ಮಂಗಳವಾರ, ಫೆಬ್ರವರಿ 25, 2020
19 °C

ಕಲೆಗಿದೆ ಬದುಕು ಕಟ್ಟಿಕೊಡುವ ಶಕ್ತಿ: ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಲೆಯು ಬದುಕು ಕಟ್ಟಿಕೊಡುವ ಮಹಾಶಕ್ತಿ ಹೊಂದಿದೆ’ ಎಂದು ಖ್ಯಾತ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕಲಾತ್ಮಕ ಬದುಕಿನೊಂದಿಗೆ ಸಮಾಜ ಪರ ಕಾಳಜಿ ಹೊಂದಬಹುದು. ದೇಶ ದ್ರೋಹ ಮತ್ತು ಸಮಾಜ ದ್ರೋಹದಂತಹ ನಕಾರಾತ್ಮಕತೆಯಿಂದ ದೂರವಿದ್ದು ಪ್ರಗತಿಶೀಲ ಮನಸ್ಸನ್ನು ಹೊಂದಲು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲೆಯ ಆಸಕ್ತಿ ಬಹು ಮುಖ್ಯವಾದುದಾಗಿದೆ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ’ ಎಂದರು.

‘ಕಲೆಗೆ ದೈವತ್ವದ ಸ್ಪರ್ಶವಿದ್ದಾಗ ಮಾತ್ರ ಪ್ರತಿಭೆ ಹುಟ್ಟುತ್ತದೆ. ಜೀವನದಲ್ಲಿ ಗುರಿ ಸಾಧಿಸಬೇಕಾದರೆ, ಪಠ್ಯ ಮತ್ತು ಪಠ್ಯೇತರ ಆಸಕ್ತಿಗಳನ್ನು ಸಮ ತೂಕದಲ್ಲಿ ನಿಭಾಯಿಸಬೇಕು. ತಂದೆ-ತಾಯಿ, ಗುರುಗಳನ್ನು ಗೌರವಿಸಬೇಕು. ಕನ್ನಡ ನಾಡು-ನುಡಿ ಸಂಸ್ಕೃತಿಗಾಗಿ ಎಲ್ಲರೂ ದುಡಿಯಬೇಕು’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕದ ಭಾವ, ಭಾಷೆಯ ಜನಪದ ಗೀತೆಗಳಲ್ಲಿ ಇರುವ ಗತ್ತು, ಗಮ್ಮತ್ತು ಹಾಗೂ ಸೊಗಡು ಮತ್ತ್ಯಾವುದರಲ್ಲೂ ಸಿಗುವುದಿಲ್ಲ’ ಎಂದ ಅವರು, ‘ಚುಟು ಚುಟು ಅಂತೈತಿ’ ಹಾಗೂ ‘ಮಧುರಾ ಪಿಸುಮಾತಿಗೆ’ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಮೋಯಿನ್ ಎಂ. ಜುನ್ನೇದಿ ಮಾತನಾಡಿ, ‘ಕ್ರೀಡೆ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪೂರಕವಾಗಿದೆ. ಯೋಗ ಮತ್ತು ಪ್ರಾಣಾಯಾಮಗಳು ಜೀವನಶೈಲಿಯನ್ನು ಸಮತೋಲನದಲ್ಲಿಡುತ್ತವೆ. ಹೀಗಾಗಿಯೇ ಕ್ರೀಡೆಗೆ ಇಂದು ಜಾಗತಿಕ ಮನ್ನಣೆ ದೊರತಿದೆ’ ಎಂದರು.

ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಮಾತನಾಡಿ, ‘ಈವರೆಗೂ ಮುನ್ನೂರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಜುನ್ನೇದಿ ಅವರು ತಮ್ಮ ಅಂಗವಿಕಲ್ಯ ಮೀರಿ ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ‘ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸ್ಪರ್ಧಾತ್ಮಕ ಮನೋಭಾವಗಳು ವಿದ್ಯಾರ್ಥಿ ಬದುಕಿನ ಮೂರು ಯಶಸ್ವಿ ಸೂತ್ರಗಳಾಗಿವೆ. ಸಾಂಸ್ಕೃತಿಕ ಮನಸ್ಸು ಪ್ರತಿಭೆಗಳನ್ನು ಹುಟ್ಟು ಹಾಕುತ್ತದೆ. ದೈಹಿಕ ನ್ಯೂನತೆಗಳು ಸಾಧನೆಗಳಿಗೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ’ ಎಂದರು.

ಡಾ.ಶಮಿತಾ ಮಲ್ನಾಡ್ ಮತ್ತು ಮೋಯಿನ್ ಎಂ. ಜುನ್ನೇದಿ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.

ರಶ್ಮಿ ಹಲಕರ್ಣಿ, ವಾಣ ಬೈರಶಟ್ಟಿ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಜಿಮ್ಖಾನಾ ಸಾಂಸ್ಕೃತಿಕ ಉಪಾಧ್ಯಕ್ಷೆ ಡಾ.ಮಹೇಶ್ವರಿ ಕಾಚಾಪೂರ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್.ಒ. ಹಲಸಗಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಬಾಳಿಕಾಯಿ ಪರಿಚಯಿಸಿದರು. ಕಾವೇರಿ ಗುಂತಕಲ್ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು