ಬೆಳಗಾವಿ: ‘ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ. ಆನ್‌ಲೈನ್‌ನಲ್ಲಿ ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಕಂಡುಬಂದಿವೆ. ವಿಡಿಯೊ ಕರೆ ಮೂಲಕವೇ ನಾವು ನಡೆಸುವ ವಿಚಾರಣೆಗೆ ಹಾಜರಾಗಿ. ನಮ್ಮ ಕ್ಯಾಮೆರಾ ಕಣ್ಗಾವಲಿನಲ್ಲೇ ಇರಿ...’
ಇಂಥ ಕರೆಗಳು ನಿಮಗೂ ಬಂದರೆ ಎಚ್ಚರ.
ಹೌದು. ಇಂಟರ್‌ನೆಟ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಹೀಗೆ ಕರೆ ಮಾಡುತ್ತಿರುವ ವಂಚಕರು ಹಣಕ್ಕೆ ಪೀಡಿಸುತ್ತಿದ್ದಾರೆ. ಅವರಿಗೆ ಹೆದರಿ ಮಾಹಿತಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದವರು, ನ್ಯಾಯ ಕೋರಿ ಬೆಳಗಾವಿ ನಗರ ಸಿಇಎನ್ ಅಪರಾಧ ಠಾಣೆ ಮೆಟ್ಟಿಲೇರುತ್ತಿದ್ದಾರೆ.
ಇಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರತೊಡಗಿದೆ. 2023ರಲ್ಲಿ ಈ ಠಾಣೆಯಲ್ಲಿ 64 ದೂರು ದಾಖಲಾಗಿದ್ದು, ಜನರು ₹3.38 ಕೋಟಿ ಕಳೆದುಕೊಂಡಿದ್ದರು. ಈ ವರ್ಷ ಒಂಭತ್ತೇ ತಿಂಗಳಲ್ಲಿ 58 ದೂರು ದಾಖಲಾಗಿದ್ದು, ₹8.64 ಕೋಟಿ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ವಂಚನೆಗೆ ಒಳಗಾದವರಲ್ಲಿ ನೌಕರರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿ ಎಲ್ಲ ಸ್ತರಗಳ ಜನರಿದ್ದಾರೆ.
ಕ್ಲಿಕ್ ಮಾಡುತ್ತಲೇ ಹಣ ಮಾಯ:
‘ಬ್ಯಾಂಕ್ ಖಾತೆಗಳು, ಕ್ರೆಡಿಟ್ ಕಾರ್ಡ್‌ಗಳು, ತ್ವರಿತ ಸಾಲಗಳು, ವಿವಿಧ ಬಹುಮಾನ ಪಡೆಯಲು ಮತ್ತು ತಮ್ಮ ದಾಖಲೆಗಳನ್ನು ನವೀಕರಿಸಲು ಇಲ್ಲಿ ನೀಡಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಿ’ ಎನ್ನುವ ಸಂದೇಶಗಳು ಸ್ಮಾರ್ಟ್‌ಫೋನ್‌ಗಳಿಗೆ ಬರುತ್ತಿವೆ. ಅದನ್ನು ನಂಬಿ ಜನರು ಲಿಂಕ್ ಮೇಲೆ ಕ್ಲಿಕ್ ಮಾಡುತ್ತಲೇ ಹಣ ಎಗರಿಸುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಕಂಡುಬಂದಿದೆ.
ಪೊಲೀಸರಿಂದ ಜಾಗೃತಿ:
ಸೈಬರ್ ಅಪರಾಧಕ್ಕೆ ಆಸ್ಪದ ನೀಡುವಂಥ ಇಂಥ ಸಂದೇಶಗಳಿಗೆ ಸ್ಪಂದಿಸದಂತೆ ಬೆಳಗಾವಿ ನಗರ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ‘ನಕಲಿ ಜಾಹೀರಾತು ಮತ್ತು ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಬೇಡಿ’ ಎಂದು ಕೋರುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳಂತೆ ನಟನೆ
‘ಪೊಲೀಸ್ ಅಧಿಕಾರಿಗಳಂತೆ ನಟಿಸುತ್ತಿರುವ ವಂಚಕರು ಮುಂಬೈ, ದೆಹಲಿಯಿಂದ ಕರೆ ಮಾಡುತ್ತಿರುವುದಾಗಿ ಹೇಳುತ್ತಾರೆ. ನೀವು ದೊಡ್ಡ ಅಪರಾಧ ಮಾಡಿದ್ದೀರಿ. ಪೋರ್ನ್ ವೀಕ್ಷಿಸುವಾಗ ಸಿಕ್ಕಿಬಿದ್ದಿದ್ದೀರಿ ಎಂದೆಲ್ಲ ಹೇಳಿ, ವಿಡಿಯೊ ಕರೆ ಮಾಡಿ ವಿಚಾರಣೆ ನಡೆಸುತ್ತಾರೆ. ನಂತರ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿ, ಹಣಕ್ಕೆ ಬೇಡಿಕೆ ಇರಿಸುತ್ತಾರೆ. ಅನೇಕ ಜನರು ತಮ್ಮ ಮುಗ್ಧತೆಯಿಂದಾಗಿಯೇ ಸೈಬರ್ ವಂಚಕರಿಗೆ ಬಲಿಯಾಗುತ್ತಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಣ, ಸಾಲ, ಕೆವೈಸಿ ಅಪ್‌ಡೇಟ್‌ಗೆ ಸಂಬಧಿಸಿ ವಂಚಕರು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ, ಅನೇಕರು ಹಣ ಕಳೆದುಕೊಂಡಿದ್ದಾರೆ. ಅಪರಿಚಿತರಿಂದ ಇಂಥ ಕರೆ ಬಂದಾಗ ಯಾರೂ ಭಯಪಡಬಾರದು. ಸಮೀಪದ ಪೊಲೀಸ್ ಠಾಣೆ ಸಂಪರ್ಕಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.