ಶುಕ್ರವಾರ, ಮೇ 20, 2022
22 °C
ಸೋಲಿನ ಬಗ್ಗೆ ಆಂತರಿಕ ವಿಚಾರಣೆ: ಯಡಿಯೂರಪ್ಪ

ವಿಧಾನಪರಿಷತ್‌ ಚುನಾವಣೆ: ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಬೆಳಗಾವಿ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಧಾನಪರಿಷತ್‌ ಚುನಾವಣೆಯಲ್ಲಿ ಬೆಳಗಾವಿ ದ್ವಿಸದಸ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಸೋಲು ಕಮಲಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ಕವಟಗಿಮಠ ಸೋತಿದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಗೆಲುವು ಕಂಡಿದ್ದಾರೆ. ಕವಟಗಿಮಠ‌ ಸೋಲಿನಲ್ಲಿ ಜಾರಕಿಹೊಳಿ ಕುಟುಂಬದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಮಾತ್ರವಲ್ಲದೆ, ಪಕ್ಷದ ಇತರ ಶಾಸಕರು ಮತ್ತು ಸಂಸದರ ಪಾತ್ರ ಇರುವ ಬಗ್ಗೆಯೂ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ.

ಮಂಗಳವಾರ ರಾತ್ರಿಯೇ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಯಡಿಯೂರಪ್ಪ, ಕವಟಗಿಮಠ ಅವರ ಸೋಲಿನ ಬಗ್ಗೆ ಆಂತರಿಕವಾಗಿ ವಿಚಾರಣೆ ನಡೆಸಿ ಮುಖ್ಯಮಂತ್ರಿಯರವರೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

‘ಈ ಕ್ಷೇತ್ರದಲ್ಲಿ ಇಷ್ಟೊಂದು ಶಾಸಕರು, ಸಂಸದರು ಮತ್ತು ಮಂತ್ರಿಗಳೂ ಇದ್ದರೂ ಪಕ್ಷದ ಅಭ್ಯರ್ಥಿ ಸೋಲಲು ಕಾರಣಗಳೇನು ಎಂಬುದನ್ನು ಕಂಡುಕೊಳ್ಳಬೇಕಿದೆ. ಈ ವಿಚಾರವಾಗಿ ಬೊಮ್ಮಾಯಿ ನನ್ನ ಜತೆ ಮಾತನಾಡಿದ್ದಾರೆ. ಸಮಗ್ರ ವಿಚಾರಣೆ ನಡೆಸಿ ವಾಸ್ತವಿಕ ಸ್ಥಿತಿ ಏನೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಯಾರು ಯಾರು ಸಹಕಾರ ಕೊಟ್ಟಿಲ್ಲ ಎಂಬುದನ್ನು ಪತ್ತೆ ಮಾಡುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

ಕಾರ್ಯಕರ್ತರು ಉತ್ತರ ಕೊಟ್ಟಿದ್ದಾರೆ: ‘ಚುನಾವಣೆ ಎಂದ ಮೇಲೆ ತಂತ್ರ, ಪ್ರತಿತಂತ್ರ ಸಹಜ. ನಾವು ಕೂಡ ಗೆಲುವಿಗಾಗಿ ರಣತಂತ್ರ ರೂಪಿಸಿದ್ದೆವು. ನಮ್ಮ ನಾಯಕರೆಲ್ಲರೂ ಜೊತೆಯಾಗಿ ನಿಂತಿದ್ದರು. ಆ ಮೂಲಕ, ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಕಾರ್ಯಕರ್ತರು ಯಾರಿಗೆ ಉತ್ತರ ಕೊಡಬೇಕಾಗಿತ್ತೋ ಅವರಿಗೆ ಕೊಟ್ಟಿದ್ದಾರೆ’ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿ ಅವರನ್ನು ಉದ್ದೇಶಿಸಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಕುಟುಕಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಗೆದ್ದ ಸಹೋದರ ಚನ್ನರಾಜ ಹಟ್ಟಿಹೊಳಿ ಜೊತೆ ಸುವರ್ಣ ವಿಧಾನಸೌಧಕ್ಕೆ ಬಂದ ಅವರು, ‘ಯಾರನ್ನೋ ಸೋಲಿಸಬೇಕೆಂದು ನಾವು ಸ್ಪರ್ಧೆ ಮಾಡಿರಲಿಲ್ಲ. ಒಗ್ಗಟ್ಟಿನಿಂದ ಕೆಲಸ‌ ಮಾಡಿದ್ದೇವೆ. ಹೀಗಾಗಿ ಗೆದ್ದಿದ್ದೇವೆ’ ಎಂದರು.

‘ಮೂರು ದಿನಗಳಲ್ಲಿ ಚಿತ್ರಣ ಬದಲಾಯಿತು’
ಬಿಜೆಪಿ ಅಭ್ಯರ್ಥಿ ಸೋಲಿನ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಮಾತನಾಡುತ್ತೇನೆ. ಮತದಾನಕ್ಕೂ ಮೊದಲಿನ ಕೊನೆಯ ಮೂರು–ನಾಲ್ಕು ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಚಿತ್ರಣವೇ ಬದಲಾಯಿತು. ಇದರಿಂದ ಸೋಲಾಯಿತು. ಈ ಬಗ್ಗೆ ವರಿಷ್ಠರ ಜತೆ ಮಾತನಾಡಿದ್ದೇನೆ’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ‌ ಹೇಳಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕಿತ್ತು.‌ ಆದರೆ ಸೋತಿದ್ದೇಕೆ ಎನ್ನುವುದನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌. ಲಖನ್ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ‌. ಹೀಗಾಗಿ ಚಿತ್ರಣ ಬದಲಾಯಿತು' ಎಂದರು.

'ಲಖನ್ ಬಿಜೆಪಿ ಸೇರುತ್ತಾರೆಯೋ,‌ ಪಕ್ಷೇತರರಾಗಿಯೇ ಉಳಿಯುತ್ತಾರೆಯೋ ಎನ್ನುವುದು ಅವರಿಗೆ ಬಿಟ್ಟ ವಿಚಾರ' ಎಂದರು.

ಬಿಜೆಪಿ ಸೋಲನ್ನು ತಲೆಗೆ ಕಟ್ಟುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, 'ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಬಿಡಿ. ನನ್ನ ವಿರುದ್ಧ ಸಂಚು ನಡೆದಿರುವ ಬಗ್ಗೆ ನನಗೆ ಖಚಿತ ಮಾಹಿತಿ‌ ಇಲ್ಲ. ಮಾಹಿತಿ‌‌ ಸಿಕ್ಕ ಬಳಿಕ ಮಾತನಾಡುತ್ತೇನೆ. ಸೋಲಿನ ಪಟ್ಟವನ್ನು ಲೀಡರ್ ಆದವರಿಗೇ ಕಟ್ಟುತ್ತಾರೆ' ಎಂದು ಹೇಳಿದರು.

'ಜಿಲ್ಲೆಯಲ್ಲಿ ನಾನು ಕಾಂಗ್ರೆಸ್ ಅನ್ನು ಸೋಲಿಸುತ್ತೇನೆ ಎಂದು ಹಟಕ್ಕೆ ಬಿದ್ದಿದ್ದುದು ನಿಜ. ಆದರೆ ಆ ಪಕ್ಷ ಗೆದ್ದಿದೆ. ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು