ಸೋಮವಾರ, ಜೂನ್ 14, 2021
21 °C

ಬಿಮ್ಸ್‌ನಲ್ಲಿ ಹಾಸಿಗೆ ಹಂಚಿಕೆಯಲ್ಲಿ ವಂಚನೆ: ಎಂಇಎಸ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇಲ್ಲಿನ ಬಿಮ್ಸ್‌ (ಜಿಲ್ಲಾಸ್ಪತ್ರೆ) ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇದ್ದರೂ ಭರ್ತಿಯಾಗಿದೆ ಎಂದು ಹೇಳಿ, ಕೋವಿಡ್ ಸೋಂಕಿತರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ವಂಚಿಸಲಾಗುತ್ತಿದೆ’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಆರೋಪಿಸಿದ್ದಾರೆ.

ಈ ವಿಷಯವಾಗಿ ಸಂಘಟನೆಯ ಮುಖಂಡ ಸದಾನಂದ ಬಾಮನೆ ಅವರು ಬಿಮ್ಸ್‌ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಅವರೊಂದಿಗೆ ವಾದ ನಡೆಸಿರುವ ಆಡಿಯೊ ಹಾಗೂ ಶುಭಂ ಶೆಳಕೆ ಅವರು ಕೆಲವರೊಂದಿಗೆ ಆಸ್ಪತ್ರೆಯ ವಾರ್ಡ್‌ಗಳಿಗೆ ನುಗ್ಗಿ ಪರಿಶೀಲಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿದೆ.

ವಾರ್ಡ್‌ ಒಂದನ್ನು ಪ್ರವೇಶಿಸುವ ಶುಭಂ, ‘50ಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಇವೆ. ಆದರೆ, ಕೊಡದೆ ಜನಸಾಮಾನ್ಯರಿಗೆ ತೊಂದರೆ ಕೊಡಲಾಗುತ್ತಿದೆ’ ಎಂದು ದೂರುವ ದೃಶ್ಯ ವಿಡಿಯೊದಲ್ಲಿದೆ. ಹಾಸಿಗೆಗಳ ಬಳಿ ಆಮ್ಲಜನಕ ವ್ಯವಸ್ಥೆ ಇದೆಯೇ ಎನ್ನುವುದನ್ನು ಉಪಕರಣಗಳನ್ನು ಆನ್ ಮಾಡಿ ಪರಿಶೀಲಿಸುವುದು ಕೂಡ ವಿಡಿಯೊದಲ್ಲಿದೆ. ಅದನ್ನು ಎಂಇಎಸ್‌ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಂಘಟನೆಯೊಂದರ ಕಾರ್ಯಕರ್ತರು ಆಸ್ಪತ್ರೆಯ ವಾರ್ಡ್‌ಗಳನ್ನು ಪ್ರವೇಶಿಸಿ ವಿಡಿಯೊ ಮಾಡುವುದಕ್ಕೆ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅವಕಾಶ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಮ್ಸ್‌ ನಿರ್ದೇಶಕ ಡಾ.ವಿನಯ್, ‘ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು ಖಾಲಿ ಇಲ್ಲ. ಈ ವಿಷಯವನ್ನು ಅವರಿಗೆ ತಿಳಿಸಿದ್ದೇನೆ. ಅವರು ಅನಧಿಕೃತವಾಗಿ ವಾರ್ಡ್‌ಗೆ ಹೋಗಿ, ಆಮ್ಲಜನಕ ಸೌಲಭ್ಯವಿಲ್ಲದ ಹಾಗೂ ವಿವಿಧ ಕಾರಣಗಳಿಂದ ಬಳಸಲಾಗದೆ ಇರುವ ಹಾಸಿಗೆಗಳ ಬಳಿ ನಿಂತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಷಯದಲ್ಲಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಹೇಗೆ ಪ್ರವೇಶ ಕೊಟ್ಟಿರಂದು ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು