ಶುಕ್ರವಾರ, ಮೇ 20, 2022
23 °C

ಬಾಲಕಾರ್ಮಿಕರ ಸಂಖ್ಯೆ, ಬಾಲ್ಯವಿವಾಹ ಹೆಚ್ಚಳ: ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ತರಗತಿಗಳು ನಡೆಯದ ಕಾರಣ ಬಾಲಕಾರ್ಮಿಕರ ಸಂಖ್ಯೆ ಹಾಗೂ ಬಾಲ್ಯವಿವಾಹ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಆಯಾ ಇಲಾಖೆಗಳಿಂದ ನಮಗೆ ವರದಿ ಬಂದಿದೆ’ ಎಂದು ಶಿಕ್ಷಣ ಸಚಿವೆ ಎಸ್. ಸುರೇಶ್‌ಕುಮಾರ್‌ ತಿಳಿಸಿದರು.

ಜಿಲ್ಲೆಯ ಖಾನಾಪುರದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಈ ಸಾಮಾಜಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಶಾಲಾ–ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಆದ್ದರಿಂದ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ ಇನ್ನುಳಿದ ತರಗತಿಗಳನ್ನು ಯಾವ ರೀತಿ ಪ್ರಾರಂಭಿಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ 9, 10, 11, 12ನೇ ತರಗತಿಗಳನ್ನು ಪೂರ್ಣವಾಗಿ ನಡೆಸುತ್ತಿದ್ದೇವೆ’ ಎಂದರು.

ಮಕ್ಕಳ ಸುಧಾರಣೆಗೆ ಕ್ರಮ: ‘ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಬೋಧನಾ ಗುಣಮಟ್ಟ ಒಂದೇ ರೀತಿ ಇದೆ. ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ವ್ಯತ್ಯಾಸ ಇರಬಹುದು. ಇನ್ನೂ ಗುಣಮಟ್ಟದ ‌ಶಿಕ್ಷಣ ನೀಡಲು ಶಿಕ್ಷಕರು ಕ್ರಮ ವಹಿಸಬೇಕಾಗುತ್ತದೆ. ಹೀಗಾಗಿ, ಪ್ರತಿ ಶಿಕ್ಷಕರೂ ಶಾಲೆಗೆ ಪಾಠದ ವಿಷಯದಲ್ಲಿ ತಯಾರಾಗಿಯೇ ಹೋಗಬೇಕು. ಆಗ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಮಕ್ಕಳು ಯಾವ ವಿಷಯದಲ್ಲಿ ದುರ್ಬಲ ಇದ್ದಾರೆ ಎನ್ನುವುದನ್ನು 7ನೇ ತರಗತಿಯಿಂದಲೇ ಪತ್ತೆ ಹಚ್ಚಿ ಅವರನ್ನು ಸುಧಾರಿಸಲು ಚಟುವಟಿಕೆಗಳನ್ನು ನಡೆಸಲಾಗುವುದು. ಇದು ಬರುವ‌ ಶೈಕ್ಷಣಿಕ ‌ವರ್ಷದಿಂದ ಅನುಷ್ಠಾನಗೊಳ್ಳಲಿದೆ. ವಿಷಯ ಚೆನ್ನಾಗಿ ಗೊತ್ತಿರುವ ಮಕ್ಕಳಿಗೆ ಪ್ರೋತ್ಸಾಹ ಕೊಡುವ ಕಾರ್ಯವೂ ನಡೆಯಲಿದೆ’ ಎಂದರು.

‘ನಮ್ಮ (ಸರ್ಕಾರಿ) ಶಾಲೆಗಳಿಗೆ ಬರುವ ಮಕ್ಕಳ ಹಿನ್ನೆಲೆ ಪರಿಗಣಿಸಬೇಕಾಗುತ್ತದೆ. ನಮ್ಮಲ್ಲಿಗೆ ವಲಸೆ ಕಾರ್ಮಿಕರ ಮಕ್ಕಳು, ಕಡುಬಡತನದ ಹಿನ್ನೆಲೆಯ ಮಕ್ಕಳು ಬರುತ್ತಾರೆ. ಆದರೂ ಅವರು ಉತ್ತಮ ಸಾಧನೆ ತೋರುತ್ತಿದ್ದಾರೆ. ಅದು ಹೆಮ್ಮೆಯ ಸಂಗತಿ’ ಎಂದು ಪ್ರತಿಕ್ರಿಯಿಸಿದರು.

ಬಸ್ ವ್ಯವಸ್ಥೆ: ‘ಎಲ್ಲೆಲ್ಲಿ ದೂರದಿಂದ ಹಾಗೂ ಕಾಡಿನ ಪ್ರದೇಶದಿಂದ ಮಕ್ಕಳು ಬರುತ್ತಾರೆಯೋ ಅವರಿಗೆ ಬಸ್ ವ್ಯವಸ್ಥೆ ಮಾಡಿಸಲು ಕ್ರಮ ವಹಿಸಲಾಗುವುದು. ಸಾರಿಗೆ ಬಸ್‌ಗಳವರು ಮಕ್ಕಳೊಂದಿಗೆ ಒರಟಾಗಿ ನಡೆದುಕೊಳ್ಳಬಾರದು. ಚಿಕ್ಕ ವಯಸ್ಸಿನಲ್ಲೇ ಅವರಿಗೆ ವ್ಯವಸ್ಥೆ ವಿರುದ್ಧ ಆಕ್ರೋಶ ಬರುವಂತೆ ಮಾಡಬಾರದು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ‌ ಸೂಚಿಸಿದ್ದೇನೆ. ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಲೆಗಳಿಗಾಗಿಯೇ ಬಸ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು