಕೆ: ಬಿಜೆಪಿಯ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿಯಾಗಿದೆ
Last Updated 28 ಜುಲೈ 2021, 10:25 IST
ಅಕ್ಷರ ಗಾತ್ರ

ಬೆಳಗಾವಿ: ‘ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಬಿಜೆಪಿಯ ಒಗ್ಗಟ್ಟು ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಪತ್ರಕರ್ತರೊಂದಿಗೆ ಬುಧವಾರ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಗಾದಿಯ ರೇಸ್‌ನಲ್ಲಿ ನಾಲ್ಕೈದು ಹೆಸರು ಕೇಳಿಬರುತ್ತಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಪದತ್ಯಾಗದಿಂದ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದವರು ಬೇಸರದಲ್ಲಿದ್ದರು. ಇದನ್ನು ಸರಿದೂಗಿಸಲು ಅದೇ ಸಮಾಜದ ನಾಯಕನನ್ನು ಆಯ್ಕೆ ಮಾಡಲಾಗಿದೆ. ಬಸವರಾಜ ಚಾಣಾಕ್ಷ ರಾಜಕಾರಣಿ. ದಕ್ಷ ಆಡಳಿತಗಾರ. ಯಾವುದೇ ಆರೋಪಗಳಿಲ್ಲ. ಬಿಜೆಪಿಯ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಾಮರ್ಥ್ಯವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದು ಕಾಣುತ್ತಿದೆ. ಅವರ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದೇವೆ. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬಸವರಾಜ ಕರೆ ಮಾಡಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದೇನೆ, ಆಶೀರ್ವದಿಸಿ ಎಂದರು. ಪೀಠದಿಂದ ಆಶೀರ್ವಾದ ಇದ್ದೇ ಇರುತ್ತದೆ ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.

‘ಮೈಸೂರು ಪ್ರಾಂತ್ಯದಲ್ಲಿ ಆಗುವ ಅಭಿವೃದ್ಧಿ ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎರಡು ವರ್ಷಗಳಿಂದ ವಿಧಾನಮಂಡಲ ಅಧಿವೇಶನ ನಡೆದಿಲ್ಲ. ಈ ಬಗ್ಗೆ ಗಮನಹರಿಸಲಿ. ರಾಜಧಾನಿ ಬೆಂಗಳೂರಿನಲ್ಲಿರುವ ಪ್ರಮುಖ ಕಾರ್ಯಾಲಯಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಇದರಿಂದ ಈ ಭಾಗದ ಅಭಿವೃದ್ಧಿಗೆ ಶಕ್ತಿ‌ ಬರುತ್ತೆ. ಇದರತ್ತ ಹೊಸ ಮುಖ್ಯಮಂತ್ರಿ ಹೆಚ್ಚಿನ ಲಕ್ಷ್ಯ ವಹಿಸಲಿ’ ಎಂದು ಆಶಿಸಿದರು.

‘ರಾಜ್ಯದಲ್ಲಿ ಪ್ರಸ್ತುತ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಅದಕ್ಕೆ ವೇಗ ನೀಡಬೇಕು. ಈ ಭಾಗದ ರೈತ ಸಮುದಾಯಕ್ಕೆ ಒಳ್ಳೆಯದಾಗಲು ನೀರಾವರಿ ಯೋಜನೆಗಳಿಗೆ ಒತ್ತು ಕೊಡಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಜಾತಿ, ಮತ, ವರ್ಗಗಳನ್ನು ಮರೆತು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಈವರೆಗೂ ಬಿಜೆಪಿ ಗುಂಪುಗಳಾಗಿದ್ದವು. ಇನ್ಮುಂದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿ. ಬಸವರಾಜ ಅವರಿಗೆ ನಮ್ಮ ಮಾರ್ಗದರ್ಶನ ಸದಾ ಇರುತ್ತದೆ. ಯಡಿಯೂರಪ್ಪ ಅವರ ದೂರದೃಷ್ಟಿಯಿಂದ ಸಂಕಲ್ಪ ಮಾಡಿರುವ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕೆಲಸ ಮಾಡಲಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT