ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೋವಿಡ್‌ ಮಾದರಿಗಳ ಪರೀಕ್ಷೆ ವಿಳಂಬ!

ಐಸಿಎಂಆರ್‌ ಒಂದು ವಾರದಿಂದ ಸ್ಥಗಿತ;
Last Updated 10 ಜುಲೈ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದ್ದ ಕಾರಣ ಇಲ್ಲಿನ ನೆಹರು ನಗರದಲ್ಲಿರುವ ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಐಸಿಎಂಆರ್-ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ’ಯ ಪ್ರಯೋಗಾಲಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌–19 ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದ್ದು, ಸೋಂಕಿತರ ಗಂಟಲು ದ್ರವ ಮಾದರಿಗಳ ಪರೀಕ್ಷೆಗೆ ಭಾರಿ ಹಿನ್ನಡೆ ಉಂಟಾಗಿದೆ. ಸಾವಿರಾರು ಮಾದರಿಗಳು ಪರೀಕ್ಷೆಗಾಗಿ ಕಾದುಕುಳಿತಿವೆ.

ಜಿಲ್ಲೆಯಲ್ಲಿ ಇದುವರೆಗೆ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಹಾಗೂ ಐಸಿಎಂಆರ್‌ ಪ್ರಯೋಗಾಲಯದಲ್ಲಿ ರೋಗಿಗಳ ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು. ಬಿಮ್ಸ್‌ ಪ್ರಯೋಗಾಲಯದಲ್ಲಿ ಪ್ರತಿದಿನ 100ರಿಂದ 200 ಮಾದರಿಗಳ ಪರೀಕ್ಷೆ ನಡೆಯುತ್ತಿತ್ತು. ಐಸಿಎಂಆರ್‌ ಪ್ರಯೋಗಾಲಯದಲ್ಲಿ ಪ್ರತಿದಿನ 40ರಿಂದ 450 ಮಾದರಿಗಳ ಪರೀಕ್ಷೆ ನಡೆಯುತ್ತಿತ್ತು.

ಕಳೆದ ವಾರ ಐಸಿಎಂಆರ್ ಸಿಬ್ಬಂದಿಯೊಬ್ಬರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು. ಇದರಿಂದಾಗಿ ಪ್ರಯೋಗಾಲಯವನ್ನು ಬಂದ್‌ ಮಾಡಲಾಗಿದೆ. ಸೋಂಕು ನಿವಾರಕ ದ್ರಾವಣ ಸಿಂಪರಿಸಲಾಗಿದೆ. ಕನಿಷ್ಠವೆಂದರೂ ಎಂಟು ದಿನಗಳವರೆಗೆ ಬಂದ್‌ ಮಾಡಿ, ಪುನರ್‌ ಆರಂಭಿಸಬೇಕಾಗಿದೆ. ಇದು ಬಂದ್‌ ಆಗಿರುವ ಕಾರಣ, ಮಾದರಿಗಳ ಪರೀಕ್ಷೆಯು ಮೊದಲಿನ ತೀವ್ರತೆಯಿಂದ ನಡೆಯುತ್ತಿಲ್ಲ. ಬಿಮ್ಸ್ ಮೇಲೆಯೇ ಅವಲಂಬನೆಯಾಗಿದ್ದರಿಂದ ಮಾದರಿಗಳ ಪರೀಕ್ಷೆ ವಿಳಂಬವಾಗಿ ಸಾಗಿದೆ.

ಪ್ರತಿದಿನ ಸಂಗ್ರಹ:ಜಿಲ್ಲೆಯಲ್ಲಿ ದಿನೇದಿನೇ ಸೋಂಕು ತೀವ್ರವಾಗಿ ಹರಡುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಜ್ವರ, ಶೀತ, ಕೆಮ್ಮು, ಮೈ ಕೈ ನೋವಿನಿಂದಲೂ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇವು ಕೂಡ ಕೋವಿಡ್‌ ಲಕ್ಷಣಗಳಿರುವುದರಿಂದ ಇವರ ಮಾದರಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೀಗಾಗಿ ಮಾದರಿಗಳ ಸಂಗ್ರಹ ಪ್ರತಿದಿನ 500ರಿಂದ 600ಕ್ಕೆ ತಲುಪಿದೆ. ಇವುಗಳಲ್ಲಿ ಬಹುತೇಕ ಮಾದರಿಗಳು ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದು, ಇನ್ನೂ ಪ್ರಯೋಗಾಲಯಕ್ಕೆ ಹೋಗಿಲ್ಲ.

ಮಾದರಿಗಳು ಸಂಗ್ರಹವಾದಷ್ಟು ವೇಗವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ. ಪ್ರಯೋಗಾಲಯದ ಕೊರತೆಯಿಂದಾಗಿ ಪರೀಕ್ಷೆಗಳು ನಿಧಾನವಾಗಿ ಸಾಗಿವೆ. ಬೆಂಗಳೂರು, ಹುಬ್ಬಳ್ಳಿಯ ಪ್ರಯೋಗಾಲಯಕ್ಕೂ ಮಾದರಿ ಕಳುಹಿಸುವ ಪ್ರಯತ್ನಗಳು ನಡೆದಿವೆ. ಅಲ್ಲಿಯೂ ಸಾಕಷ್ಟು ಮಾದರಿಗಳು ಬಾಕಿ ಇರುವುದರಿಂದ ಈ ಪ್ರಯತ್ನ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಿಲ್ಲ. ಐಸಿಎಂಆರ್‌ ಪುನರ್‌ ಆರಂಭಗೊಂಡ ನಂತರ ಪರೀಕ್ಷೆಗಳು ವೇಗವಾಗಿ ನಡೆಯಬಹುದೆನ್ನುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT