ಗುರುವಾರ , ಜೂನ್ 30, 2022
27 °C

ಪಕ್ಷದಲ್ಲಿ ಭಿನ್ನಮತವಿಲ್ಲ, ನಮ್ಮಲ್ಲಿರುವುದು ಒಂದೇ ಮತ: ಪ್ರಲ್ಹಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ನಾನು ಭಿನ್ನಾಭಿಪ್ರಾಯ ಶಮನಕ್ಕೆ ಬಂದಿಲ್ಲ. ಇಲ್ಲಿರುವುದು ಒಂದೇ ಮತ, ಅದು ಬಿಜೆಪಿ ಗೆಲ್ಲಿಸುವುದಷ್ಟೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ವಾಯವ್ಯ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಶನಿವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ಎಲ್ಲ ಶಾಸಕರು, ಸಂಸದರೊಂದಿಗೆ ಚರ್ಚಿಸಿದ್ದೇನೆ. ಗೆಲುವಿಗಾಗಿ ಎಲ್ಲ ನಾಯಕರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ. ‍ಪ್ರತಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮುನ್ನಡೆ ದೊರಕಿಸುವಂತೆ ಆಯಾ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಎಲ್ಲ ಕಡೆಯೂ ಮತದಾರರು ಹಾಗೂ ಪಕ್ಷದ ಮುಖಂಡರ ಸಭೆ ನಡೆಯಲಿದೆ. ಪಕ್ಷಕ್ಕೆ ಮುಳುವಾಗದ ರೀತಿಯಲ್ಲಿ ನಡೆದುಕೊಳ್ಳುವಂತೆ ನಾಯಕರಿಗೆ ಸೂಚಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಅಧಿಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಭಾರತದಲ್ಲೇ ಮೊದಲ ಸಲ ಸ್ಥಳೀಯ ಭಾಷೆಯಲ್ಲೇ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಹ ಮೀಸಲಿಡಲಾಗಿದೆ. ಹಾಗಾಗಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದೆ’ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ಟಿಕೆಟ್ ಹಂಚಿಕೆಯಲ್ಲಿ ಬೆಳಗಾವಿಗೆ ತಾರತಮ್ಯ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘ಈ ಹಿಂದೆ ಬೆಳಗಾವಿಗೆ ಟಿಕೆಟ್‌ ನೀಡಿದ್ದೆವು. ಈಗ ಬೆಳಗಾವಿಯವರೆ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ತಾರತಮ್ಯದ ಪ್ರಶ್ನೆಯೇ ಇಲ್ಲ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಸಹೋದರ ಜಿಲ್ಲೆಗಳು’ ಎಂದು ಉತ್ತರಿಸಿದರು.

‘ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು