ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಮಹಾನಗರಪಾಲಿಕೆ ವಶಕ್ಕೆ ಸಿದ್ಧತೆ ಆರಂಭಿಸಿದ ‘ಕಮಲ ಪಕ್ಷ’

ಚಿಹ್ನೆ ಮೇಲೆ ಮಹಾನಗರಪಾಲಿಕೆ ಚುನಾವಣೆ: ಬೆಳಗಾವಿಯಲ್ಲಿ ಬಿಜೆಪಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯನ್ನು ಇದೇ ಪ್ರಥಮ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಎದುರಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲ್ಲಿನ ಶಾಸಕರು, ಸಂಸದರು, ಮುಖಂಡರು ಹಾಗೂ ಕಾರ್ಯಕರ್ತರ ಆಗ್ರಹದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳಿಗೆ ‘ಬಿ’ ಫಾರಂ ಕೊಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಉತ್ತಮ ಆಡಳಿತ, ಬೆಳಗಾವಿಗೆ ಕೊಟ್ಟರುವ ಕೊಡುಗೆಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ. ಪಾಲಿಕೆ ಮೇಲೆ ನಮ್ಮ ಧ್ವಜ ಆರಿಸಿಯೇ ತೀರುತ್ತೇವೆ’ ಎಂದು ಹೇಳಿದರು.

ತಂತ್ರದ ಮೇಲೆ:

‘‌ನಮ್ಮ ತಂತ್ರಗಳ ಮೇಲೆ ಚುನಾವಣೆ ನಡೆಸುತ್ತೇವೆ. ಎದುರಾಳಿಗಳ ತಂತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಭಾಷೆ, ಜಾತಿ ಮೀರಿ ರಾಷ್ಟ್ರೀಯತೆಯ ಅಂಶಗಳ ಮೇಲೆ ಚುನಾವಣೆ ನಡೆಸಲಾಗುವುದು. ಇಲ್ಲಿರುವ ಎಲ್ಲ ಭಾಷಿಕರೂ ನಮ್ಮವರೆ’ ಎಂದರು.

‘ಎಲ್ಲ 58 ವಾರ್ಡ್‌ಗಳಲ್ಲೂ ಮುಖಂಡರು ಸಭೆ ನಡೆಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಎಲ್ಲ ಮುಖಂಡರೂ ಸೇರಿ ಕಾರ್ಯತಂತ್ರ ರೂಪಿಸುತ್ತೇವೆ’ ಎಂದು ಹೇಳಿದರು.

ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ‘ಇದೇ ಪ್ರಥಮ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಇಲ್ಲಿ ಚುನಾವಣೆ ಎದುರಿಸಲಿದ್ದೇವೆ. ಹೆಚ್ಚಿನ ವಾರ್ಡ್‌ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

ಮಾರ್ಗಸೂಚಿ ಪಾಲಿಸಿ:

‘ಕೋವಿಡ್ 3ನೇ ಅಲೆಯ ಭೀತಿ ಇದೆ ನಿಜ. ಆದರೆ, ಅದೆಲ್ಲವನ್ನೂ ಅವಲೋಕಿಸಿಯೇ ಚುನಾವಣಾ ಆಯೋಗದವರು ಚುನಾವಣೆ ಘೋಷಿಸಿರುತ್ತಾರೆ ಎಂದು ಭಾವಿಸಿದ್ದೇವೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ’ ಎಂದರು.

‘ಮರಾಠಾ ಸಮಾಜದ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ಕೊಡದಿದ್ದರೆ ನನಗೆ ಕೊಟ್ಟರೂ ಕೆಲಸ ಮಾಡುತ್ತೇನೆ. ನಾನು ಎಲ್‌ಎಲ್‌ಬಿ ಪದವೀಧರ. ಜವಾಬ್ದಾರಿ ನಿರ್ವಹಿಸಲು ಸಿದ್ಧವಿದ್ದೇನೆ’ ಎಂದು ಹೇಳಿದರು.

ಕಾರ್ಯಕರ್ತರಿಗೆ ಮಣೆ:

ಸಭೆಯಲ್ಲಿ ಮಾತನಾಡಿದ ಮಹೇಶ, ‘ಪಕ್ಷಕ್ಕೋಸ್ಕರ ಬೆವರಿನ ಜೊತೆಗೆ ಕೆಲವು ಸಂದರ್ಭದಲ್ಲಿ ರಕ್ತವನ್ನೂ ಸುರಿಸಿರುವ ನಮ್ಮ ಕಾರ್ಯಕರ್ತರಿಗಾಗಿ ಈ ಚುನಾವಣೆಯನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ತಿಳಿಸಿದರು.

‘ಎಲ್ಲ ವಾರ್ಡ್‌ಗಳಲ್ಲೂ ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ಶ್ರಮ ವಹಿಸಿರುವ ಹಾಗೂ ವಿಶೇಷವಾಗಿ ಯುವಕರಿಗೆ ಆದ್ಯತೆ ಕೊಡಲಾಗುವುದು. ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ನನ್ನ ಹಿಂದೆಯೋ ಅಥವಾ ಶಾಸಕರ ಹಿಂದೆಯೋ ಸುತ್ತುವವರಿಗೆ ಟಿಕೆಟ್ ಕೊಡುವುದಿಲ್ಲ. ಪಕ್ಷ ನಿಷ್ಠರು, ಒಳ್ಳೆಯ ಅಭ್ಯರ್ಥಿಗಳಿಗೆ ಮಣೆ ಹಾಕುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಮುಖಂಡರಾದ ಉಜ್ವಲಾ ಬಡವನ್ನಾಚೆ, ಮುರುಘೇಂದ್ರಗೌಡ ಪಾಟೀಲ, ರಮೇಶ ದೇಶಪಾಂಡೆ, ಪ್ರಕಾಶ ಅಕ್ಕಲಕೋಟಿ, ಗಿರೀಶ ಧೋಂಗಡಿ ‍‍ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು