ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಪರಿಷತ್‌ ಸಭೆ: ಮಹತ್ವದ ನಿರ್ಣಯಗಳ ಅಂಗೀಕಾರ

ಪಾಲಿಕೆ ಸದಸ್ಯನ ಮೇಲೆ ಹಲ್ಲೆ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಬಿಜೆಪಿ ಪಾಳಯದ ಸದಸ್ಯರು
Published 30 ನವೆಂಬರ್ 2023, 0:30 IST
Last Updated 30 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆ ಸದಸ್ಯರನ್ನು ಅಕ್ರಮವಾಗಿ ಬಂಧಿಸಿದ ಪೊಲೀಸರ ಕೃತ್ಯ ತನಿಖೆ ಮಾಡಬೇಕು, ಗೊತ್ತುವಳಿ ಮೂಲಪ್ರತಿ ಕಳೆದ ಪಾಲಿಕೆ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು, ಪಾಲಿಕೆ ಕಾಮಗಾರಿಗಳಿಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕು ಎಂಬುದೂ ಸೇರಿದಂತೆ ಕೆಲವು ಮಹತ್ವದ ನಿರ್ಣಯಗಳನ್ನು ಬುಧವಾರ ನಡೆದ ಪರಿಷತ್‌ ಸಭೆಯಲ್ಲಿ ಅಂಗೀಕರಿಸಲಾಯಿತು.

ಮೇಯರ್ ಶೋಭಾ ಸೋಮನಾಚೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಸದಸ್ಯರ ಮೇಲಿನ ಹಲ್ಲೆ ವಿಚಾರ ಪ್ರತಿಧ್ವನಿಸಿತು.

‘ಭಾಗ್ಯ ನಗರದ ಮನೆಯೊಂದರ ಮೇಲೆ ಮೊಬೈಲ್‌ ಟವರ್‌ ಅಳವಡಿಸುವ ಸಂಬಂದ ಜವಳಕರ್ ಅವರು ಪ್ರಶ್ನೆ ಮಾಡಿದ್ದರು. ಜನರ ಪರವಾಗಿ ಮಾತನಾಡಿದ ಅವರ ಮೇಲೆ ಹಲ್ಲೆ ಮಾಡಲಾಯಿತು. ಈ ಘಟನೆಯಿಂದ ಚುನಾಯಿತ ಪ್ರತಿನಿಧಿಗಳಿಗೇ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ’ ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಕಿಡಿ ಕಾರಿದರು.

ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ, ಸದಸ್ಯೆ ಸಾರಿಕಾ ಪಾಟೀಲ ಮತ್ತಿತರರು ಕೂಡ ಈ ಅಭಿಪ್ರಾಯಕ್ಕೆ ಪ್ರತಿಧ್ವನಿಯಾದರು.

‘ರಮೇಶ ಪಾಟೀಲ ಎಂಬ ಆರೋಪಿ ಪಾಲಿಕೆ ಸದಸ್ಯರ ಮೇಲೆ ಹಲ್ಲೆ ಮಾಡಿದ. ಚಿಕಿತ್ಸೆಗೆ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಿಡುಗಡೆ ಆಗುವ ಮುನ್ನವೇ ಪೊಲೀಸರು ಬಂಧಿಸಿದರು. ಇದು ಅಕ್ರಮ’ ಎಂದು ಬಿಜೆಪಿ ಪಾಳಯದ ಎಲ್ಲ ಸದಸ್ಯರೂ ಖಂಡಿಸಿದರು.

ಪ್ರಕರಣದ ಸಮಗ್ರ ತನಿಖೆಗೆ ನಡೆಸಬೇಕು, ಅಕ್ರಮವಾಗಿ ಬಂಧಿಸಿದ ಟಿಳಕವಾಡಿ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಕ್ರಮ ವಹಿಸಬೇಕು ಎಂದು ರಾಜ್ಯ ಗೃಹ ಇಲಾಖೆಗೆ, ರಾಜ್ಯಪಾಲಕರಿಗೆ ಹಾಗೂ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುವುದಾಗಿ ಮೇಯರ್ ಶೋಭಾ ಸೋಮನಾಚೆ ಘೋಷಿಸಿದರು.

ಇದಕ್ಕೆ ಆಡಳಿತ ಗುಂ‍‍ಪಿನ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸಮ್ಮತಿಸಿದರು. ವಿರೋಧ ಪಕ್ಷವಾದ ಕಾಂಗ್ರೆಸ್‌ ಸದಸ್ಯರು ಏನೂ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾದರು.

‘2023–24ನೇ ಸಾಲಿನಲ್ಲಿ ಆಸ್ತಿಕರ ಪರಿಷ್ಕರಣೆ ಮಾಡುವಂತೆ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಆಯುಕ್ತ ಅದನ್ನು 2024–25ನೇ ಸಾಲಿಗೆ ಪರಿಷ್ಕರಣೆ ಮಾಡಲಾಗಿದೆ ಎಂದು ತಿದ್ದು, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನ ಪಾಲಿಸದ ಕಾರಣ ಪಾಲಿಕೆಯನ್ನು ಸೂಪರ್‌ಸೀಡ್‌ ಮಾಡಲಾಗುವುದು ಎಂದು ಸರ್ಕಾರದಿಂದ ನೋಟಿಸ್‌ ಬಂದಿದೆ. ಈ ಪ್ರಮಾದ ಹೇಗಾಯಿತು ಎಂಬ ಬಗ್ಗೆ ಸಂಪೂರ್ಣ ತನಿಖೆ ಮಾಡಿಸಬೇಕು’ ಎಂದು ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಪಾಸ್‌ ಮಾಡಲಾಯಿತು.

ಪರಿಹಾರ ಮೊತ್ತ ಹೆಚ್ಚಳ:

ಪಾಲಿಕೆ ವ್ಯಾಪ್ತಿಗೆ ಬರುವ ಹಲಗಾದಲ್ಲಿ ‘ಅಮೃತ್‌’ ಯೋಜನೆಯ ಅಡಿ ನಿರ್ಮಾಣವಾದ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ 19.09 ಎಕರೆ ಜಮೀನು ನೀಡಿರುವ ರೈತರಿಗೆ ಪರಿಹಾರ ಮೊತ್ತ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವ ನಿರ್ಣಯವನ್ನೂ ಮೇಯರ್‌ ಅಂಗೀಕರಿಸಿದರು.

‘70 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿದೆ. ಭೂಮಿ ನೀಡಿದ ರೈತರು ಹೆಚ್ಚಿನ ಪರಿಹಾರ ಕೋರಿ 2017ರಲ್ಲಿ ತಡೆಯಾಜ್ಞೆ ತಂದಿದ್ದರು. ನಂತರ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು. ಹಲಗಾ ಹಾಗೂ ಬೆಳಗಾವಿ ಭಾಗದ ರೈತರಿಗೆ ಒಟ್ಟು ₹ 2.55 ಕೋಟಿ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ರೈತರು ಪರಿಹಾರ ಪಡೆಯದಿದ್ದಕ್ಕೆ ಹಣ ವಾಪಸ್ ಕಳುಹಿಸಲಾಗಿದೆ. ಈ ಯೋಜನೆ ಬೆಳಗಾವಿ ಪಾಲಿಗೆ ಬಹಳ ಮಹತ್ವದ್ದಾಗಿದ್ದು, ಕೂಡಲೇ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಕೆಲಸ ಮುಗಿಸಲು ಅವಕಾಶ ಮಾಡಿಕೊಡಬೇಕು’ ಎಂದು ನಗರ ನೀರು ಸರಬರಾಜು ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ ಶಿರೂರ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಭಯ ಪಾಟೀಲ, ‘ಯಾವ ರೈತರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜಮೀನು ಸ್ವಾಧೀನಪಡಿಸಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಿತ್ತು. ಇದನ್ನೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಶಾಸಕ ಆಸೀಫ್‌ ಸೇಠ್‌ ಮಾತನಾಡಿ, ‘ಸಂಸ್ಕರಣಗೊಂಡ ನೀರನ್ನು ಕೈಗಾರಿಕೆ ಅಥವಾ ಕೃಷಿಗೆ ಬಳಸಲು ಸಾಧ್ಯವೇ ಎಂಬುದರ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು’ ಎಂದರು.

₹ 17 ಕೋಟಿ ಬಿಲ್‌ ಬಾಕಿ:

ಹೆಸ್ಕಾಂನಿಂದ ಮಹಾನಗರ ಪಾಲಿಕೆಗೆ ₹ 17 ಕೋಟಿ ಬಿಲ್‌ ಬಾಕಿ ಇದೆ. ಈ ಬಗ್ಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ತಿಳಿಸಿದರು.

‘ಈಗಾಗಲೇ ಎಂಟು ಸಲ ನಿಗಮದ ಕಚೇರಿಗೆ ಪತ್ರ ಬರೆಯಲಾಗಿದೆ. ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

2023-24ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಡಿ ಬಾಕಿ ಉಳಿದ ₹ 10.36 ಲಕ್ಷದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, 2018-19 ಹಾಗೂ 2019-20ನೇ ಸಾಲಿನ 14ನೇ ಹಣಕಾಸು ಆಯೋಗದಡಿ ಉಳಿತಾಯವಾದ ₹ 22 ಲಕ್ಷ ಅನುದಾನದ ಕ್ರಿಯಾಯೋಜನೆಗೂ ಅನುಮೋದನೆ ನೀಡಲಾಯಿತು.

ಉಪಮೇಯರ್ ರೇಷ್ಮಾ ಪಾಟೀಲ, ಆಯುಕ್ತ ಅಶೋಕ ದುಡಗುಂಟಿ ಇದ್ದರು.

ಬೆಳಗಾವಿಯಲ್ಲಿ ಬುಧವಾರ ನಡೆದ ಮಹಾನಗರ ಪಾಲಿಕೆ ಪರಿಷತ್‌ ಸಭೆಯಲ್ಲಿ ಬಿಜೆಪಿ ಸದಸ್ಯರ ಆರೋಪದ ವಿರುದ್ಧ ಕಿಡಿ ಕಾರಿದ ಶಾಸಕ ಆಸೀಫ್‌ ಸೇಟ್‌ ಹಾಗೂ ಕಾಂಗ್ರೆಸ್‌ ಸದಸ್ಯರು
ಬೆಳಗಾವಿಯಲ್ಲಿ ಬುಧವಾರ ನಡೆದ ಮಹಾನಗರ ಪಾಲಿಕೆ ಪರಿಷತ್‌ ಸಭೆಯಲ್ಲಿ ಬಿಜೆಪಿ ಸದಸ್ಯರ ಆರೋಪದ ವಿರುದ್ಧ ಕಿಡಿ ಕಾರಿದ ಶಾಸಕ ಆಸೀಫ್‌ ಸೇಟ್‌ ಹಾಗೂ ಕಾಂಗ್ರೆಸ್‌ ಸದಸ್ಯರು

18ನೇ ವಾರ್ಡ್‌ನಲ್ಲಿ ಹಂಚಿಕೆಯಾದ 51 ನಿವೇಶನಗಳ ಬಗ್ಗೆ ಮೂರು ತಿಂಗಳಿಂದ ಮಾಹಿತಿ ಕೇಳಿದರೆ ಪಾಲಿಕೆಯ ಅಧಿಕಾರಿಗಳು ಉತ್ತರಿಸಿಲ್ಲ. ಕಡತ ನಾಪತ್ತೆ ಮಾಡಿದ್ದಾರೆ

-ಶಾಹಿದ್‌ಖಾನ್‌ ಪಠಾಣ ಪಾಲಿಕೆ ಸದಸ್ಯ

ನಗರದಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣಗೊಂಡರೆ ಬಿಲ್ಡರ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಯಾವುದೇ ಆಮಿಷಕ್ಕೆ ಒಳಗಾಗದೇ ಕ್ರಮ ಜರುಗಿಸಬೇಕು

-ಅಜೀಮ್ ಪಟವೇಗಾರ ಪಾಲಿಕೆ ಸದಸ್ಯ

ಹಲ್ಲೆ ಖಂಡನೀಯ: ಶಾಸಕ

‘ಪಾಲಿಕೆ ಸದಸ್ಯ ಜವಳಕರ ಅವರ ಮೇಲೆ ನಡೆದ ಹಲ್ಲೆಯನ್ನು ಕಟುವಾಗಿ ಖಂಡಿಸುತ್ತೇನೆ. ಅಲ್ಲದೇ ಟಿಳಕವಾಡಿ ಇನ್‌ಸ್ಪೆಕ್ಟರ್ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಜವಳಕರ ಬಂಧನ ಬಗ್ಗೆ ನಮ್ಮ ತಕರಾರು ಇಲ್ಲ. ಚಿಕಿತ್ಸೆ ಪಡೆಯುವಾಗಲೇ ವೈದ್ಯರ ಮೇಲೆ ಒತ್ತಡ ಹಾಕಿ ಕಾನೂನು ಬಾಹಿರವಾಗಿ ಬಂಧಿಸಿದ್ದಕ್ಕೆ ನಮ್ಮ ವಿರೋಧವಿದೆ’ ಎಂದು ಶಾಸಕ ಅಭಯ ಪಾಟೀಲ ಕಿಡಿ ಕಾರಿದರು. ‘ನಗರ ಪೊಲೀಸ್ ಕಮೀಷನರ್ ಅವರು ನಿಷ್ಪಕ್ಷಪಾತ ತನಿಖೆ ನಡೆಸುವ ಬದಲು ಡಿಸ್ಚಾರ್ಜ್ ಕಾರ್ಡ್ ಇದೆ ಎಂದು ಹೇಳುತ್ತಿದ್ದಾರೆ. ಆಸ್ಪತ್ರೆ ನಿಯಮ ಉಲ್ಲಂಘಿಸಿ ಬಂಧಿಸಿರುವ ಬಗ್ಗೆ ಆಸ್ಪತ್ರೆಯವರೇ ದೂರು ಕೊಟ್ಟಿದ್ದಾರೆ. ಇದನ್ನು ಕೂಲಂಕಷವಾಗಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು’ ಎಂದು ಆಗ್ರಹಿಸಿದರು. ಶಾಸಕ ಆಸೀಫ್‌ ಸೇಠ್‌ ಕೂಡ ಪಾಲಿಕೆ ಸದಸ್ಯರ ಮೇಲಿನ ಹಲ್ಲೆ ಖಂಡನೀಯ ಎಂದರು. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಸಿಐಡಿ ಸಿಒಡಿ ತನಿಖೆ ಆಗಲಿ ಎಂದೂ ಆಗ್ರಹಿಸಿದರು.

ಕಟ್ಟಡ ಪರವಾನಗಿ: ತೀವ್ರ ವಿರೋಧ

‘32ನೇ ವಾರ್ಡಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಹಾಗೂ ಪೂರ್ಣಗೊಂಡ ಪ್ರಮಾಣ ಪತ್ರವನ್ನು ನನ್ನ ಗಮನಕ್ಕೆ ಬರದೇ ನೀಡಬಾರದು’ ಎಂದು ಆಡಳಿತ ಪಕ್ಷದ ಸದಸ್ಯ ಸಂದೀಪ ಜೀರಗ್ಯಾಳ ಸಲ್ಲಿಸಿದ ಅರ್ಜಿಯ ಬಗ್ಗೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಬಿಜೆಪಿ ಸದಸ್ಯರೆಲ್ಲರೂ ಜೀರಗ್ಯಾಳ ಅವರ ಪರವಾಗಿ ನಿಂತರು. ‘ಜೀರಗ್ಯಾಳ ಅವರು ನೀಡಿದ ಅರ್ಜಿ ಕಾನೂನು ಬಾಹಿರವಾಗಿದೆ. ಬೈಲಾದಲ್ಲಿ ಇಂಥ ನಿಯಮವಿಲ್ಲ. ಇದಕ್ಕೆ ಆಸ್ಪದವೂ ಇಲ್ಲ. ಒಬ್ಬರ ಮೇಲೊಬ್ಬರಿಗೆ ಸಂಶಯ ಮೂಡುವಂತೆ ಮಾಡಿದ ಈ ಅರ್ಜಿ ತಿರಸ್ಕರಿಸಬೇಕು’ ಎಂದು ಕಾಂಗ್ರೆಸ್ಸಿಗರು ಗಟ್ಟಿಯಾಗಿ ವಾದಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಆಸೀಫ್‌ ಸೇಠ್‌ ಈ ರೀತಿ ಪಾಲಿಕೆ ಸದಸ್ಯರ ಅನುಮತಿ ‍ಪಡೆಯುವ ನಿಯಮ ಇದೆಯೇ ಎಂಬುದರ ಬಗ್ಗೆ ಪಾಲಿಕೆಯ ಕಾನೂನು ಪರಿಣತರು ಸ್ಪಷ್ಟವಾದ ಉತ್ತರ ಹೇಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT