ಬುಧವಾರ, ಆಗಸ್ಟ್ 10, 2022
23 °C
ಮಹಾರಾಷ್ಟ್ರದಲ್ಲಿ ಕೋವಿಡ್ 3ನೇ ಅಲೆ ಶೀಘ್ರ: ವರದಿ

ನೆರೆಯಲ್ಲಿ ಕೋವಿಡ್ 3ನೇ ಅಲೆ: ಬೆಳಗಾವಿ ಗಡಿಯಲ್ಲಿ ಆತಂಕ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್ 3ನೇ ಅಲೆಯು ನೆರೆಯ ಮಹಾರಾಷ್ಟ್ರದ ಮೂಲಕವೇ ಅದರಲ್ಲೂ ಕೆಲವೇ ವಾರಗಳಲ್ಲಿ ವ್ಯಾಪಕವಾಗಿ ಹರಡಲಿದೆ ಎಂಬ ತಜ್ಞರ ವರದಿಯು ಗಡಿ ಜಿಲ್ಲೆ ಬೆಳಗಾವಿಯಲ್ಲೂ ಆತಂಕ ಸೃಷ್ಟಿಸಿದೆ.

ಉಭಯ ರಾಜ್ಯಗಳ ಜನರು ವ್ಯಾಪಾರ–ವಹಿವಾಟು ಹಾಗೂ ಆರೋಗ್ಯ ಸೇವೆ ಮೊದಲಾದ ಅಗತ್ಯಗಳಿಗಾಗಿ ಪರಸ್ಪರ ಅವಲಂಬಿತರಾಗಿರುವುದು ಮತ್ತು ಸಂಪರ್ಕ ಸಾಧಿಸಬೇಕಾದ ಅನಿವಾರ್ಯತೆ ಇರುವುದು ಭೀತಿ ಉಂಟಾಗುವುದಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯ ಪ್ರಭಾವಳಿ ಕಡಿಮೆ ಆಗುತ್ತಿರುವ ನಡುವೆಯೇ, ಮಹಾರಾಷ್ಟ್ರದಿಂದ ಬಂದಿರುವ ಸುದ್ದಿಯು ಭೀತಿಯ ಅಲೆಯನ್ನೇ ಸೃಷ್ಟಿಸಿದೆ.

ಸಂಪರ್ಕವಿದೆ:

ಮುಖ್ಯವಾಗಿ ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಕಾಗವಾಡ ತಾಲ್ಲೂಕುಗಳ ಜನರು ಒಂದಿಲ್ಲೊಂದು ಕಾರಣಕ್ಕೆ ಮಹಾರಾಷ್ಟ್ರ ರಾಜ್ಯದ ಹಲವು ನಗರ–ಪಟ್ಟಣಗಳೊಂದಿಗೆ ಬಹಳಷ್ಟು ಸಂಪರ್ಕ ಇಟ್ಟುಕೊಂಡಿದ್ದಾರೆ. ಅಲ್ಲಿನವರು ಇಲ್ಲಿಗೆ; ಇಲ್ಲಿನವರು ಅಲ್ಲಿಗ ಹೋಗಿ ಬರುತ್ತಾರೆ. ಲಾಕ್‌ಡೌನ್‌ ಕಾರಣದಿಂದ ನಿರ್ಬಂಧವಿದ್ದರೂ ಜನರು ಅಲ್ಲಿಗೆ ಹೋಗುವುದು–ಬರುವುದನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಾಗಿಲ್ಲ. ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎನ್ನುವುದು ಸಂಪೂರ್ಣ ಪಾಲನೆ ಆಗುತ್ತಿಲ್ಲ. ಹೀಗಾಗಿ, ನೆರೆಯಿಂದ ಇಲ್ಲಿಗೂ ಕೋವಿಡ್ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಗಡಿಯ ಜನರು ಮಹಾರಾಷ್ಟ್ರದ ಮೀರಜ್ ಮೊದಲಾದ ಕಡೆಗಳಲ್ಲಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಅಲ್ಲಿನವರು ಇಲ್ಲಿಗೆ ಬರುವುದು ಹಾಗೂ ಇಲ್ಲಿನವರು ಅಲ್ಲಿಗೆ ಹೋಗುವುದನ್ನು ತಡೆಯುವುದು ಜಿಲ್ಲಾಡಳಿತ ಮತ್ತು ಪೊಲೀಸರ ಸವಾಲಾಗಿಯೇ ಪರಿಣಮಿಸಿದೆ. ಕಳ್ಳದಾರಿಗಳಲ್ಲಿ ಜನರು ಓಡಾಡುವುದನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಇದೇ ರೀತಿಯ ಸ್ಥಿತಿ ಮುಂದೆಯೂ ಇದ್ದರೆ, 3ನೇ ಅಲೆಯು ಜಿಲ್ಲೆಯನ್ನು ಹೆಚ್ಚಾಗಿ ಬಾಧಿಸುವುದರಲ್ಲಿ ಸಂದೇಶವಿಲ್ಲ ಎಂದು ಹೇಳಲಾಗುತ್ತಿದೆ. ತಜ್ಞರ ವರದಿಯು ಎಚ್ಚರಿಕೆ ಕರೆ ಗಂಟೆ ಮೊಳಗಿಸಿದೆ.

ಅನಿವಾರ್ಯತೆ ಇದೆ:

ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲೂ ಮಹಾರಾಷ್ಟ್ರದಿಂದ ಬಂದವರಿಂದಲೇ ಹಲವರಿಗೆ ಸೋಂಕು ಹರಡಿತ್ತು. 2ನೇ ಅಲೆಯಲ್ಲಿ ಆ ರಾಜ್ಯದಿಂದ ವಾಪಸಾದ ವಲಸೆ ಕಾರ್ಮಿಕರಿಂದಾಗಿ ಹಳ್ಳಿಗಳಲ್ಲೂ ಕೊರೊನಾ ಅಟ್ಟಹಾಸ ಮೆರೆದಿದ್ದನ್ನು ಆರೋಗ್ಯ ಇಲಾಖೆ ಗುರುತಿಸಿತ್ತು. 3ನೇ ಅಲೆಯು ಕೋವಿಡ್ ಲಸಿಕೆ ಪಡೆಯದವರು ಮತ್ತು ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಯು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ವ್ಯಾಪಿಸಿರುವುದರಿಂದಾಗಿ ಅಲ್ಲಿಗೆ ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರ ಬಂದ್ ಮಾಡಲಾಗಿದೆ. ಅಲ್ಲಿನ ಭಕ್ತರು ಹೆಚ್ಚಾಗಿ ಬರುವುದರಿಂದ ಸುಕ್ಷೇತ್ರ ಯಲ್ಲಮ್ಮನಗುಡ್ಡದ ರೇಣುಕಾ ದೇವಸ್ಥಾನ, ಚಿಂಚಲಿ ಮಾಯಕ್ಕದೇವಿ ದೇಗುಲಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. 3ನೇ ಅಲೆ ಭೀತಿಯು, ಈ ನಿರ್ಬಂಧವನ್ನು ಇನ್ನಷ್ಟು ಕಾಲ ವಿಸ್ತರಿಸಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಹೆಚ್ಚಿನ ಅಪಾಯ ತಡೆಯುವ ನಿಟ್ಟಿನಲ್ಲಿ, ಕೋವಿಡ್ ಲಸಿಕಾಕರಣ ಕಾರ್ಯವನ್ನೂ ಚುರುಕುಗೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಿಂದ ಜನರು ಇಲ್ಲಿಗೆ ಹಾಗೂ ಇಲ್ಲಿಂದ ಅಲ್ಲಿಗೆ ಜನರು ಓಡಾಡದಂತೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಗ್ರಾಮ ಪಂಚಾಯ್ತಿಗಳ ಮಟ್ಟದಲ್ಲಿ ನಿಗಾ ವಹಿಸಬೇಕಾಗುತ್ತದೆ. ಕಾಲು ದಾರಿಗಳಲ್ಲೂ ನಿಗಾ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು