ಗುರುವಾರ , ಜುಲೈ 29, 2021
25 °C

‘ರಕ್ತದಾನದಿಂದ ಜೀವ ಉಳಿಸಲು ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಯುವಜನರು ರಕ್ತದಾನ ಮಾಡಲು ಮುಂದೆ ಬರಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಹೇಳಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತ ದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್–19 ಲಾಕ್‌ಡೌನ್‌ ಆರಂಭದ ವೇಳೆ ರಕ್ತದ ಕೊರತೆ ಕಾಡಿತು. ಆದರೆ, ದಾನಿಗಳು ಎದೆಗುಂದದೆ ದಾನ ಮಾಡಿ ಕೊರತೆ ನೀಗಿಸುವಲ್ಲಿ ಮಾಡಿದ ಕಾರ್ಯ ಶ್ಲಾಘನೀಯವಾದುದು. ಯಾವುದೇ ಶಸ್ತ್ರಚಿಕಿತ್ಸೆ ನೆರವೇರಬೇಕಾದರೆ ರಕ್ತ ಅತ್ಯವಶ್ಯವಾಗಿದೆ. ಅದರಲ್ಲೂ ಹೆರಿಗೆ ಸಂದರ್ಭದಲ್ಲಿ ಹೆಚ್ಚು ಅಗತ್ಯವಿದೆ’ ಎಂದರು.

‘ಲಾಕಡೌನ್ ಸಂದರ್ಭದಲ್ಲಿ ಅಪಘಾತಗಳು ಕಡಿಮೆಯಾಗಿವೆ. ಆದರೂ ಕೆಲವು ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯ ತೀವ್ರವಾಗಿತ್ತು. ಆಗ, ಯುವಕರು ದಾನ ಮಾಡಿ ಕೊರತೆ ನೀಗಿಸಿದರು’ ಎಂದು ನೆನೆದರು.

ಜೆಎನ್ಎಂಸಿ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ‘ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಮೂವರ ಜೀವ ಉಳಿಸಬಹುದು. 350 ಮಿ.ಲೀ. ರಕ್ತದಿಂದ ಮೂರು ಘಟಕಗಳನ್ನು (ಬಳಿ ರಕ್ತಕಣ, ಪ್ಲಾಸ್ಮಾ ಹಾಗೂ ರಕ್ತ) ಬೇರ್ಪಡಿಸಿ ಅವಶ್ಯವಿರುವ ರೋಗಿಗಳಿಗೆ ನೀಡಲಾಗುತ್ತದೆ. ಒಮ್ಮೊಮ್ಮೆ ಬಾಣಂತಿಗೆ ಬಹಳಷ್ಟು ರಕ್ತ ಬೇಕಾಗಬಹುದು. ಗರ್ಭವತಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಹೆರಿಗೆ ಸಂದರ್ಭದಲ್ಲಿ ಅವರಿಗೆ ರಕ್ತ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

‘ವೈದ್ಯ ವಿಜ್ಞಾನದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲಾಗಿದೆ. ಆದರೆ ರಕ್ತ ತಯಾರಿಸುವ ವಿಧಾನ ಮಾತ್ರ ಸಾಧ್ಯವಾಗಿಲ್ಲ. ದಾನದಿಂದ ಮಾತ್ರ ರಕ್ತ ಸಂಗ್ರಹಿಸಲು ಸಾಧ್ಯ’ ಎಂದು ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬದಾಮಿ ಹೇಳಿದರು.

117 ಬಾರಿ ರಕ್ತ ದಾನ ಮಾಡಿದ ಶಿವಲಿಂಗಪ್ಪ ಕಿತ್ತೂರು ಅವರನ್ನು ಸತ್ಕರಿಸಲಾಯಿತು.

ಡಾ.ಆರ್.ಎಸ್. ಮುಧೋಳ, ಡಾ.ರೇಖಾ ಮುಧೋಳ, ಡಾ.ಅವಿನಾಶ ಕವಿ, ಡಾ.ವಿಠ್ಠಲ ಮಾನೆ, ರಕ್ತ ಭಂಡಾರದ ಮುಖ್ಯಸ್ಥ ಡಾ.ಎಸ್.ವಿ. ವಿರಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.