ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಕೊಟ್ಟ ವರುಣ: ಖಾಲಿಯಾದ ಐತಿಹಾಸಿಕ ‘ಚಂದ್ಯಾನ ಕೆರೆ’

ಚನ್ನಮ್ಮನ ಕಿತ್ತೂರಿನ ತಾಲ್ಲೂಕಿನ ಹಲವು ಕೆರೆಗಳಿಗೆ ಬೇಕಿದೆ ಕಾಯಕಲ್ಪ
Published 18 ಮೇ 2024, 5:02 IST
Last Updated 18 ಮೇ 2024, 5:02 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಸಕಾಲಕ್ಕೆ ಸುರಿಯದ ಮಂಗಾರು ಪೂರ್ವ ‘ಅಡ್ಡಮಳೆ’ಯಿಂದಾಗಿ ಬೇಸಿಗೆಯ ಸೆಖೆ ಹೆಚ್ಚಾಗುತ್ತಿದೆ. ಡಾಂಬರು ಮತ್ತು ಸಿಮೆಂಟ್ ಬಳಿದುಕೊಂಡ ರಸ್ತೆಗಳಂತೂ ಕಾದ ಬಾಣಲೆಯಂತಾಗಿವೆ. ಮಧ್ಯಾಹ್ನದ ಹೊತ್ತಿಗೆ ಈ ರಸ್ತೆಗಳ ಮೇಲೆ ನಡೆದರೆ ಕೆಂಡದ ಮೇಲೆ ಹೊರಟ ಅನುಭವವಾಗುತ್ತದೆ.

ಇಂತಹ ಬಿರುಬೇಸಿಗೆಯ ಪ್ರಹಾರಕ್ಕೆ ಚನ್ನಮ್ಮನ ಕಿತ್ತೂರು ಪಟ್ಟಣ ಹಾಗೂ ತಾಲ್ಲೂಕಿನ ಕೆರೆಗಳಲ್ಲಿನ ನೀರು ಆವಿಯಾಗಿ ಹೋಗುತ್ತಿದೆ. ಒಂದೆರಡು ಕೆರೆಯಂತೂ ಬತ್ತಿ ಹೋಗಿ, ಕ್ರಿಕೆಟ್ ಆಡುವ ಮೈದಾನಗಳಂತೆ ಕಾಣುತ್ತವೆ.

ಬತ್ತುತ್ತಿರುವ ಕೆರೆಗಳು ತನ್ನೊಡಲ ದರ್ಶನ ಮಾಡಿಸುತ್ತಿವೆ. ಕೆಲವು ಕೆರೆಗಳ ಒಡಲಿನ ತುಂಬೆಲ್ಲ ಬರೀ ಪ್ಲಾಸ್ಟಿಕ್ ತ್ಯಾಜ್ಯವೇ ಸೇರಿಕೊಂಡು ನಿಂತಿದೆ. ಜನರ ಅವಶ್ಯಕತೆ ಪೂರೈಸುವ ಕೆರೆಗಳ ಸ್ವಚ್ಛತೆಯನ್ನು ಹೇಗೆ ಕಾಪಾಡಲಾಗುತ್ತಿದೆ ಎಂಬುದಕ್ಕೆ ಪುರಾವೆಯಾಗಿ, ಬೆಳೆದು ನಿಂತಿರುವ ನಾಗರಿಕತೆಯನ್ನು ಅಣಕಿಸುತ್ತಿರುವಂತೆ ಭಾಸವಾಗುತ್ತಿದೆ.

ಬತ್ತಿದ ಚಂದ್ಯಾನ ಕೆರೆ

ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡೊಂಬರಕೊಪ್ಪ ಪ್ರವಾಸಿ ಮಂದಿರದ ಅನತಿ ದೂರದಲ್ಲಿರುವ ‘ಚಂದ್ಯಾನ ಕೆರೆ’ ಮಳೆಯಿಲ್ಲದೆ ಸಂಪೂರ್ಣ ಬತ್ತಿ ಹೋಗಿದೆ. ವಿವಿಧೆಡೆಯಿಂದ ಈ ಕೆರೆಗೆ ಪಕ್ಷಿಗಳು ಬೇಸಿಗೆ ಕಾಲದಲ್ಲಿ ವಲಸೆ ಬರುತ್ತವೆ ಎಂಬ ಮಾತೂ ಇದೆ.

ಆದರೆ, ಈಗ ಇಲ್ಲಿ ಹನಿ ನೀರೂ ಇಲ್ಲ. ಜಾನುವಾರುಗಳ ಮೈ ತೊಳೆಯಲು, ಅಕ್ಕಪಕ್ಕದ ಜಮೀನಿನ ರೈತರು ನಿತ್ಯ ಚಟುವಟಿಕೆಗಾಗಿ ಇಲ್ಲಿನ ನೀರು ಬಳಸುತ್ತಿದ್ದರು. ಈಗ ಅವರಿಗೂ ತೊಂದರೆಯಾಗಿದೆ. ಕೆರೆಯಂಗಳ ಬರಿದಾಗಿರುವುದರಿಂದ ಅಕ್ಕಪಕ್ಕದ ಕೊಳವೆಬಾವಿಗಳ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಈ ಸಲವೂ ಸಕಾಲಕ್ಕೆ ಮಳೆ ಬಾರದಿದ್ದರೆ, ಕೆಲವು ಕೊಳವೆಬಾವಿ ಪೂರ್ಣ ಬತ್ತಿ ಹೋಗಬಹುದಾದ ಆತಂಕ ಕಾಡುತ್ತಿದೆ ಎನ್ನುತ್ತಾರೆ ರೈತರು.

ಉಳಿದಂತೆ, ರಣಗಟ್ಟಿ ಕೆರೆ, ತುಂಬುಗೆರೆ, ಸಕ್ಕರೆಗೆರೆ, ಆನೆಹೊಂಡದಲ್ಲಿ ನೀರಿದ್ದರೂ, ಇಲ್ಲದಂತಹ ದುಃಸ್ಥಿತಿ ನಿರ್ಮಾಣವಾಗಿದೆ. ಕಡಿಮೆಯಾಗುತ್ತ ಸಾಗಿರುವ ಈ ಕೆರೆಗಳ ನೀರು ಬಳಸಲು ಯೋಗ್ಯವಾಗಿಲ್ಲ. ಏಕೆಂದರೆ ಊರ ಶೌಚಾಲಯ, ಚರಂಡಿಯ ಹೊಲಸು ನೀರೆಲ್ಲ ಇವುಗಳ ಒಡಲು ಸೇರಿಕೊಳ್ಳುತ್ತದೆ. ಇವುಗಳನ್ನು ಬಳಸುವುದು ಒತ್ತಟ್ಟಿಗಿರಲಿ, ಕಾಲು ತೊಳೆದುಕೊಳ್ಳಲು ಜನರು ಹಿಂಜರಿಯುವ ಸ್ಥಿತಿಯಿದೆ.

‘ಕೆರೆಗಳಿಗೆ ಹರಿದು ಬರುವ ನೀರಿನ ಕಾಲುವೆಗಳಿಗೆ ಮಾಂಸದ ತುಂಡು, ಕೋಳಿ ಪುಚ್ಛ ಎಸೆದು ಹೋಗುವುದು ಇಲ್ಲಿ ಕಂಡುಬರುತ್ತದೆ. ಇವುಗಳನ್ನು ಒಗೆಯದಂತೆ ತಡೆಯಬೇಕಾಗಿದೆ. ಚರಂಡಿ ನೀರು ಕೆರೆಯೊಡಲಿಗೆ ಹರಿಸದೆ, ಪರ್ಯಾಯ ವ್ಯವಸ್ಥೆ ರೂಪಿಸಬೇಕಾಗಿದೆ. ಕೆರೆಯಲ್ಲಿನ ಹೂಳು ತೆಗೆದು ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚಿಸಿದರೆ, ಬೇಸಿಗೆ ಕಾಲದಲ್ಲಿ ಎರಡು ತಿಂಗಳು ಕಾಲ ಇಲ್ಲಿ ಎದುರಿಸುವ ನೀರಿನ ಸಮಸ್ಯೆಗೂ ಮುಕ್ತಿ ಸಿಗಲಿದೆ’ ಎನ್ನುತ್ತಾರೆ ನಾಗರಿಕರು.

ತಾಲ್ಲೂಕಿನ ಉಗರಖೋಡ, ಕಲಭಾಂವಿ, ಹಿರೇನಂದಿಹಳ್ಳಿ ಸೇರಿ ಕೆಲವು ಗ್ರಾಮಗಳ ಕೆರೆಗಳು ಪೂರ್ಣ ಬತ್ತಿವೆ. ಬಿರು ಬೇಸಿಗೆಗೆ ಸಾಕ್ಷಿಯಾಗಿ ನಿಂತಿವೆ.

ಚಂದ್ಯಾನ ಕೆರೆಕಟ್ಟೆ ಗಟ್ಟಿಯಾಗಿಲ್ಲ. ಇದನ್ನು ದುರಸ್ತಿ ಮಾಡಬೇಕು. ಕೆರೆಯಂಗಳದಲ್ಲಿರುವ ಹೂಳು ತೆಗೆದು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬೇಕು. ಅರಿಷಿಣಗೆರೆಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಬೇಕಿದೆ
ಪ್ರವೀಣ ಸರದಾರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT