ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಕೋವಿಡ್ ಲ್ಯಾಬ್ ತಕ್ಷಣ ಆರಂಭಿಸಲು ಗೋವಿಂದ ಕಾರಜೋಳ ಸೂಚನೆ

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ
Last Updated 9 ಜೂನ್ 2021, 13:52 IST
ಅಕ್ಷರ ಗಾತ್ರ

ಬೆಳಗಾವಿ: ‘ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಸಿವಿಲ್ ಕಾಮಗಾರಿಗೆ ಕಾಲಹರಣ ಮಾಡದೆ ಲಭ್ಯ ಕಟ್ಟಡ ಬಳಸಿಕೊಂಡು ಕೂಡಲೇ ಆರಂಭಿಸಬೇಕು’ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚಿಸಿದರು.

ಕೋವಿಡ್ ಹಾಗೂ ನೆರೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಇಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಚಿಕ್ಕೋಡಿಯಲ್ಲಿ ಸಾಕಷ್ಟು ಸರ್ಕಾರಿ ಕಟ್ಟಡಗಳು ಲಭ್ಯ ಇವೆ. ಅದನ್ನು ಬಳಸಿಕೊಳ್ಳಿ. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದರೆ ತಕ್ಷಣವೇ ಕೈಗೊಂಡು ಕಟ್ಟಡವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು. ಬಿಮ್ಸ್ ಪ್ರಯೋಗಾಲಯದ ಮಾದರಿಯಲ್ಲಿ ಚಿಕ್ಕೋಡಿಯಲ್ಲೂ ಎರಡು ದಿನಗಳಲ್ಲಿ ಸಿದ್ಧಪಡಿಸಿಕೊಡಬೇಕು’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ವೈದ್ಯಕೀಯ ಮೂಲಸೌಕರ್ಯ ಕಲ್ಪಿಸಲು ಹಣದ ಕೊರತೆಯಿಲ್ಲ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳ ಖರೀದಿಗೆ ಇದನ್ನು ಬಳಸಿಕೊಳ್ಳಬೇಕು’ ಎಂದು ಬಿಮ್ಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಸಂಭವನೀಯ 3ನೇ ಅಲೆಯ ವೇಳೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ವರದಿಗಳು ಇರುವುದರಿಂದ ಈ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬಿಮ್ಸ್ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಕೂಡ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.60ರಷ್ಟಿದೆ. ನಿತ್ಯ 16 ಕೆ.ಎಲ್. ಆಮ್ಲಜನಕ ಬಳಕೆಯಾಗುತ್ತಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ. ರೆಮ್‌ಡಿಸಿವಿರ್‌ ಸೇರಿದಂತೆ ಯಾವುದೇ ಕೊರತೆ ಇಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಕೋವಿಡ್ ಪಾಸಿಟಿವಿಟಿ ದರ ಕ್ರಮೇಣ ಕಡಿಮೆಯಾಗಿದೆ. ಪಾಸಿಟಿವಿಟಿ ದರ ಹೆಚ್ಚಾಗಿರುವ ಕಡೆಗಳಲ್ಲಿ ರ‍್ಯಾಟ್ ಪ್ರಮಾಣ ಹೆಚ್ಚಿಸಲಾಗಿದೆ. ಜನಸಂಖ್ಯೆ ಆಧರಿಸಿ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 30ಸಾವಿರ ಲಸಿಕೆ ನೀಡುವಷ್ಟು ವ್ಯವಸ್ಥೆ ಇದೆ. ಪೂರೈಕೆ ಆದಂತೆ ಪ್ರಮಾಣ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ಇದುವರೆಗೆ 204 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ’ ಎಂದು ವಿವರ ನೀಡಿದರು.

ಸಚಿವರ ಸೂಚನೆಗಳು

* ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇ.30ರಷ್ಟು ನೀರು ಸಂಗ್ರಹ ಇರುವುದರಿಂದ ಪ್ರವಾಹ ಸ್ಥಿತಿ ಉದ್ಭವಿಸುವುದಿಲ್ಲ. ಆದಾಗ್ಯೂ ನೆರೆಯ ಮಹಾರಾಷ್ಟ್ರ ಸೇರಿದಂತೆ ಎಲ್ಲ ಜಲಾಶಯ ಮಟ್ಟ ಹಾಗೂ ಮಳೆಯ ಪ್ರಮಾಣದ ಮೇಲೆ ನಿಗಾ ವಹಿಸಬೇಕು.

* ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕ ವಿತರಣೆಯಾಗಬೇಕು.

* ಹೆಚ್ಚಿನ ದರಕ್ಕೆ ಬೀಜ ಮಾರಾಟ ಆಗದಂತೆ ಎಚ್ಚರ ವಹಿಸಬೇಕು

* ಜಾನುವಾರುಗೆ ನಿಗದಿತ ವೇಳೆಯಲ್ಲಿ ಲಸಿಕೆ ಹಾಕಬೇಕು.

* ಪ್ರವಾಹದಂತಹ ತುರ್ತು ಸಂದರ್ಭದಲ್ಲಿ ಅಗತ್ಯ ಮೇವು ದಾಸ್ತಾನು ಇರಬೇಕು.

* ಮೇವು ಕೊರತೆ ಇದ್ದರೆ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು.

* ಸರ್ಕಾರದ ಪ್ಯಾಕೇಜ್ ನೆರವು ತಲುಪಿಸಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT