ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಹೂಡಿಕೆ ಸಮಾವೇಶಕ್ಕೆ ವಿರೋಧ: ಸಚಿವ ಶೆಟ್ಟರ್‌ ವಿರುದ್ಧ ಆಕ್ರೋಶ

Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಫೆ. 14ರಂದು ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿರುವುದಕ್ಕೆ ಇಲ್ಲಿ ವಿರೋಧ ವ್ಯಕ್ತವಾಗಿದೆ.

‘ಕಂದಾಯ ವಿಭಾಗದ ಕೇಂದ್ರ ಸ್ಥಾನಕ್ಕೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ’ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್‌ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇಂತಹ ಮಹತ್ವದ ಸಮಾವೇಶವನ್ನು ಕಂದಾಯ ವಿಭಾಗದ ಕೇಂದ್ರ ಸ್ಥಾನವಾದ ಬೆಳಗಾವಿಯಲ್ಲಿ ಆಯೋಜಿಸಬೇಕಿತ್ತು. ಸುವರ್ಣ ವಿಧಾನಸೌಧದಲ್ಲಿ ನಡೆಸಿದ್ದರೆ, ಅದನ್ನು ಬಳಸಿಕೊಂಡಂತೆಯೂ ಆಗುತ್ತಿತ್ತು. ಆದರೆ, ಹುಬ್ಬಳ್ಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿಯನ್ನು ಕಡೆಗಣಿಸಲಾಗುತ್ತಿದೆ ಎನ್ನಲಾಗುತ್ತಿದೆ. ಶೆಟ್ಟರ್ ಅವರು ‘ತವರಿನ ಮೇಲೆ ಹೆಚ್ಚಿನ ಪ್ರೀತಿ’ ತೋರಿಸುತ್ತಿದ್ದಾರೆ. ಹೀಗಾಗಿ, ಸಮಾವೇಶವನ್ನು ಬೆಳಗಾವಿಯ ಉದ್ದಿಮೆದಾರರು ಬಹಿಷ್ಕರಿಸಬೇಕು ಎನ್ನುವ ಕರೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ನೀಡಿದ್ದಾರೆ. ಅದು ಫೇಸ್‌ಬುಕ್‌, ಟ್ವಟರ್‌ನಲ್ಲಿ ಹಬ್ಬಿದೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಟ್ವೀಟ್‌ ಮೂಲಕ ಆಕ್ರೋಶ:ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಡಾ.ಸೋನಾಲಿ ಸರ್ನೋಬತ್‌ ಟ್ವೀಟ್ ಮಾಡಿದ್ದು, ‘ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು, ಸಣ್ಣ ಕೈಗಾರಿಕೋದ್ಯಮಿಗಳು, ಫೌಂಡ್ರಿ ಕ್ಲಸ್ಟರ್‌ ಮೊದಲಾದ ಉದ್ಯಮಿಗಳು ಸಮಾವೇಶವನ್ನು ಬಹಿಷ್ಕರಿಸಬೇಕು’ ಎಂದು ಕರೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ‘ಟ್ಯಾಗ್’ ಮಾಡಿದ್ದಾರೆ.

ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕದಲ್ಲಿರುವ ಅವಕಾಶಗಳ ಅನ್ವೇಷಣೆ ನಡೆಯಲಿ. ಆದರೆ, ಬೆಳಗಾವಿಯನ್ನು ಕಡೆಗಣಿಸಿ ಹುಬ್ಬಳ್ಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸರಿಯಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಲ್ಲೇಕಿಲ್ಲ?:‘ಹುಬ್ಬಳ್ಳಿ– ಧಾರವಾಡ ಹಾಗೂ ಬೆಳಗಾವಿ ತ್ರಿವಳಿ ನಗರಗಳು. ಅವುಗಳನ್ನು ಸಮನಾಗಿ ಬೆಳೆಸಬೇಕು ಎಂಬ ಪರಿಕಲ್ಪನೆ ನನಗಿದೆ ಎಂದು ಸಚಿವ ಶೆಟ್ಟರ್‌ ಹೇಳಿದ್ದರು. ಆದರೆ, ವಾಸ್ತವವಾಗಿ ಸಚಿವರಿಗೆ ಬೆಳಗಾವಿ ಬಗ್ಗೆ ಕಾಳಜಿ ‘ಇಲ್ಲ’ ಎಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದೇ ಇದಕ್ಕೆ ಕಾರಣ. ಪ್ರಾದೇಶಿಕವಾರು ಆಯೋಜಿಸಲಾಗುವ ಇಂತಹ ಸಮಾವೇಶ ಬೆಳಗಾವಿಯಲ್ಲಿಯೇ ನಡೆಯಬೇಕಾಗಿತ್ತು. ಕಲಬುರ್ಗಿ ವಿಭಾಗದ ಸಮಾವೇಶ ಕಲಬುರ್ಗಿ, ಬೆಂಗಳೂರು ವಿಭಾಗದ್ದು ಬೆಂಗಳೂರಿನಲ್ಲಿ ನಡೆಯುವುದಾದರೆ ಬೆಳಗಾವಿ ವಿಭಾಗದ ಸಮಾವೇಶ ಇಲ್ಲೇಕಿಲ್ಲ?’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ಕೇಳಿದ್ದಾರೆ.

‘ಸಚಿವರ ಈ ನಿರ್ಧಾರವನ್ನು ಜಿಲ್ಲೆಯ ಜನಪ್ರತಿನಿಧಿಗಳು, ಉದ್ದಿಮೆದಾರರು ವಿರೋಧಿಸಬೇಕು. ಹುಬ್ಬಳ್ಳಿ ಸಮಾವೇಶ ಬಹಿಷ್ಕರಿಸಬೇಕು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಸುವ ಮೂಲಕ ಬೆಳಗಾವಿಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಬೆಳಗಾವಿಯಲ್ಲಿ ಹೂಡಿಕೆಗೆ ಬಹಳ ಅವಕಾಶವಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲಿನ ಯುವಜನರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

*
ಸಮಾವೇಶ ಹುಬ್ಬಳ್ಳಿಯಲ್ಲೇ ನಡೆಯುತ್ತಿರಬಹುದು. ಆದರೆ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಬಂಡವಾಳ ಹೂಡಿಕೆದಾರರನ್ನು ಸೆಳೆಯಲಾಗುವುದು.
-ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT