ಭಾನುವಾರ, ಏಪ್ರಿಲ್ 11, 2021
26 °C

ಕೊಲ್ಹಾಪುರದಲ್ಲಿ ಕನ್ನಡ ಫಲಕಗಳಿಗೆ ಮಸಿ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅಂಗಡಿಗಳು ಮತ್ತು ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅವುಗಳಿಗೆ ಅಲ್ಲಿನ ಶಿವಸೇನಾ ಕಾರ್ಯಕರ್ತರು ಗುರುವಾರ ಮಸಿ ಬಳಿದಿದ್ದಾರೆ.

‘ಇಲ್ಲಿನ ಕನ್ನಡ ಫಲಕ ಹಾಕಿದರೆ ವ್ಯಾಪಾರ ಮಾಡಲು ಬಿಡುವುದಿಲ್ಲ. ಅಂಗಡಿಯನ್ನೇ ತೆರವುಗೊಳಿಸಬೇಕಾಗುತ್ತದೆ’ ಎಂದು ಶಿವಸೇನಾ ಮುಖಂಡ ಸಂಜಯ ಪವಾರ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ.

ಕೊಲ್ಹಾಪುರದ ಚಲನಚಿತ್ರಮಂದಿರ ಒಂದರಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನಕ್ಕೂ ಅಡ್ಡಿ ಉಂಟು ಮಾಡಿದ್ದಾರೆ. ಒಳನುಗ್ಗಿ ಪ್ರದರ್ಶನ ನಿಲ್ಲಿಸುವಂತೆ ಪಟ್ಟು ಹಿಡಿದು, ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

ಶಿವಸೇನಾ ಕಾರ್ಯಕರ್ತರ ಈ ಧೋರಣೆಯನ್ನು ಇಲ್ಲಿನ ಕನ್ನಡ ಪರ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಜಮಖಂಡಿ, ‘ಶಿವಸೇನಾ ಕಾರ್ಯಕರ್ತರು ಕೊಲ್ಹಾಪುರದಲ್ಲಿ ಕನ್ನಡದ ಫಲಕಗಳಿಗೆ ಮಸಿ ಬಳಿದಿರುವುದು ಖಂಡನೀಯ. ಅವರ ನಡವಳಿಕೆಯನ್ನು ಸಹಿಸಲಾಗುವುದಿಲ್ಲ. ಕನ್ನಡಿಗರನ್ನು ಕೆಣಕುವುದು ಸರಿಯಲ್ಲ. ಇಲ್ಲಿ ನಾವು ಹಾಗೂ ಮರಾಠಿ ಭಾಷಿಗರು ಸೌಹಾರ್ದದಿಂದ ಇದ್ದೇವೆ. ಬೆಳಗಾವಿಯಲ್ಲೂ ವಿವಿಧ ಭಾಷೆಯ ನಾಮಫಲಕಗಳನ್ನು ವರ್ತಕರು ಹಾಕಿದ್ದಾರೆ. ಆದರೆ, ನಾವು ಮಸಿ ಬಳಿಯುವ ಕಾರ್ಯಾಚರಣೆ ನಡೆಸಿಲ್ಲ. ಶಿವಸೇನೆಯವರು ಪುಂಡಾಟಿಕೆ ಮುಂದುವರಿಸಿದ್ದೇ ಆದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ನಗರದಲ್ಲಿ ಅನ್ಯ ಭಾಷೆಯಲ್ಲಿ ಫಲಕ ಹಾಕಿದವರು ಕೂಡಲೇ ತೆರವುಗೊಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಶಿವಸೇನಾದವರಿಗೆ ಎಚ್ಚರಿಕೆ ನೀಡುವಂತೆ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು