ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೈಲ್ವೆ ಸಿಬ್ಬಂದಿ ಕೊಲೆ ಮಾಡಿ ಪರಾರಿಯಾದವನ ರೇಖಾಚಿತ್ರ ಬಿಡುಗಡೆ

ಖಾನಾಪುರ ರೈಲ್ವೆ ನಿಲ್ದಾಣದಿಂದ ಪರಾರಿಯಾಗಿರುವ ಆರೋಪಿ: ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿ ಗುರುತು
Published 18 ಮೇ 2024, 7:46 IST
Last Updated 18 ಮೇ 2024, 7:46 IST
ಅಕ್ಷರ ಗಾತ್ರ

ಬೆಳಗಾವಿ: ‘ಚಲಿಸುತ್ತಿದ್ದ ರೈಲಿನಲ್ಲಿ ಚಾಕುವಿನಿಂದ ಇರಿದು ಒಬ್ಬ ಸಿಬ್ಬಂದಿಯನ್ನು ಕೊಲೆ ಮಾಡಿ, ನಾಲ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಪರಾರಿಯಾದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಸಿಬ್ಬಂದಿ ಆರೋಪಿಯನ್ನು ಗುರುತಿಸಿದ್ದು, ಆತನ ಮುಖದ ರೇಖಾಚಿತ್ರ ಕೂಡ ಸಿದ್ಧಪಡಿಸಲಾಗಿದೆ.

‘ಪುದುಚೇರಿ– ದಾದರ್ ಎಕ್ಸ್‌ಪ್ರೆಸ್‌ ರೈಲು ಗುರುವಾರ ಸಂಜೆ 4ರ ಸುಮಾರಿಗೆ ಖಾನಾಪುರ ತಾಲ್ಲೂಕಿನ ಲೋಂಡಾ ಬಳಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲು ಖಾನಾಪುರ ನಿಲ್ದಾಣಕ್ಕೆ ಬಂದಾಗ ಆರೋಪಿ ಪರಾರಿಯಾದ. ಎಸ್‌–8 ಬೋಗಿಯಿಂದ ಇಳಿದುಹೋಗಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾನಾಪುರದಿಂದ ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬುದರ ತನಿಖೆ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

‘ರೈಲಿನಲ್ಲಿ ಟಿಕೆಟ್‌ ಪರಿವೀಕ್ಷಕ (ಟಿಟಿಇ) ಅಶ್ರಫ್‌ ಕಿತ್ತೂರ ಟಿಕೆಟ್‌ ತಪಾಸಣೆ ಮಾಡುತ್ತಿದ್ದರು. ಆಗ ಮುಸುಕುಧಾರಿಯಾಯಾಗಿದ್ದ ಪ‍್ರಯಾಣಿಕ ಚಾಕುವಿನಿಂದ ಹಲ್ಲೆ ಮಾಡಿದ. ಟಿಟಿಇ ನೆರವಿಗೆ ಬಂದ ಆನ್‌ ಮೋಡ್‌ ಹೌಸ್‌ಕೀಪಿಂಗ್‌ ಸ್ಟಾಫ್‌ ದೇವ‌ರ್ಷಿ ವರ್ಮಾ (23) ಅವರ ಎದೆಗೆ ಚಾಕುವಿನಿಂದ ಇರಿದ. ದೇವರ್ಷಿ ವರ್ಮಾ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಟಿಟಿಇ ಸೇರಿ ನಾಲ್ವರು ಗಾಯಾಳುಗಳು ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಘಟನೆ ನಡೆದು ಎರಡು ದಿನ ಕಳೆದರೂ ಹಂತಕನ ಸುಳಿವು ಪತ್ತೆಯಾಗಿಲ್ಲ. ತನಿಖೆಗಾಗಿ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ (ಆರ್‌ಪಿಎಫ್‌), ಗ್ರೇಟರ್‌ ರೈಲ್ವೆ ಪೊಲೀಸ್‌ (ಜಿಆರ್‌ಪಿ) ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.

ಆರೋಪಿ ಮಾಹಿತಿ ನೀಡಲು ಮನವಿ

ಆರೋಪಿ 5 ಅಡಿ 3 ಇಂಚು ಎತ್ತರಿವಿದ್ದು 40ರಿಂದ 42 ವರ್ಷ ವಯಸ್ಸು ಇರಬಹುದು. ಕಪ್ಪು– ಬಿಳಿ ಮಿಶ್ರಿತ ತಲೆಗೂದಲು, ಸಾಧಾರಣ ಮೈಕಟ್ಟು, ಕಪ್ಪು ಬಣ್ಣ ಹೊಂದಿದ್ದಾನೆ. ಈತನ ಸುಳಿವು ಸಿಕ್ಕಲ್ಲಿ ಬೆಳಗಾವಿ ರೈಲ್ವೆ ಪೊಲೀಸ್‌ ಠಾಣೆ ಸಂಖ್ಯೆ 0831 2405273, ಪಿಎಸ್‌ಐ 9480802127, ಸಿಪಿಐ 948080468 ಅವರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT