ಸುವರ್ಣ ವಿಧಾನಸೌಧ (ಬೆಳಗಾವಿ): ಅತ್ಯಾಚಾರ, ಜಾತಿನಿಂದನೆ ಮತ್ತು ಎಚ್ಐವಿ ಸೋಂಕು ಹಬ್ಬಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಸೋಮವಾರ ಪಟ್ಟು ಹಿಡಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ನ ಪಿ.ಎಂ. ನರೇಂದ್ರಸ್ವಾಮಿ, ‘ಮುನಿರತ್ನ ವಿರುದ್ಧ ಜಾತಿನಿಂದನೆ ಆರೋಪದಡಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇಂತಹ ವ್ಯಕ್ತಿ ಸದನದಲ್ಲಿ ಇರಬಾರದು. ದಲಿತರನ್ನು ಅವಮಾನಿಸಿದ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಿ. ಅವರು ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ ಸದನಕ್ಕೆ ಬರಲು ಅವಕಾಶ ನೀಡಿ’ ಎಂದು ಆಗ್ರಹಿಸಿದರು.

‘ಶಾಸಕರಾಗಿರುವ ವ್ಯಕ್ತಿಯೇ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಶಾಸಕ ಸ್ಥಾನ ಮತ್ತು ಸದನಕ್ಕೆ ಇವರು ಕಳಂಕ ತಂದಿದ್ದಾರೆ. ಅವರನ್ನು ಅಮಾನತು ಮಾಡಿ ಸಭಾಧ್ಯಕ್ಷರು ಆದೇಶ ಹೊರಡಿಸಬೇಕು. ಪೀಠ ಆದೇಶ ಹೊರಡಿಸುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಕಾಂಗ್ರೆಸ್ನ ಪ್ರಸಾದ್ ಅಬ್ಬಯ್ಯ, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವರು ನರೇಂದ್ರಸ್ವಾಮಿ ಅವರ ಮಾತನ್ನು ಬೆಂಬಲಿಸಿದರು. ಪ್ರಸಾದ್ ಅಬ್ಬಯ್ಯ ಮಾತು ಮುಂದುವರಿಸುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಆಕ್ಷೇಪ ಎತ್ತಿದರು. ನ್ಯಾಯಾಲಯದಲ್ಲಿರುವ ಪ್ರಕರಣದ ಚರ್ಚೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ರೇವಣ್ಣ ತಮ್ಮ ಪಕ್ಷದ ಸದಸ್ಯರೊಂದಿಗೆ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು.

ಈ ವೇಳೆ ರೇವಣ್ಣ ವಿರುದ್ಧ ಹರಿಹಾಯ್ದ ನರೇಂದ್ರಸ್ವಾಮಿ ಅವರು, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇನ್ನೊಂದೆಡೆ ಕಾಂಗ್ರೆಸ್ ಸದಸ್ಯರು, ‘ದಲಿತರ ವಿರೋಧಿ ಬಿಜೆಪಿ, ಜೆಡಿಎಸ್ಗೆ ಧಿಕ್ಕಾರ’ ಎಂದು ಘೋಷಣೆ ಕೂಗಲಾರಂಭಿಸಿದರು. ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಅಷ್ಟರಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಪೀಠಕ್ಕೆ ಮರಳಿದರು.

‘ನ್ಯಾಯಾಲಯದಲ್ಲಿರುವ ಪ್ರಕರಣದ ಕುರಿತು ಚರ್ಚೆಗೆ ಅವಕಾಶವಿಲ್ಲ’ ಎಂದು ಬಿಜೆಪಿಯ ವಿ.ಸುನಿಲ್ ಕುಮಾರ್ ಅವರು ಕ್ರಿಯಾಲೋಪ ಎತ್ತಿದರು.

‘ಅಶೋಕಣ್ಣ ನಿಮ್ಮ ರಕ್ಷಣೆಗಾಗಿ ನಾವು ಬಂದಿದ್ದೇವೆ’ ಎಂದು ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರನ್ನುದ್ದೇಶಿಸಿ ಹೇಳಿದರು. ಗದ್ದಲ ಹೆಚ್ಚಾಗುತ್ತಿದ್ದಂತೆಯೇ ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷರು, ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಸಭೆ ನಡೆಸಿದರು.

ಪುನಃ ಕಲಾಪ ಆರಂಭಿಸಿದ ಸಭಾಧ್ಯಕ್ಷರು, ‘ಚರ್ಚೆಯ ಬೇಡಿಕೆ ಮತ್ತು ಕ್ರಿಯಾಲೋಪದ ಕುರಿತು ಮಂಗಳವಾರ ಬೆಳಿಗ್ಗೆ ತೀರ್ಮಾನ ನೀಡುತ್ತೇನೆ’ ಎಂದರು. ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.