ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ: ರಂಭಾಪುರಿ ಶ್ರೀ

Last Updated 27 ಜುಲೈ 2021, 15:52 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿ.ಎಸ್. ಯಡಿಯೂರಪ್ಪ ಅವರ ಪದಚ್ಯುತಿಯಿಂದ ಬಿಜೆಪಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಪೆಟ್ಟು ಬೀಳುವುದರಲ್ಲಿ ಸಂದೇಹವೇ ಇಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಧರ್ಮ ಪೀಠದ ಪೀಠಾಧ್ಯಕ್ಷನಾಗಿ ರಾಜಕೀಯ ವಿಚಾರ ಮಾತನಾಡಲು ಇಚ್ಛೆ ಪಡುವುದಿಲ್ಲ, ಆದರೆ, ಯಡಿಯೂರಪ್ಪ ಅವರಂತಹ ದಕ್ಷ, ಕ್ರಿಯಾಶೀಲ ವ್ಯಕ್ತಿ ಸಿಗುವುದು ಬಹಳ ಕಷ್ಟ. ಯಡಿಯೂರಪ್ಪ ಪಕ್ಷಕ್ಕಾಗಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮ ಪಟ್ಟಿದ್ದು‌ ಎಲ್ಲರಿಗೂ ಗೊತ್ತಿದೆ. ವಯಸ್ಸಾಗಿದ್ದರೂ ಅಧಿಕಾರದ ಅವಧಿ ಪೂರೈಸಲು ಅವಕಾಶ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಇದು ಕೇವಲ ಮಠಾಧೀಶರ ಭಾವನೆಯಲ್ಲ; ಎಲ್ಲ ಸಮುದಾಯದವರ ಭಾವನೆ ಆಗಿತ್ತು. ಆಷಾಢ ಕಳೆದ ನಂತರ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದರೆ ಸಮಾಧಾನವಾದರೂ ಇರುತ್ತಿತ್ತು’ ಎಂದರು.

‘ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮನಸ್ಸಿಗೆ ಆಘಾತ ಆಗುವಂತಹ ವಿಚಾರ ಪ್ರಕಟ ಮಾಡಿ ರಾಜೀನಾಮೆ ಸಲ್ಲಿಸಿದರು. ಪಕ್ಷದ ಆದೇಶ ಪಾಲಿಸುವ ದೊಡ್ಡ ಗುಣವನ್ನು ಅವರಲ್ಲಿ ಕಾಣುತ್ತಿದ್ದೇವೆ. ರಾಷ್ಟ್ರೀಯ ನಾಯಕರ ಆದೇಶಕ್ಕೆ ಬದ್ಧ ಎಂದು ಸದಾ ಹೇಳುತ್ತಿದ್ದರು. ಮುಂದಿನ ಮುಖ್ಯಮಂತ್ರಿಯು ಅವರ ಆದರ್ಶ ಇಟ್ಟುಕೊಂಡು ನಾಡಿನ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಲೆಂದು ಹಾರೈಸುವೆ’ ಎಂದು ಹೇಳಿದರು.

‘ಇಡೀ ಸಮಾಜದ ಭಾವನೆ ಅರ್ಥ ಮಾಡಿಕೊಂಡು ಸ್ಪಂದಿಸಿ ಕೆಲಸ ಮಾಡುವ ಮುಖ್ಯಮಂತ್ರಿ ಅವರಾಗಿದ್ದರು. ಬೇರೆ ಪಕ್ಷದವರು ಕೂಡ ಅವರ ಉತ್ತಮ ಗುಣಗಳನ್ನು ಕೊಂಡಾಡುತ್ತಿದ್ದಾರೆ. ಅನ್ಯರು ಹಗೆಗಳಾದರೆ ಬಾಳಬಹುದು; ತನ್ನವರು ಹಗೆಗಳಾದರೆ ಬಾಳಲಾಗದು. ಅದರಂತೆ ಹೊರಗಿನ ವೈರಿಗಳಿಂತ ಅವರಿಗೆ ಪಕ್ಷದವರೇ ವೈರಿಗಳಾಗಿ ಕೆಲಸ ಮಾಡಿದ್ದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ. ಆ ನೋವನ್ನು ರಾಷ್ಟ್ರೀಯ ನಾಯಕರು ಯಾವ ರೀತಿ ಸರಿಪಡಿಸುತ್ತಾರೋ? ಮುಂದೆ ಏನು ಸ್ಥಾನಮಾನ ಕೊಟ್ಟು ಗೌರವಿಸುತ್ತಾರೆಯೋ ಎನ್ನುವುದರ ಮೇಲೆ ಭವಿಷ್ಯ ನಿರ್ಧಾರವಾಗಬಹುದು’ ಎಂದು ಪ್ರತಿಕ್ರಿಯಿಸಿದರು.

ರಂಭಾಪುರಿ ಶ್ರೀಗಳ ಪಾದ‍ಪೂಜೆ ನೆರವೇರಿತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉದ್ಯಮಿ ವಿಜಯ ಸಂಕೇಶ್ವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT