ಸೋಮವಾರ, ಏಪ್ರಿಲ್ 19, 2021
23 °C
ಮಂಗಲಾ ಅಂಗಡಿ, ಸತೀಶ ಜಾರಕಿಹೊಳಿ ಪರವಾಗಿ ಮತ ಯಾಚನೆ

PV Web Exclusive | ಅಭ್ಯರ್ಥಿಗಳ ಮಕ್ಕಳೇ ಬೆಳಗಾವಿಯಲ್ಲಿ ‘ಸ್ಟಾರ್‌ ಪ್ರಚಾರಕರು’

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಕ್ಕಳೇ ‘ಸ್ಟಾರ್‌ ಪ್ರಚಾರಕ’ರಾಗಿದ್ದಾರೆ.

ಹೌದು. ಪ್ರಬಲ ಅಭ್ಯರ್ಥಿಗಳಾದ ಬಿಜೆಪಿಯ ಮಂಗಲಾ ಅಂಗಡಿ ಮತ್ತು ಕಾಂಗ್ರೆಸ್‌ನ ಸುರೇಶ ಅಂಗಡಿ ಸ್ಪರ್ಧೆಯಿಂದ ಕಣ ರಂಗೇರಿದ್ದು, ಪ್ರಚಾರ ಕಾರ್ಯದಲ್ಲಿ ಅವರಿಗೆ ಮಕ್ಕಳು ಸಾಥ್‌ ನೀಡುತ್ತಿದ್ದಾರೆ.‌

ಮಂಗಲಾ ಅವರ ಪರವಾಗಿ ಪುತ್ರಿಯರಾದ ಶ್ರದ್ಧಾ ಶೆಟ್ಟರ್‌ ಮತ್ತು ಡಾ.ಸ್ಫೂರ್ತಿ ಪಾಟೀಲ, ಸತೀಶ ಜಾರಕಿಹೊಳಿ ಪರವಾಗಿ ಪ್ರಿಯಾಂಕಾ ಹಾಗೂ ರಾಹುಲ್‌ ಜಾರಕಿಹೊಳಿ ಬಿರುಬಿಸಿಲಿನಲ್ಲೂ ಹಳ್ಳಿಗಳನ್ನು ಸುತ್ತಿ ಮತ ಯಾಚಿಸುತ್ತಾ ಬೆವರು ಹರಿಸುತ್ತಿದ್ದಾರೆ. ಕ್ಷೇತ್ರದಲ್ಲಿನ ಸದ್ಯದ ‘ಸ್ಟಾರ್‌ ಪ್ರಚಾರಕರಂತೆ’ ಆಕರ್ಷಿಸುತ್ತಿದ್ದಾರೆ. ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಆಯಾ ಪಕ್ಷಗಳ ಕಾರ್ಯಕರ್ತರು ಹಾಗೂ ಅಭಿಯಾನಿಗಳು ನೆರೆಯುತ್ತಿದ್ದಾರೆ. ದಿನೇ ದಿನೇ ಏರುತ್ತಿರುವ ರಣಬಿಸಿಲು ಹಾಗೂ ಕೋವಿಡ್–19 ಅನ್ನೂ ಲೆಕ್ಕಿಸದೆ ಮತಬೇಟೆಗೆ ಇಳಿಯುತ್ತಿದ್ದಾರೆ.


ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಂದೆ ಸತೀಶ ಜಾರಕಿಹೊಳಿ ಪರವಾಗಿ ಪುತ್ರಿ ಪ್ರಿಯಾಂಕಾ ಮತ ಯಾಚಿಸಿದರು

ಸಮಯದ ಅಭಾವದಿಂದಾಗಿ, ಅಭ್ಯರ್ಥಿಗಳೇ ಕ್ಷೇತ್ರದ ಎಲ್ಲ ಕಡೆಯೂ ಹೋಗಲಾಗುವುದಿಲ್ಲ. ಅವರ ಪ್ರತಿನಿಧಿಗಳಾಗಿ ಮಕ್ಕಳು ತೆರಳುತ್ತಿದ್ದಾರೆ.

ತಾಲೀಮು ನಡೆಸಿದ್ದರು

ಕೇಂದ್ರದಲ್ಲಿ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಒಂದು ಹಂತದಲ್ಲಿ, ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್‌ ಅವರಿಗೇ ಬಿಜೆಪಿ ಟಿಕೆಟ್‌ ಸಿಗುತ್ತದೆ ಎನ್ನಲಾಗಿತ್ತು. ಇದಕ್ಕೆ ತಾಲೀಮು ಎನ್ನುವಂತೆ ಶ್ರದ್ಧಾ ಕಾರ್ಯಕರ್ತರ ಜೊತೆಗೆ ಇರುತ್ತಿದ್ದರು ಹಾಗೂ ವಿವಿಧ ಗ್ರಾಮಗಳಿಗೂ ಭೇಟಿ ನೀಡಿ ಜನರ ಮನದಾಳ ಅರಿಯುವ ಪ್ರಯತ್ನವನ್ನೂ ನಡೆಸಿದ್ದರು. ಕೊನೆಗೆ ಪಕ್ಷವು ಅವರ ತಾಯಿಗೆ ಟಿಕೆಟ್‌ ನೀಡಿದೆ. ಹೀಗಾಗಿ, ಅಧಿಕೃತವಾಗಿಯೇ ಅವರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಸಹೋದರಿ ಸ್ಫೂರ್ತಿಯೊಂದಿಗೆ ದಿನವೂ ಒಂದಷ್ಟು ಹಳ್ಳಿಗಳಲ್ಲಿ ಸಂಚರಿಸಿ ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಹುರುಪು ತುಂಬುತ್ತಿದ್ದಾರೆ.

ಬಿಜೆಪಿ ಸರ್ಕಾರದ ಸಾಧನೆ ಹಾಗೂ ತಂದೆ ನೀಡಿದ ಕೊಡುಗೆಗಳನ್ನು ಪ್ರಸ್ತಾಪಿಸಿ ಬೆಂಬಲ ಕೋರುತ್ತಿದ್ದಾರೆ. ಅಲ್ಲಲ್ಲಿ ದೇಗುಲ, ಮಠಗಳಿಗೂ ಭೇಟಿ ನೀಡಿ ಬಿಜೆಪಿಯ ಸಾಂಪ್ರದಾಯಿಕ ಮತಗಳು ಚುದುರಿ ಹೋಗದಂತೆ ನೋಡಿಕೊಳ್ಳುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಅವರನ್ನು ಮಹಿಳೆಯರು ಆರತಿ ಬೆಳಗಿ, ಅರಿಸಿನ–ಕುಂಕುಮ ನೀಡಿ ಆತ್ಮೀಯವಾಗಿ ಕಾಣುವುದು ಕಂಡುಬರುತ್ತಿದೆ. ಶ್ರದ್ಧಾ, ಸಾಮಾಜಿಕ ಜಾಲತಾಣವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ರಾಜಕೀಯಕ್ಕಾಗಿ ತರಬೇತಿ:

‘ಮಕ್ಕಳು ರಾಜಕೀಯಕ್ಕೆ ಬರುತ್ತಾರೆ. ಆದರೆ, ಈಗಲ್ಲ. ಅವರಿಗೆ ರಾಜಕೀಯ ತರಬೇತಿ ನೀಡುತ್ತಿದ್ದೇನೆ’ ಎಂದಿದ್ದ ಸತೀಶ, ಈ ಉಪ ಚುನಾವಣೆಯನ್ನು ‘ತರಬೇತಿ ಶಾಲೆ’ಯಾಗಿ ಮಾಡಿಕೊಂಡಿದ್ದಾರೆ. ಅವರ ಸೂಚನೆ ಮೇರೆಗೆ ಮಕ್ಕಳು ವಿವಿಧೆಡೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ವಿಶೇಷವಾಗಿ ಯುವ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಅಪ್ಪನ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಅಬ್ಬರದ ಪ್ರಚಾರದಲ್ಲಿ ತೊಡಗುತ್ತಿದ್ದಾರೆ. ಊರಿನ ಕಟ್ಟೆಯಲ್ಲಿ ಜನರೊಂದಿಗೆ ಕುಳಿತು ಬೆರೆಯುತ್ತಿದ್ದಾರೆ. ಅವರ ಅಂತರಾಳ ಅರಿಯುವ ಯತ್ನದಲ್ಲಿದ್ದಾರೆ.

‘ಮಕ್ಕಳನ್ನು ಚುನಾವಣಾ ರಾಜಕಾರಣಕ್ಕೆ ತರುವ ಇರಾದೆ ಸತೀಶ ಅವರದಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಚಾರ ಅವರಿಗೆ ತರಬೇತಿ ಪಡೆದಂತಾಗಲಿದೆ. ಒಂದೊಮ್ಮೆ ಉಪ ಚುನಾವಣೆಯಲ್ಲಿ ಗೆದ್ದಲ್ಲಿ, ಈಗ ತಾವು ಪ್ರತಿನಿಧಿಸುತ್ತಿರುವ ಯಮಕನಮರಡಿ ಕ್ಷೇತ್ರಕ್ಕೆ ಎದುರಾಗುವ ಉಪ ಚುನಾವಣೆಯಲ್ಲಿ ಮಕ್ಕಳಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಯೋಚನೆಯೂ ಅವರಿಗಿದೆ’ ಎನ್ನುತ್ತಾರೆ ಸತೀಶ ಜಾರಕಿಹೊಳಿ ಆಪ್ತರು.

***

ತಂದೆ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಉಪ ಚುನಾವಣೆಯಲ್ಲಿ ಅವರಿಗೆ ಮತ ನೀಡಿ, ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕೊಡಬೇಕೆಂದು ಕೋರುತ್ತಿದ್ದೇನೆ
ಪ್ರಿಯಾಂಕಾ ಜಾರಕಿಹೊಳಿ

***

ತಂದೆ ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು. ಕ್ಷೇತ್ರದಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದನ್ನು ಜನರು ಮರೆತಿಲ್ಲ. ಹೀಗಾಗಿ, ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

- ಶ್ರದ್ಧಾ ಶೆಟ್ಟರ್

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು