ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಸೌಹಾರ್ದದಿಂದ ಗಣೇಶೋತ್ಸವ ಆಚರಣೆಗೆ ಸಹಕರಿಸಿ: ಜಿಲ್ಲಾಧಿಕಾರಿ

Published 7 ಆಗಸ್ಟ್ 2024, 13:25 IST
Last Updated 7 ಆಗಸ್ಟ್ 2024, 13:25 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ಶಾಂತಿ, ಸೌಹಾರ್ದದಿಂದ ಗಣೇಶೋತ್ಸವ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ನಡೆದ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಣೇಶೋತ್ಸವ ಆಚರಣೆ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಕೊಡಲು ನಗರದ ಎಂಟು ಠಾಣೆಗಳಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗಿದೆ. ಯಾವುದೇ ಮಂಡಳದವರು ಪ್ರತಿಷ್ಠಾಪನೆಗೆ ಮುನ್ನ, ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಗಣೇಶನ ವೀಕ್ಷಣೆಗಾಗಿ ಮಂಟಪಕ್ಕೆ ಬರುವ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಬೇಕು. ಜನದಟ್ಟಣೆ ನಿಯಂತ್ರಣಕ್ಕಾಗಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಬೇಕು’ ಎಂದರು.

‘ಗಣೇಶನ ಮೂರ್ತಿಗಳ ವಿಸರ್ಜನೆಗಾಗಿ ನಗರದಲ್ಲಿರುವ ಎಲ್ಲ ಹೊಂಡಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ’ ಎಂದರು.

ಸಮರ್ಪಕವಾಗಿ ವಿದ್ಯುತ್‌ ಪೂರೈಸಿ: ‘ಸರ್ಕಾರಿ ಮಾರ್ಗಸೂಚಿ ಪ್ರಕಾರವೇ ನಗರದಲ್ಲಿ ಪ್ರತಿವರ್ಷ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಉತ್ಸವದ ಸಮಯದಲ್ಲಿ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ಹಾಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಗಣೇಶನ ಮೂರ್ತಿಗಳ ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆಬದಿಯ ಮರಗಳ ಕೊಂಬೆ ಕತ್ತರಿಸಬೇಕು’ ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳು ಒತ್ತಾಯಿಸಿದರು.

‘ನಗರದಲ್ಲಿ 11 ದಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಪ್ರತಿಷ್ಠಾಪನೆಗೊಂಡ 5 ದಿನಗಳ ನಂತರ ವೀಕ್ಷಣೆಗೆ ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಜನರು ಆಗಮಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೋಷನ್‌, ‘ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಮಂಡಳಗಳು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣವೇ ಸ್ಪಂದಿಸಬೇಕು’ ಎಂದು ಸೂಚಿಸಿದರು.

ನಗರ ಪೊಲೀಸ್‌ ಕಮಿಷನರ್ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ‘ಸಾರ್ವಜನಿಕ ಗಣೇಶನ ಮೂರ್ತಿಗಳ ಎತ್ತರ ಸಾಧ್ಯವಾದಷ್ಟು ಕಡಿಮೆ ಇರಲಿ. ಇದರಿಂದ ಸಂಭವನೀಯ ಅನಾಹುತ ತಡೆಗಟ್ಟಬಹುದು’ ಎಂದರು.

‘ಡಾಲ್ಬಿ ಅಳವಡಿಸಿ ಸರ್ಕಾರಿ ಮಾರ್ಗಸೂಚಿ ಉಲ್ಲಂಘಿಸುವರ ವಿರುದ್ಧ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.

ನಗರ ‍ಪೊಲೀಸ್‌ ಉಪ ಆಯುಕ್ತ ರೋಹನ್ ಜಗದೀಶ, ‘ಗಣೇಶೋತ್ಸವದಲ್ಲಿ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಿದರೆ, ವಿದ್ಯುತ್‌ ತಂತಿ ತಗುಲಿ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ದೊಡ್ಡ ಬ್ಯಾನರ್‌ ಅಳವಡಿಸಬಾರದು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹಸಿರು ಪಟಾಕಿಯನ್ನೇ ಬಳಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಸಹಾಯಕ ಪೊಲೀಸ್‌ ಆಯುಕ್ತ ಸದಾಶಿವ ಕಟ್ಟಿಮನಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.

‘ಮೈಸೂರು ದಸರಾ ಮಾದರಿಯಲ್ಲಿ ಆಚರಿಸಿ’
‘ಬೆಳಗಾವಿಯಲ್ಲಿ ಶತಮಾನದಿಂದ ಸಡಗರದಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ದೇಶದಲ್ಲೇ ಎರಡನೇ ದೊಡ್ಡ ಉತ್ಸವ ಇಲ್ಲಿ ನೆರವೇರುತ್ತದೆ. ಈ ವರ್ಷ ರಾಜ್ಯ ಸರ್ಕಾರವು ಇದನ್ನು ಮೈಸೂರು ದಸರಾ ಮಾದರಿಯಲ್ಲಿ ಆಚರಿಸಬೇಕು. ಗಣೇಶೋತ್ಸವ ಮಂಟಪಗಳಿಗೆ ಪೊಲೀಸ್ ಭದ್ರತೆ ಒದಗಿಸಬೇಕು. ಗಣೇಶನ ವೀಕ್ಷಣೆಗೆ ಬರುವ ಸಾವಿರಾರು ಜನರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳದವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT