ಸೋಮವಾರ, ಆಗಸ್ಟ್ 2, 2021
26 °C
ತ್ಯಾಜ್ಯವನ್ನು ‘ಸಂಪನ್ಮೂಲ’ವಾಗಿಸಲು ಕ್ರಮ

ಖಾನಾಪುರ | ಹಸಿರು ಪಂಚಾಯಿತಿಯಾದ ‘ಬೀಡಿ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮ ಪಂಚಾಯಿತಿ ಆವರಣ ಮಾದರಿಯಾಗಿ ರೂಪುಗೊಂಡಿದ್ದು, ಹಸಿರಿನಿಂದ ನಳನಳಿಸುತ್ತಿದೆ.

ಪರಿಸರ ಸ್ನೇಹಿಯಾದ ಕ್ರಮಗಳನ್ನು ಕೈಗೊಂಡ ಪರಿಣಾಮ ‘ಹಸಿರು ಪಂಚಾಯಿತಿ’ಯಾಗಿ ಕಂಗೊಳಿಸುತ್ತಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಪಂಚಾಯಿತಿಗೆ ಆಸ್ತಿ ನಿರ್ಮಾಣ ಮಾಡಲಾಗಿದೆ. ಕೋವಿಡ್–19 ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಅಂತರ ಕಾಯ್ದುಕೊಂಡು ನಿರ್ವಹಿಸಿ, ದುಡಿಯುವ ಕೈಗಳಿಗೆ ಕೆಲಸ ಕೊಡಲಾಗಿದೆ. ಪಂಚಾಯಿತಿಯ ಸ್ವಂತ ಅನುದಾನ ಬಳಸಿಕೊಂಡು ಪ್ರಗತಿಯತ್ತ ಹೆಜ್ಜೆ ಇಟ್ಟಿರುವುದು ಇಲ್ಲಿನ ವಿಶೇಷ.

ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಿ, ಆಡಿ, ಹಿಂಡಲಗಿ ಮತ್ತೆ ಗೋಲಿಹಳ್ಳಿ ಗ್ರಾಮಗಳು ಬರುತ್ತವೆ. ಪಂಚಾಯಿತಿ ವ್ಯಾಪ್ತಿಯಲ್ಲಿ 1,800 ಹಾಗೂ ಬೀಡಿ ಗ್ರಾಮವೊಂದರಲ್ಲೇ 1,300 ಕುಟುಂಬಗಳಿವೆ.

ಅಂದವಾದ ‘ಸ್ಥಳೀಯ ಸರ್ಕಾರ’: ಧ್ವಜ ಸ್ತಂಭ, ವಾಹನ ನಿಲ್ದಾಣ, ಕಚೇರಿ ಹಾಗೂ ಉದ್ಯಾನಕ್ಕೆ ಆದ ವೆಚ್ಚ ₹ 4 ಲಕ್ಷವನ್ನು ಪಂಚಾಯಿತಿಯ ಸ್ವಂತ ಅನುದಾನದಿಂದ ಭರಿಸಲಾಗಿದೆ. ‘ಸ್ಥಳೀಯ ಸರ್ಕಾರ’ವಾದ ಕಚೇರಿ ಆವರಣವನ್ನು ಅಂದಗೊಳಿಸಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಸುಮಾರು 1,700 ಮಾನವ ದಿನಗಳನ್ನು ಸೃಜಿಸಿ ₹ 18.25 ಲಕ್ಷ ವೆಚ್ಚ ಮಾಡಲಾಗಿದೆ. ಅಂದರೆ, ಜನರಿಗೆ ಅಷ್ಟು ಕೆಲಸ ಕೊಡುವ ಕಾರ್ಯವಾಗಿದೆ. ಪೇವರ್ಸ್‌ ಅಳವಡಿಕೆಗೂ ‘ಖಾತ್ರಿ’ ಯೋಜನೆಯಲ್ಲಿ ₹ 5 ಲಕ್ಷ ಪಡೆಯಲಾಗಿದೆ.

‘ಕಟ್ಟಡದ ಕಾಮಗಾರಿ ಎರಡು ವರ್ಷಗಳ ಹಿಂದೆ ಶುರುವಾಗಿತ್ತು. ನಾನು ಪ್ರಭಾರ ವಹಿಸಿಕೊಂಡ ನಂತರ ಚುರುಕು ನೀಡಲಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಅಂತರ ಕಾಯ್ದುಕೊಂಡು ಪಂಚಾಯಿತಿ ಸಿಬ್ಬಂದಿಯನ್ನು ಬಳಸಿ ಉದ್ಯಾನ ಅಭಿವೃದ್ಧಿಪಡಿಸಿದೆವು. ಇದು ಜನರ ಗಮನಸೆಳೆಯುತ್ತಿದೆ. ಇತ್ತೀಚೆಗೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಉದ್ಘಾಟಿಸಿದರು. ಪಂಚಾಯಿತಿಯಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿದ ಗ್ರಾಮಸ್ಥರೂ ಅಭಿನಂದಿಸುತ್ತಿದ್ದಾರೆ’ ಎಂದು ಪಿಡಿಒ ಕೆ.ಎಸ್. ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಸ ವಿಂಗಡಣೆಗೆ ಬಕೆಟ್‌ ವಿತರಣೆ: ಗ್ರಾಮದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ‘ಸಂಪನ್ಮೂಲ’ವನ್ನಾಗಿ ಮಾಡುವುದಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ಕಸದ ಸಮಸ್ಯೆಯಿಂದ ಪಂಚಾಯಿತಿಯನ್ನು ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ 2ಸಾವಿರ ಬಕೆಟ್‌ಗಳನ್ನು ಮತ್ತು ₹ 5 ಲಕ್ಷ ವೆಚ್ಚದಲ್ಲಿ ವಾಹನ ಖರೀದಿಸಲಾಗಿದೆ. ನಗರಗಳಂತೆಯೂ ಇಲ್ಲಿಯೂ ಕೆಲವೇ ದಿನಗಳಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯ ಆರಂಭವಾಗಲಿದೆ.

‘ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಯೋಜನೆ ಇದಾಗಿದೆ. ₹ 35 ಲಕ್ಷ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಪಂಚಾಯಿತಿಯಿಂದ ಪ್ರತಿ ಮನೆಗೆ ತಲಾ 2 ಬಕೆಟ್‌ಗಳ (ನೀಲಿ ಹಾಗೂ ಹಸಿರು ಬಣ್ಣದವು) ವಿತರಣೆಗೆ ಚಾಲನೆ ನೀಡಲಾಗಿದೆ. ಜನರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಕೊಡುವಂತೆ ಜಾಗೃತಿ ಮೂಡಿಸಲಾಗಿದೆ. ಹಸಿ ಕಸದಿಂದ ಗೊಬ್ಬರ ತಯಾರಿಸಲು ಮತ್ತು ಒಣ ಕಸವನ್ನು ಮಾರಲು ಯೋಜಿಸಲಾಗಿದೆ. ಕುಟುಂಬ ಒಂದರಿಂದ ದಿನಕ್ಕೆ ಸರಾಸರಿ 150 ಗ್ರಾಂ. ಹಸಿಕಸ ಹಾಗೂ 350 ಗ್ರಾ. ಒಣ ಕಸ ಸೇರಿ 500 ಗ್ರಾಂ. ತ್ಯಾಜ್ಯ ಬರಬಹುದು ಎಂದು ನಿರೀಕ್ಷಿಸಲಾಗಿದೆ’ ಎಂದು ಪಿಡಿಒ ಮಾಹಿತಿ ನೀಡಿದರು.

‘ನಂದಗಡ ಗ್ರಾಮ ಪಂಚಾಯಿತಿಗೆ ಸೇರಿದ ಪಂಪ್‌ಹೌಸ್ ಕಟ್ಟಡ ಸದ್ಯ ಬಳಕೆ ಆಗುತ್ತಿರಲಿಲ್ಲ. ಅದನ್ನು ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕವಾಗಿ ಸದ್ಯಕ್ಕೆ ಬಳಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ’ ಎನ್ನುತ್ತಾರೆ ಅವರು.

ಗ್ರಾಮ ಪಂಚಾಯಿತಿಯವರು ಮತ್ತು ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ಆವರಣ ಮುದ ನೀಡುತ್ತದೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು