ಶುಕ್ರವಾರ, ಅಕ್ಟೋಬರ್ 30, 2020
26 °C

ನೊಬೆಲ್ ಪುರಸ್ಕೃತೆಯ ಕಂಪನಿ ಸಿಇಒ ಸ್ಥಾನದಲ್ಲಿ ಬೆಳಗಾವಿ ಪ್ರತಿಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: 2020ರ ರಸಾಯನ ವಿಜ್ಞಾನ ನೊಬೆಲ್‌ ಪುರಸ್ಕಾರಕ್ಕೆ ಪಾತ್ರವಾಗಿರುವ ಫ್ರಾನ್ಸ್‌ನ ಇಮಾನ್ಯುಯೆಲ್‌ ಶರ್‌ಪೆಂಟಿಯರ್ ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ‘ಸಿಆರ್‌ಐಎಸ್‌ಪಿಆರ್‌ ಥೆರಪಿಟಿಕ್ ಸಂಶೋಧನಾ ಕೇಂದ್ರ’ದ ಸಿಇಒ ಆಗಿ ಬೆಳಗಾವಿ ಮೂಲದ ಸಮರ್ಥ ಕುಲಕರ್ಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆನುವಂಶಿಕ ಕಾಯಿಲೆಗಳನ್ನು ಗುಣಪಡಿಸಲು ‘ಅಣುಗಳನ್ನು ಕತ್ತರಿಸುವ’ ವಿಧಾನದ ಅಭಿವೃದ್ಧಿಗಾಗಿ ಶರ್‌ಪೆಂಟಿಯರ್ ಅವರನ್ನು ಪುರಸ್ಕಾರಕ್ಕೆ ಆಯ್ಕೆ  ಮಾಡಲಾಗಿದೆ. ಅವರ ಸಂಸ್ಥೆಯ ಪ್ರಯೋಗಾಲಯದಲ್ಲಿ ಸಮರ್ಥ 2015ರಿಂದ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಸಿಬಿಒ (ಚೀಫ್ ಬ್ಯಸಿನೆಸ್ ಅಧಿಕಾರಿ) ಆಗಿದ್ದ ನಂತರ ಸಿಇಒ ಆಗಿ ಬಡ್ತಿ ಪಡೆದಿದ್ದಾರೆ. ಸದ್ಯ ಅಮೆರಿಕದಲ್ಲಿದ್ದಾರೆ.

ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆ, ಜಿಎಸ್‌ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಖರಗ್‌ಪುರ್‌ ಐಐಟಿಯಿಂದ ಬಯೊಟೆಕ್ನಾಲಜಿ ವಿಷಯದಲ್ಲಿ ಬಿ.ಟೆಕ್‌. ಪದವಿ, ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಬಯೋಎಂಜಿನಿಯರಿಂಗ್ ಹಾಗೂ ನ್ಯಾನೊ ಟೆಕ್ನಾಲಜಿ ವಿಷಯದಲ್ಲಿ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಬಯೊಲಾಜಿಕಲ್ ಡ್ರಗ್ಸ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ.

‘ನೊಬೆಲ್ ಪುರಸ್ಕಾರಕ್ಕೆ ಪಾತ್ರವಾದ ಸಾಧಕಿಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಸಾಧಕಗೆ ಅಭಿನಂದನೆಗಳು’ ಎಂದು ಟ್ವಿಟರ್‌ನಲ್ಲಿ ಇಲ್ಲಿನ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಸಮರ್ಥ, ‘ನನ್ನನ್ನು ಅಭಿನಂದಿಸಿದ ಬೆಳಗಾವಿಯ ಎಲ್ಲರಿಗೂ ಧನ್ಯವಾದಗಳು. ಅಣುಗಳನ್ನು ಕತ್ತರಿಸುವ ತಂತ್ರಜ್ಞಾನದಿಂದ ಔಷಧಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಮತ್ತಷ್ಟು ಶ್ರಮಿಸುತ್ತೇವೆ’ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.