ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಇನ್ನೂ ಆರಂಭವಾಗದ ‘ಎದೆಹಾಲು ಸಂಗ್ರಹ ಬ್ಯಾಂಕ್‌’

ಉದ್ಘಾಟನೆಯಾಗಿ ಎರಡೂ ತಿಂಗಳಾದರೂ ನೆರವೇರದ ಪ್ರಕ್ರಿಯೆ
Published 2 ಫೆಬ್ರುವರಿ 2024, 4:47 IST
Last Updated 2 ಫೆಬ್ರುವರಿ 2024, 4:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್‌) ಜಿಲ್ಲಾಸ್ಪತ್ರೆಯಲ್ಲಿ ‘ಅಮೃತಧಾರೆ’ ಎದೆಹಾಲು ಸಂಗ್ರಹ ಬ್ಯಾಂಕ್ ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ.

ಎದೆಹಾಲಿನ ಕೊರತೆಯಿಂದ ಬಳಲುತ್ತಿರುವ ಶಿಶುಗಳಿಗೆ ನೆರವಾಗಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಎದೆಹಾಲು ಸಂಗ್ರಹ ಬ್ಯಾಂಕ್‌ ಆರಂಭಿಸಲು ಮುಂದಾಗಿತ್ತು. ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಬಂದಿದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ 2023ರ ಡಿಸೆಂಬರ್ 13ರಂದು ಉದ್ಘಾಟಿಸಿದ್ದರು.

‘ಬೆಳಗಾವಿಯೊಂದಿಗೆ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್) ಎದೆಹಾಲು ಸಂಗ್ರಹ ಬ್ಯಾಂಕ್‌ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ. ಕಲಬುರಗಿಯಲ್ಲಿ ಶೀಘ್ರವೇ ಸ್ಥಳ ಅಂತಿಮಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಮಕ್ಕಳ ಆರೋಗ್ಯ) ಬೆಂಗಳೂರು ಉಪನಿರ್ದೇಶಕ ಡಾ.ಬಸವರಾಜ ದಬಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 20ರಷ್ಟು ಮಕ್ಕಳಿಗೆ ಕೊರತೆ:

‘ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 650ರಿಂದ 700 ಹೆರಿಗೆಯಾಗುತ್ತವೆ. ಈ ಪೈಕಿ ಶೇ 20  ಶಿಶುಗಳಿಗೆ ಎದೆಹಾಲಿನ ಕೊರತೆ ಆಗುತ್ತದೆ. ಅವುಗಳಿಗೆ ಪುಡಿ ಬಳಸಿ ಹಾಲು ಕೊಡುತ್ತೇವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಠ್ಠಲ ಶಿಂಧೆ ತಿಳಿಸಿದರು.

ಯಾರು ದಾನ ಮಾಡಬಹುದು?:

‘ಹೆರಿಗೆಯಾದ ನಂತರ ಎರಡು ವರ್ಷಗಳವರೆಗೆ ತಾಯಂದಿರರು ಎದೆಹಾಲು ದಾನ ಮಾಡಬಹುದು. ಆದರೆ, ಅವರಿಗೆ ಯಾವುದೇ ಸಾಂಕ್ರಾಮಿಕ ಕಾಯಿಲೆ ಇರಬಾರದು. ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಹಾಲನ್ನು ಪಾಶ್ಚೀಕರಿಸಿದ ನಂತರ, ಸಂರಕ್ಷಿಸಲಾಗುತ್ತದೆ. ಸಾಮಾನ್ಯ ಉಷ್ಣಾಂಶಕ್ಕೆ ತಂದು ಅದನ್ನು ಮಗುವಿಗೆ ಕುಡಿಸಲಾಗುತ್ತದೆ. ಸುಮಾರು 4ರಿಂದ 6 ತಿಂಗಳವರೆಗೆ ಎದೆಹಾಲು ಶೇಖರಿಸಿಡಬಹುದು’ ಎಂದರು.

‘ಖಾಸಗಿ ಬ್ಯಾಂಕ್‌ಗಳಲ್ಲಿ ಎದೆಹಾಲು ಖರೀದಿಗೆ ಹೆಚ್ಚಿನ ಹಣ ಪಾವತಿಸಬೇಕು. ಆದರೆ, ಜಿಲ್ಲಾಸ್ಪತ್ರೆಯಲ್ಲಿನ ಬ್ಯಾಂಕ್‌ನಲ್ಲಿ ಉಚಿತವಾಗಿ ಖರೀದಿಸಬಹುದು. ಇದರಿಂದ ​ಅವಧಿ ಪೂರ್ವ ಜನಿಸಿದ ಶಿಶುಗಳು, ಅನಾಥ ಶಿಶುಗಳು, ಅಸ್ವಸ್ಥ ಶಿಶುಗಳು, ತಾಯಂದಿರನ್ನು ಕಳೆದುಕೊಂಡ ಶಿಶುಗಳು, ಅನಾರೋಗ್ಯದಿಂದ ಬಳಲುತ್ತಿರುವ ಬಾಣಂತಿಯರ ಶಿಶುಗಳು ಮತ್ತು ಎದೆಹಾಲು ಉತ್ಪಾದನೆಯಾಗದ ತಾಯಂದಿರ ಶಿಶುಗಳಿಗೆ ಅನುಕೂಲವಾಗಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT