ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ನೆರವಲ್ಲಿ ಹೊಸ ಕೆರೆಗಳು: ಜಿಲ್ಲಾ ಪಂಚಾಯ್ತಿಯಿಂದ ಮಹತ್ವದ ಕಾರ್ಯಕ್ರಮ

Last Updated 16 ಜುಲೈ 2021, 7:08 IST
ಅಕ್ಷರ ಗಾತ್ರ

ಬೆಳಗಾವಿ: ಈಗಿನ ಸಂದರ್ಭದಲ್ಲಿ ‘ನೀರ ನೆಮ್ಮದಿಯ ನಾಳೆ’ಗಳನ್ನು ರೂಪಿಸುವುದು ತುರ್ತು ಅಗತ್ಯವಾಗಿದೆ. ಮಳೆ ನೀರು ಹಿಡಿದಿಡುವ ಕಾರ್ಯವೂ ಅತ್ಯವಶ್ಯವೇ. ಈ ನಿಟ್ಟಿನಲ್ಲಿ ಮಹತ್ವದ ಯೋಜನೆಯನ್ನು ಜಿಲ್ಲಾ ಪಂಚಾಯ್ತಿಯು ಕೈಗೊಂಡಿದ್ದು, 2021–22ನೇ ಸಾಲಿನಲ್ಲಿ 247 ಹೊಸ ಕೆರಗಳ ನಿರ್ಮಾಣಕ್ಕೆ ಕ್ರಮ ವಹಿಸಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯ್ತಿಯಿಂದ ಯೋಜನೆ ರೂಪಿಸಿ ಆಯಾ ಗ್ರಾಮ ಪಂಚಾಯ್ತಿಗಳಿಗೆ ಜವಾಬ್ದಾರಿ ನೀಡಲಾಗಿದೆ.

ಅಲ್ಲಿನ ಅಕುಶಲ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕೆರೆಗಳನ್ನು ಕಟ್ಟುವ ಕಾರ್ಯವನ್ನು ನಡೆಸಲಾಗುತ್ತಿದೆ. ವಿಶೇಷವಾಗಿ ಅರಣ್ಯ ಪ್ರದೇಶದಲ್ಲಿರುವ ಅಥವಾ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಬಲ್ಲ ಸ್ಥಳಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದ ಆಯಾ ಗ್ರಾಮದವರಿಗೆ ಆಸ್ತಿ ನಿರ್ಮಾಣವಾದಂತೆಯೂ ಆಗಲಿದೆ. ಜೊತೆಗೆ, ಸರ್ಕಾರದ ‘ಕ್ಯಾಚ್ ದಿ ರೇನ್’ ಕಾರ್ಯಕ್ರಮಕ್ಕೂ ಮತ್ತು ಮಳೆ ನೀರನ್ನು ಹಿಡಿದಿಡುವ ಕಾರ್ಯಕ್ಕೂ ಪೂರಕವಾಗಿದೆ.

ಕಂಗೊಳಿಸುತ್ತಿವೆ:

ಪ್ರಸಕ್ತ ಸಾಲಿನ ಮೂರು ತಿಂಗಳಲ್ಲೆ 54 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೋವಿಡ್ ಲಾಕ್‌ಡೌನ್‌ ಸಂಕಷ್ಟದಲ್ಲಿದ್ದ ಸ್ಥಳೀಯ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಂತಾಗಿದೆ. ಮಳೆಯ ನೀರು ಕೂಡ ಸಂಗ್ರಹವಾಗುತ್ತಿದ್ದು, ಹೊಸ ಕೆರೆಗಳು ಕಂಗೊಳಿಸುತ್ತಿವೆ. ಇದು ಆಯಾ ಗ್ರಾಮ ಪಂಚಾಯ್ತಿಯವರಿಗೆ ಹಾಗೂ ಕೆರೆ ಕಟ್ಟಲು ದುಡಿದವರಿಗೆ ಸಂತೃಪ್ತಿಯನ್ನು ತಂದುಕೊಟ್ಟಿದೆ.

ಜಿಲ್ಲಾ ಪಂಚಾಯ್ತಿಯಿಂದ ಕೈಗೊಂಡಿರುವ ಈ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆರೆ ನಿರ್ಮಾಣದ ವಿಷಯದಲ್ಲಿ ಗ್ರಾಮ ಪಂಚಾಯ್ತಿಗಳಿಗೇ ಅಧಿಕಾರ ಕೊಡಲಾಗಿದೆ. ಪಂಚಾಯ್ತಿಗೊಂದು ಹೊಸ ಕೆರೆ ನಿರ್ಮಾಣಕ್ಕೆ ಸೂಚಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಬಳಕೆಗೆ ಇರುವ ಅವಕಾಶ ಬಳಸಿಕೊಳ್ಳುವಂತೆ ತಿಳಿಸಲಾಗಿದೆ.

ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 43 ಹೊಸ ಕೆರೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಇದರಲ್ಲಿ 27 ಪೂರ್ಣಗೊಂಡಿವೆ. ಮಳೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಅವು ಭರ್ತಿಯಾಗಲಿವೆ ಎಂದು ಜಿ.ಪಂ. ಮೂಲಗಳು ಮಾಹಿತಿ ನೀಡಿವೆ.

ವ್ಯರ್ಥವಾಗದಂತೆ:

‘ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು, ಅದನ್ನು ಸದ್ಬಳಕೆ ಮಾಡಿಕೊಳ್ಳಲು ಹಾಗೂ ಇಂಗಿಸಲು ಹೊಸ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ. ಇದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಯೂ ಸಾಧ್ಯವಾಗಲಿದೆ. ಅಲ್ಲಲ್ಲಿ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್‌.

‘54 ಕೆರೆಗಳ ಕಾಮಗಾರಿ ಪೂರ್ಣಗೊಂಡಿವೆ. 151 ಕಾಮಗಾರಿ ಪ್ರಗತಿಯಲ್ಲಿವೆ. ಮಳೆ ನೀರು ಸದ್ಬಳಕೆಗಾಗಿ ರೈತರ ಜಮೀನಿನಲ್ಲಿ ಬದುಗಳ ನಿರ್ಮಾಣ, ಕೃಷಿ ಹೊಂಡ, ತೆರೆದ ಬಾವಿಗಳ ನಿರ್ಮಾಣವನ್ನೂ ಕೈಗೊಳ್ಳಲಾಗಿದೆ. ರೈತ ಕ್ರಿಯಾಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3,961 ಕೃಷಿ ಹೊಂಡ, 4,671 ಬದುಗಳು ಮತ್ತು 2,991 ತೆರೆದ ಬಾವಿಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಒಟ್ಟು 11,623ರಲ್ಲಿ 5,090 ಕಾಮಗಾರಿ ಪ್ರಾರಂಭವಾಗಿವೆ. 2,747 ಪೂರ್ಣಗೊಂಡಿವೆ’ ಎಂದು ಮಾಹಿತಿ ನೀಡಿದ್ದಾರೆ.

ಕೆರೆ ವಿವರ

ತಾಲ್ಲೂಕು;ಗುರಿ;ಪ್ರಗತಿ;ಪೂರ್ಣ

ಅಥಣಿ;9;7;0

ಬೆಳಗಾವಿ;43;15;27

ಬೈಲಹೊಂಗಲ;30;22;3

ಚಿಕ್ಕೋಡಿ;29;21;4

ಗೋಕಾಕ;8;4;0

ಹುಕ್ಕೇರಿ;14;12;2

ಕಾಗವಾಡ;0;0;0

ಖಾನಾಪುರ;34;17;5

ಕಿತ್ತೂರು;12;7;0

ಮೂಡಲಗಿ;5;3;1

ನಿಪ್ಪಾಣಿ;9;5;0

ರಾಮದುರ್ಗ;22;13;5

ರಾಯಬಾಗ;11;10;1

ಸವದತ್ತಿ;21;15;6

ಒಟ್ಟು;247;151;54

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT