ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರ್ವೇಕ್ಷಣೆ: ಕುಸಿದ ಸ್ಮಾರ್ಟ್‌ ಸಿಟಿ!

ಹೋದ ವರ್ಷ 248ನೇ ಸ್ಥಾನದಲ್ಲಿತ್ತು, ಈ ಬಾರಿ 270ಕ್ಕೆ ಇಳಿದಿದೆ
Last Updated 25 ಜೂನ್ 2018, 12:09 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಲ್ಲಿ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಳಗಾವಿ ನಗರವು 248ನೇ ಸ್ಥಾನದಿಂದ 270ಕ್ಕೆ ಕುಸಿದಿದೆ.

ಕೇಂದ್ರವು 4 ವರ್ಷಗಳಿಂದ ಸ್ವಚ್ಛ ನಗರಗಳ ರ್‍ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಮೊದಲೆರಡು ವರ್ಷ ಇಲ್ಲಿನ ನಗರಪಾಲಿಕೆಯು ಸ್ಪರ್ಧಿಸಿರಲಿಲ್ಲ. ಸ್ಪರ್ಧೆಯೊಡ್ಡಿದ ಮೊದಲನೇ ಯತ್ನದಲ್ಲೇ (ಹೋದ ವರ್ಷ) 2000ಕ್ಕೆ 829.29 ಅಂಕಗಳನ್ನು ಪಡೆದು, ಗಮನಾರ್ಹ ಸಾಧನೆ ಮಾಡಿತ್ತು. ಸ್ಥಾನವನ್ನು ಸುಧಾರಿಸಿಕೊಳ್ಳಬೇಕು ಎನ್ನುವ ಗುರಿಯ ಭಾಗವಾಗಿ ಹಲವು ಪ್ರಯತ್ನಗಳನ್ನು ಮಾಡಿದ ನಡುವೆಯೂ, ಫಲ ದೊರೆತಿಲ್ಲದಿರುವುದು ಕಂಡುಬಂದಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ತಕ್ಕಂತೆ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿಲ್ಲದಿರುವುದು ಹೆಚ್ಚಿನ ಅಂಕ ಗಳಿಸುವುದಕ್ಕೆ ತೊಡಕಾಗಿ ಪರಿಣಮಿಸಿದೆ.

2000 ಅಂಕಗಳಲ್ಲಿ 900 ಅಂಕಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಯತ್ನ ಹಾಗೂ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದಕ್ಕೆ ನೀಡಲಾಗುತ್ತದೆ. 600 ಅಂಕಗಳನ್ನು ನಾಗರಿಕರ ಪ್ರತಿಕ್ರಿಯೆ ಮತ್ತು 600 ಅಂಕವನ್ನು ಕೇಂದ್ರದ ನಿಗದಿತ ಏಜೆನ್ಸಿ ನಡೆಸುವ ಸ್ವತಂತ್ರ ಪರಿಶೀಲನೆ ಮೂಲಕ ಕೊಡಲಾಗುತ್ತದೆ.

ವೈಯಕ್ತಿಕ ಶೌಚಾಲಯಗಳಿಲ್ಲ:

ನಗರವು 58 ವಾರ್ಡ್‌ಗಳಿದ್ದು, 5 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. 1.20 ಲಕ್ಷಕ್ಕೂ ಹೆಚ್ಚಿನ ಮನೆಗಳಿವೆ. ಈ ಪೈಕಿ ಬಹುತೇಕ ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಆದರೆ, ಕೊಳೆಗೇರಿಗಳಲ್ಲಿ ಹಾಗೂ ಹೊರವಲಯದ ಕೆಲವು ಬಡಾವಣೆಗಳಲ್ಲಿ ಇಂದಿಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಅಲ್ಲದೇ, ಆ ಭಾಗದ ಅಭಿವೃದ್ಧಿಯೂ ಆಮೆವೇಗದಲ್ಲಿ ಸಾಗಿದೆ. ಇದರಿಂದಾಗಿ, ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಲಾಗಿದೆ. ಇದು, ಹೆಚ್ಚಿನ ಅಂಕ ದೊರೆಯದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಅಂತೆಯೇ, ಸಾರ್ವಜನಿಕ ಶೌಚಾಲಯಗಳ ಕೊರತೆಯೂ ನಗರವನ್ನು ಕಾಡುತ್ತಿದೆ. ಈ ಎಲ್ಲ ಅಂಶಗಳನ್ನೂ ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ.

‌ಬಹುತೇಕ ಬಡಾವಣೆಗಳಲ್ಲಿ, ಪಾಲಿಕೆಯ ವಾಹನದ ಮೂಲಕ ತೆರಳುವ ಸಿಬ್ಬಂದಿ ಮನೆ ಮನೆಗಳಿಂದ ಕಸ ಸಂಗ್ರಹಿಸುತ್ತಾರೆ. ಈ ತ್ಯಾಜ್ಯವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿದೆ. ಈ ಅಭ್ಯಾಸಕ್ಕೆ ಕೆಲವು ಅಂಕಗಳು ದೊರೆತಿವೆ. ಆದರೆ, ಎಲ್ಲೆಂದರಲ್ಲಿ, ಚರಂಡಿ, ನಾಲೆಗಳಿಗೆ ತ್ಯಾಜ್ಯ ಹಾಕುವ ಸಾರ್ವಜನಿಕರ ‘ಅಭ್ಯಾಸ’ದಿಂದಾಗಿ ಕೆಲವು ಅಂಕಗಳನ್ನು ಕಳೆದುಕೊಳ್ಳಲಾಗಿದೆ. ಕೇಂದ್ರದ ಮಾನದಂಡದ ಪ್ರಕಾರ, ಅಂಕ ನೀಡುವಾಗ ನಾಗರಿಕರಲ್ಲಿರುವ ಪ್ರಜ್ಞೆಯನ್ನೂ ಪರಿಗಣಿಸಲಾಗುತ್ತದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ:

ಒಳ್ಳೆಯ ರ‍್ಯಾಕಿಂಗ್‌ ಪಡೆಯುವುದರಿಂದ ನಗರಕ್ಕೆ ವಿಶೇಷ ಅನುದಾನ ದೊರೆಯುವುದಿಲ್ಲ. ಆದರೆ, ವಿವಿಧ ಯೋಜನೆಗಳಲ್ಲಿ ಆಯ್ಕೆಗೆ ಯತ್ನಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುತ್ತದೆ. ದೇಶದ ಮಟ್ಟದಲ್ಲಿ ಗಮನಸೆಳೆಯುವುದಕ್ಕೆ ಅನುಕೂಲವಾಗುತ್ತದೆ.

ನಗರದಲ್ಲಿ 42 ಸಾರ್ವಜನಿಕ ಶೌಚಾಲಯಗಳಿವೆ. ಇವುಗಳಲ್ಲಿ ಕೆಲವಷ್ಟೇ ಬಳಕೆಯಲ್ಲಿವೆ. ಕೆಲವು, ನಿರ್ವಹಣೆಯ ಕೊರತೆಯಿಂದಾಗಿ ಬಳಲುತ್ತಿವೆ. ಸಂಪೂರ್ಣ ಒಳಚರಂಡಿ ವ್ಯವಸ್ಥೆಯೂ ನಗರದಲ್ಲಿಲ್ಲ. ಮಲಿನ ನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ಸ್ಥಾಪನೆಯ ಯೋಜನೆ ನನೆಗುದಿಗೆ ಬಿದ್ದಿದೆ. ಶೇ 46ಕ್ಕೂ ಹೆಚ್ಚಿನ ಮನೆಗಳಿಂದ ಒಳಚರಂಡಿಗೆ ಸಂಪರ್ಕವಿಲ್ಲ. ಇದೆಲ್ಲವನ್ನೂ ಪರಿಗಣಿಸಿ, ಅಂಕ ಕೊಡಲಾಗಿದೆ ಅಧಿಕಾರಿಗಳು ತಿಳಿಸಿದರು.

ಸುಧಾರಣೆಗೆ ಕ್ರಮ:

‘ನಗರಕ್ಕೆ ಒಳ್ಳೆಯ ಸ್ಥಾನ ಪಡೆಯುವುದಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ, ಇದಕ್ಕೆ ಹೆಚ್ಚಿನ ಫಲ ಸಿಗಲಿಲ್ಲ. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿರುವ ಪ್ರಜ್ಞೆಗೂ ಅಂಕಗಳನ್ನು ನೀಡಲಾಗುತ್ತದೆ. ಇಂತಹ ಮಾನದಂಡಗಳ ಕಾರಣದಿಂದ ಸುಧಾರಣೆ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಮೈಸೂರು ಹೊರತುಪಡಿಸಿ ಇತರ ನಗರಗಳಿಗೆ ಹೋಲಿಸಿದರೆ ಬೆಳಗಾವಿ ಸ್ವಚ್ಛವಾಗಿದೆ. ಮುಂದಿನ ಬಾರಿ 150ನೇ ಸ್ಥಾನದೊಳಗೆ ಬರಲು ಶ್ರಮಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು.

‘ಹೋದ ವರ್ಷದಿಂದ ₹ 6 ಕೋಟಿಗೂ ಹೆಚ್ಚಿನ ಅನುದಾನವನ್ನು ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತಿದೆ. ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಹೆಚ್ಚಾಗಿ ನಡೆಸಲಾಗುವುದು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ಜನರು ಕೂಡ ಸಹಕಾರ ನೀಡಬೇಕು. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವವರಿಗೆ ಪ್ರೋತ್ಸಾಹ ಕೊಡಲಾಗುವುದು. ವಿವಿಧೆಡೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳನ್ನು ಬಳಕೆಗೆ ಮುಕ್ತಗೊಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT