ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡಾನ್–3’ ಯೋಜನೆಯಡಿ ಕಾರ್ಯಾಚರಣೆ: ಅಹಮದಾಬಾದ್, ಪುಣೆ ವಿಮಾನ ಆರಂಭ

‘ಉಡಾನ್–3’ ಯೋಜನೆಯಡಿ ಕಾರ್ಯಾಚರಣೆ
Last Updated 15 ಮೇ 2019, 14:26 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಿಂದ ‘ಉಡಾನ್–3’ ಯೋಜನೆಯಡಿ ಅಹಮದಾಬಾದ್ ಹಾಗೂ ಪುಣೆ ನಗರಗಳಿಗೆ ವಿಮಾನಗಳ ಹಾರಾಟಕ್ಕೆ ಬುಧವಾರ ಚಾಲನೆ ನೀಡಲಾಯಿತು. ಇದರೊಂದಿಗೆ ಯೋಜನೆಯಲ್ಲಿ 3 ವಿಮಾನಗಳು ಕಾರ್ಯಾಚರಣೆ ಆರಂಭಿಸಿದಂತಾಗಿದೆ. ಹೈದರಾಬಾದ್ ಮಾರ್ಗದ ವಿಮಾನ ಮೇ 1ರಿಂದ ಶುರುವಾಗಿತ್ತು.

ಬೆಂಗಳೂರು–ಬೆಳಗಾವಿ–ಅಹಮದಾಬಾದ್–ಬೆಳಗಾವಿ–ಬೆಂಗಳೂರು ಮಾರ್ಗದಲ್ಲಿ ಮೆ.ಗೋಡಾವತ್‌ ಕಂಪನಿಯ ಸ್ಟಾರ್‌ ಏರ್‌ ಹಾಗೂ ಬೆಂಗಳೂರು–ಬೆಳಗಾವಿ–ಪುಣೆ–ಬೆಳಗಾವಿ–ಬೆಂಗಳೂರು ವಿಮಾನವು ಮೆ. ಅಲಯನ್ಸ್‌ ಏರ್‌ ಕಂಪನಿಯದಾಗಿದೆ.

ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ, ಎರಡೂ ಕಂಪನಿಗಳ ಅಧಿಕಾರಿಗಳು ಪ್ರಯಾಣಿಕರಿಂದ ಕೇಕ್‌ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದರು.

ಅಹಮದಾಬಾದ್‌ ವಿಮಾನ ಮಂಗಳವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 8.40ಕ್ಕೆ ಬರುವ ವಿಮಾನ, 9.20ಕ್ಕೆ ಇಲ್ಲಿಂದ ಅಹಮದಾಬಾದ್‌ಗೆ ತೆರಳುತ್ತದೆ. ಅಲ್ಲಿಂದ ಮಧ್ಯಾಹ್ನ 1ಕ್ಕೆ ಬಂದು 1.50ಕ್ಕೆ ಬೆಂಗಳೂರಿಗೆ ಹೋಗುತ್ತದೆ. ಭಾನುವಾರ ಸಂಜೆ 4.15ಕ್ಕೆ ಬೆಂಗಳೂರಿನಿಂದ ಬಂದು 4.40ಕ್ಕೆ ಅಹಮದಾಬಾದ್‌ಗೆ ಹೋಗಿ ರಾತ್ರಿ 10.20ಕ್ಕೆ ಮರಳಲಿದೆ. 10.40ಕ್ಕೆ ಬೆಂಗಳೂರಿಗೆ ತೆರಳುತ್ತದೆ.

50 ಸೀಟುಗಳ ಈ ವಿಮಾನದಲ್ಲಿ ಮೊದಲ ದಿನ ಶೇ 83ರಷ್ಟು ಸೀಟುಗಳು ಭರ್ತಿಯಾಗಿದ್ದವು. ಬೆಳಗಾವಿ–ಅಹಮದಾಬಾದ್‌ಗೆ 43, ಅಹಮದಾಬಾದ್‌ನಿಂದ ಬೆಳಗಾವಿಗೆ 41 ಮತ್ತು ಬೆಳಗಾವಿ–ಬೆಂಗಳೂರಿಗೆ 42 ಮಂದಿ ಪ್ರಯಾಣಿಸಿದರು.

ಪುಣೆಗೆ ಹೋಗುವ ವಿಮಾನವು ಮಂಗಳವಾರ ಬಿಟ್ಟು ಉಳಿದ ಎಲ್ಲ ದಿನಗಳಲ್ಲೂ ಹಾರಾಡಲಿದೆ (ಆದರೆ, ಮಂಗಳವಾರವೂ ಈ ವಿಮಾನ ಇರುತ್ತದೆ). ಮಧ್ಯಾಹ್ನ 3.40ಕ್ಕೆ ಬೆಂಗಳೂರಿನಿಂದ ಬಂದು ಸಂಜೆ 4.05ಕ್ಕೆ ಪುಣೆಯತ್ತ ಹೊರಡಲಿದೆ. ಪುಣೆಯಿಂದ ಸಂಜೆ 7.05ಕ್ಕೆ ಬಂದು, 7.30ಕ್ಕೆ ಬೆಂಗಳೂರಿಗೆ ಹೋಗುತ್ತದೆ. ಮಂಗಳವಾರ ಸಂಜೆ 5.05ಕ್ಕೆ ಬೆಂಗಳೂರಿಗೆ ತೆರಳುತ್ತದೆ. ಮೊದಲ ದಿನ ಪುಣೆಗೆ 25 ಹಾಗೂ ಪುಣೆ– ಬೆಳಗಾವಿಗೆ 23 ಪ್ರಯಾಣಿಕರು ಇದ್ದರು. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿಲ್ದಾಣ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT