ಬುಧವಾರ, ಆಗಸ್ಟ್ 17, 2022
30 °C
ಇನ್ನೊಂದು ತಿಂಗಳಲ್ಲಿ ಹುಲಿ ಸಫಾರಿ ಆರಂಭ: ಪಾಟೀಲ

ಬೆಳಗಾವಿ ಮೃಗಾಲಯಕ್ಕೆ ಬರಲಿವೆ ಸಿಂಹ, ಚಿರತೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿ ಸಮೀಪದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯಕ್ಕೆ ಹೆಚ್ಚಿನ ಪ್ರಾಣಿಗಳನ್ನು ತರಿಸಲು ಯೋಜಿಸಲಾಗಿದೆ. ಈ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಉದ್ದೇಶಿಸಲಾಗಿದೆ.‌

ಪ್ರಸ್ತುತ ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದರೂ ಮತ್ತು ವಿಶಾಲವಾದ ಪ್ರಶಾಂತ ವಾತಾವರಣ ಹೊಂದಿದ್ದರೂ ಸಂದರ್ಶಕರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಅಲ್ಲೀಗ ಕೆಲವು ಕೃಷ್ಣ ಮೃಗಗಳು, ಜಿಂಕೆಗಳು, ಕೊಂಡು ಕುರಿಗಳು, ಮೊಸಳೆಗಳು ಮತ್ತು ಒಂದಿಷ್ಟು ಪಕ್ಷಿಗಳು  ಮಾತ್ರವೇ ಇವೆ. ಇದರಿಂದಾಗಿ ಮೂರು ದಶಕಗಳೇ ಕಳೆದರೂ ಈ ಪ್ರಾಣಿ ಸಂಗ್ರಹಾಲಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ಸಾಧ್ಯವಾಗಿಲ್ಲ.

ವಾರಾಂತ್ಯದಲ್ಲಿ ಒಂದಷ್ಟು ಮಂದಿ ಕುಟುಂಬ ಸಮೇತ ಬಂದು ಅಲ್ಲಿನ ಉದ್ಯಾನದಲ್ಲಿ ಮಕ್ಕಳೊಂದಿಗೆ ಆಟವಾಡಿ ಕಾಲ ಕಳೆಯುತ್ತಾರೆ. ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ವರಮಾನ ಪ್ರಮಾಣ ಹೆಚ್ಚಾಗುತ್ತಿಲ್ಲ. ಇದರಿಂದಾಗಿ, ಅಭಿವೃದ್ಧಿ ಕಾರ್ಯಕ್ಕಾಗಿ ಅಧಿಕಾರಿಗಳು ಸರ್ಕಾರದ ಬಳಿ ಕೈಚಾಚುವುದು ತಪ್ಪಿಲ್ಲ.

ಮೆರುಗು ನೀಡಲು

ಈ ಪರಿಸ್ಥಿತಿ ತಪ್ಪಿಸಲು ಅಲ್ಲಿಗೆ 4 ಹುಲಿ, 4 ಕರಡಿ ಹಾಗೂ 4 ಚಿರತೆಗಳನ್ನು ಇಲ್ಲಿಗೆ ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಯೋಜಿಸಿದ್ದಾರೆ. ಸೊರಗಿರುವ ಮೃಗಾಲಯಕ್ಕೆ ಮೆರುಗು ನೀಡಲು ಮುಂದಾಗಿದ್ದಾರೆ.

‘ಇನ್ನೊಂದು ತಿಂಗಳಲ್ಲಿ ತಲಾ 4 ಹುಲಿ, ಕರಡಿ ಹಾಗೂ ಚಿರತೆಗಳನ್ನು ತರಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನುಮೋದನೆಯೂ  ಸಿಕ್ಕಿದೆ. ಜೋಡಿ ಸಿಂಹಗಳನ್ನು ತರಿಸುವುದಕ್ಕೂ ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿರಾಫೆಯನ್ನು ತರಲಾಗುವುದು. ಇದರಿಂದ ಮೈಸೂರು ಮೃಗಾಲಯದ ರೀತಿಯಲ್ಲಿ ಇಲ್ಲೂ ಆಕರ್ಷಣೆ ಹೆಚ್ಚಾಗಲಿದೆ. ಇದಕ್ಕಾಗಿ ಭಾರತೀಯ ಮೃಗಾಲಯದ ಪ್ರಾಧಿಕಾರದಿಂದ ಅನುಮೋದನೆ ದೊರೆತಿದೆ’ ಎಂದು ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ವಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲಿ ಸಫಾರಿ ಶೀಘ್ರ

‘ಮೃಗಾಲಯದಲ್ಲಿ ನಗರಪಾಲಿಕೆಯಿಂದ ₹ 2 ಕೋಟಿ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಅಲ್ಲಿ ಹುಲಿ ಸಫಾರಿ ಯೋಜನೆ ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ. ಮೊದಲ ಹಂತದಲ್ಲಿ ಆದಷ್ಟು ಬೇಗ ಎರಡು ಹುಲಿಗಳನ್ನು ತರಿಸಲಾಗುವುದು. ಮೃಗಾಲಯ ಪ್ರಾಧಿಕಾರದ ನಿಯಮದ ಅನುಸಾರ, 1.85 ಕಿ.ಮೀ. ಉದ್ದದ ಹಾಗೂ 8 ಅಡಿ ಎತ್ತರದ ಕಾಂಪೌಂಡ್‌ ನಿರ್ಮಿಸಲಾಗಿದೆ. ಒಟ್ಟು 34 ಹೆಕ್ಟೇರ್‌ ಪ್ರದೇಶದಲ್ಲಿ ಹುಲಿ ಸಫಾರಿಗೆ ವ್ಯವಸ್ಥೆ ಮಾಡಲಾಗುವುದು. ಕೋವಿಡ್ ಪರಿಸ್ಥಿತಿ ಎದುರಾಗದಿದ್ದಲ್ಲಿ ಈ ವೇಳೆಗಾಗಲೇ ಸಫಾರಿ ಆರಂಭವಾಗಿರುತ್ತಿತ್ತು’ ಎಂದು ಮಾಹಿತಿ ನೀಡಿದರು.

‘ಹುಲಿ ಸಫಾರಿಗಾಗಿ ಅಗತ್ಯವಾದ ಚೈನ್‌ಲಿಂಕ್ ಫೆನ್ಸಿಂಗ್ (ಬೇಲಿ) ನಿರ್ಮಿಸಲಾಗಿದೆ. ಹುಲಿಗಳನ್ನು ಅದರೊಳಗೆ ಬಿಡಲಾಗುವುದು. ಅವುಗಳನ್ನು ವೀಕ್ಷಣೆಗೆ ಸಂದರ್ಶಕರನ್ನು ಕರೆದೊಯ್ಯಲು 2 ಕಿ.ಮೀ. ಉದ್ದದ ಪಥ ನಿರ್ಮಿಸಲಾಗಿದೆ. ಸಂದರ್ಶಕರು ಅವುಗಳನ್ನು ವೀಕ್ಷಿಸುತ್ತಾ ಸಫಾರಿ ಮಾಡುವುದು ಯೋಜನೆಯ ಸಾರವಾಗಿದೆ. ಇನ್ನೊಂದು ತಿಂಗಳಲ್ಲಿ ಹುಲಿ ಸಫಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆಗ ಮೃಗಾಲಯದ ವರಮಾನವೂ ವೃದ್ಧಿಯಾಗಲಿದೆ’ ಎಂದು ಹೇಳಿದರು.

ಅನುದಾನಕ್ಕೆ ಬೇಡಿಕೆ

ಸದ್ಯ ಎದುರಾಗಿರುವ ಅನುದಾನದ ಕೊರತೆ ನಿವಾರಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಗರಪಾಲಿಕೆ, ಸ್ಮಾರ್ಟ್‌ ಸಿಟಿ ಯೋಜನೆ, ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಪ್ರವಾಸೋದ್ಯಮ ಸಮಿತಿಯಿಂದ ಅನುದಾನ ಒದಗಿಸುವಂತೆ ಕೇಳಿದ್ದಾರೆ. ಎರಡು ಎಕರೆ ಜಾಗದಲ್ಲಿ ಪಕ್ಷಿಗಳಿಗಾಗಿ ತಾಣ ಅಭಿವೃದ್ಧಿಪಡಿಸಿ, ಹೆಚ್ಚಿನ ಪಕ್ಷಿಗಳನ್ನು ತರಿಸುವ ಯೋಜನೆಯೂ ಇದೆ ಮೂಲಗಳು ತಿಳಿಸಿವೆ.

***

ಮೃಗಾಲಯ ಹೆಚ್ಚಿನ ಜನರನ್ನು ಆಕರ್ಷಿಸುವಂತಾದರೆ ವರಮಾನವೂ ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ

- ಬಸವರಾಜ ವಿ. ಪಾಟೀಲ, ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು