ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆ ಶುಕ್ರವಾರವೂ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು ತಮ್ಮ ಹಕ್ಕೊತ್ತಾಯ ಮಂಡಿಸಿದರು. ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ವಿವಿಧ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದರು.

ಸೇವಾಭದ್ರತೆ ಒದಗಿಸಿ

‘ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಮತ್ತು ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿದವರ ಸೇವೆ ಕಾಯಂಗೊಳಿಸಬೇಕು‘ ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವರು ಪ್ರತಿಭಟನೆ ಮಾಡಿದರು.

‘ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರೂ, ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕೆ ಈಚೆಗೆ ಸೇವೆಯಿಂದ ಬಿಡುಗಡೆಗೊಂಡಿರುವ ಅತಿಥಿ ಉಪನ್ಯಾಸಕರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹಲವು ಕಾಲೇಜುಗಳಿಗೆ ನಾವೇ ಆಧಾರವಾಗಿದ್ದೇವೆ. ಸರ್ಕಾರ ಸೂಚಿಸಿದ ಕೆಲಸ ಕಟ್ಟುನಿಟ್ಟಾಗಿ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ಹನುಮಂತಗೌಡ ಕಲ್ಮನಿ, ಶಶಿಕಲಾ ಜೋಳದ, ವಿ.ಡಿ.ಮುಳಗುಂದ ನೇತೃತ್ವ ವಹಿಸಿದ್ದರು.

ಸಾರ್ವಜನಿಕ ಶೌಚಗೃಹಗಳನ್ನು ದುರಸ್ತಿ ಮಾಡಿ

‘ಹುಬ್ಬಳ್ಳಿ–ಧಾರವಾಡದಲ್ಲಿ ಬಂದ್ ಆಗಿರುವ ಸಾರ್ವಜನಿಕರ ಶೌಚಗೃಹಗಳನ್ನು ದುರಸ್ತಿ ಮಾಡಿ, ನಿರ್ವಹಣೆಗಾಗಿ ಸಿಬ್ಬಂದಿ ನೇಮಿಸಬೇಕು’ ಎಂದು ಆಗ್ರಹಿಸಿ ಅಕ್ಕಾ ಫೌಂಡೇಷನ್ ಟ್ರಸ್ಟ್ನವರು ಪ್ರತಿಭಟಿಸಿದರು.

‘ಬೆಳಗಾವಿ ಜಿಲ್ಲೆ ವಿಭಜಿಸಿ, ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕು’ ಎಂದೂ ಒತ್ತಾಯಿಸಿದರು.

ಎರಡೂವರೆ ಎಕರೆ ಜಮೀನು ಕೊಡಿ

‘ಪ್ರತಿ ಕೊರಗ ಕುಟುಂಬಕ್ಕೆ ಎರಡೂವರೆ ಎಕರೆ ಕೃಷಿಭೂಮಿ ನೀಡಿ, ಸರ್ಕಾರ ಪುನರ್ವಸತಿ ಕಲ್ಪಿಸಬೇಕು’ ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದವರು ಪ್ರತಿಭಟಿಸಿದರು.

‘ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದೇವೆ. ಸ್ವಾವಲಂಬಿಯಾಗಿ ಬದುಕು ಸಾಗಿಸಲು ಅನುಕೂಲವಾಗಲೆಂದು ಮಹಮ್ಮದ್ ಘೀರ್ ವರದಿಯಲ್ಲಿ ಉಲ್ಲೇಖಿಸಿದಂತೆ, ಪ್ರತಿ ಕೊರಗ ಕುಟುಂಬಕ್ಕೆ ಎರಡೂವರೆ ಎಕರೆ ಕೃಷಿಭೂಮಿ ನೀಡಬೇಕು’ ಎಂದು ಆಗ್ರಹಿಸಿದರು.

ನಿಗಮಕ್ಕೆ ಅನುದಾನ ಒದಗಿಸಿ

ಪಿಂಜಾರ/ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದವರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪಿಂಜಾರ ಸಮುದಾಯ ಹಿಂದುಳಿದಿದೆ. ರಾಜ್ಯದ ಒಟ್ಟಾರೆ ಮುಸ್ಲಿಮರಲ್ಲಿ ಶೇ 30ರಷ್ಟು ನಮ್ಮ ಸಮುದಾಯದವರೇ ಇದ್ದಾರೆ. ನಮ್ಮ ಕಲ್ಯಾಣಕ್ಕಾಗಿ ರಚಿಸಿದ ನಿಗಮಕ್ಕೆ ಅನುದಾನ ಕೊಡಬೇಕು. ಸಮುದಾಯದ ಸ್ಥಿತಿಗತಿ ಕುರಿತು ಅಭ್ಯಸಿಸಿ, ಅಗತ್ಯವಿರುವ ಯೋಜನೆಗಳನ್ನು ಸರ್ಕಾರದಿಂದ ರೂಪಿಸಲು ‘ನದಾಫ್/ಪಿಂಜಾರ ಅಧ್ಯಯನ ಪೀಠ‘ ಸ್ಥಾಪಿಸಬೇಕು. ಅಲ್ಪಸಂಖ್ಯಾತರು ಹಾಗೂ ಇತರೆ ವಸತಿ ಶಾಲೆಗಳಲ್ಲಿ ಶೇ 25ರಷ್ಟು ಸೀಟು ನಮಗೆ ನೀಡಬೇಕು ಎಂದು ಆಗ್ರಹಿಸಿದರು.

ಗೌರವಧನ ₹27 ಸಾವಿರಕ್ಕೆ ಹೆಚ್ಚಿಸಿ

ಏಳನೇ ವೇತನ ಆಯೋಗದ ಪ್ರಕಾರ, ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಆಯಾಗಳಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ₹17 ಸಾವಿರದಿಂದ ₹27 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದವರು ಧರಣಿ ಮಾಡಿದರು.

‘ಸರ್ಕಾರದಿಂದ ಏಕೆ ನಮ್ಮ ಮೇಲೆ ಸಿಟ್ಟು, ಹೊಟ್ಟೆಗಿಲ್ಲ ಹಿಟ್ಟು’ ಎಂದು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ‘ಶಾಲಾ ಶಿಕ್ಷಣ ಇಲಾಖೆ ನಮ್ಮ ಮೇಲೆ ಮಲತಾಯಿ ಧೋರಣೆ ತೋರುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಸೇವಾನಿವೃತ್ತಿ ಹೊಂದಿ ಆರು ವರ್ಷಗಳಾದರೂ ಪಿಂಚಣಿ ಸೌಲಭ್ಯ ನೀಡಿಲ್ಲ. ತ್ವರಿತವಾಗಿ ಅದನ್ನು ನೀಡುವ ವ್ಯವಸ್ಥೆಯಾಗಬೇಕು’ ಎಂದು ಒತ್ತಾಯಿಸಿದರು.

ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ

2006ರ ಪೂರ್ವದಲ್ಲಿ ಖಾಸಗಿ ಶಾಲೆ–ಕಾಲೇಜುಗಳಲ್ಲಿ ನೇಮಕಗೊಂಡ ಬೋಧಕರು, ಬೋಧಕೇತರ ಸಿಬ್ಬಂದಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಶಾಲೆ–ಕಾಲೇಜುಗಳ ಪಿಂಚಣಿವಂಚಿತ ನೌಕರರ ವೇದಿಕೆಯವರು ಪ್ರತಿಭಟಿಸಿದರು.

ಕಚೇರಿ ಮರುಸ್ಥಾಪಿಸಿ

ಸ್ಥಗಿತಗೊಂಡಿರುವ ಜೇನು ಕುರುಬ ಕಚೇರಿಯನ್ನು ಮರುಸ್ಥಾಪಿಸಿ, ನಮ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಜೇನು ಕುರುಬ ಅಭಿವೃದ್ಧಿ ಸಂಘದವರು ಪ್ರತಿಭಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.