ಶನಿವಾರ, ಜುಲೈ 31, 2021
20 °C
ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಹಿರೇಮಠ

ನೆರೆ, ಅತಿವೃಷ್ಟಿ ನಿರ್ವಹಣೆ: ಸಿದ್ಧತೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನೆರೆ ಹಾಗೂ ಅತಿವೃಷ್ಟಿಯಂತಹ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಜನರ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಬಾರಿ ಮಳೆಗಾಲ ಸಾಮಾನ್ಯವಾಗಿರಲಿದೆ ಎಂಬ ವರದಿಗಳಿವೆ. ಆದಾಗ್ಯೂ ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಹವಾಮಾನ ಇಲಾಖೆಯು ಕಾಲ ಕಾಲಕ್ಕೆ ನೀಡುವ ಮುನ್ಸೂಚನೆ ಮತ್ತು ವರದಿ ಆಧರಿಸಿ ಸಂಬಂಧಿಸಿದ ಅಧಿಕಾರಿಗಳು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

ತಂಡಗಳ ರಚನೆ:

‘ಎರಡು ವರ್ಷಗಳಲ್ಲಿ ಪ್ರವಾಹ‌ ನಿರ್ವಹಣೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಲಾಗಿದೆ. ಈ ಬಾರಿಯೂ ಅದೇ ರೀತಿ ತಂಡಗಳನ್ನು ರಚಿಸಲಾಗುವುದು. ಕಳೆದ ಬಾರಿಯಂತೆ ಆಯಾ ಸ್ಥಳಗಳಲ್ಲಿಯೇ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗುವುದು. ಬೋಟ್‌ಗಳನ್ನು ಮುಂಚಿತವಾಗಿ ಒದಗಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅಗತ್ಯವಿರುವ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ತಯಾರಿಗಳನ್ನೂ ಮಾಡಿಕೊಳ್ಳಬೇಕು’ ಎಂದರು.

ಸ್ಥಾಪನೆಗೆ ಕ್ರಮ:

‘ತುರ್ತು ಸಂದರ್ಭದಲ್ಲಿ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಅನುಕೂಲ ಆಗುವಂತೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಎಲ್ಲ ತಾಲ್ಲೂಕು, ನಗರ ಸ್ಥಳೀಯ ಸಂಸ್ಥೆಗಳಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪಿಸಬೇಕು. ಅವು ಜಿಲ್ಲಾಮಟ್ಟದ ನಿಯಂತ್ರಣ ಕೊಠಡಿ ಜೊತೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ನಿಯೋಜಿತ ತಾಲ್ಲೂಕುಗಳಲ್ಲಿ ಸಭೆ ನಡೆಸಿ ಸಜ್ಜಾಗಬೇಕು’ ಎಂದು ತಿಳಿಸಿದರು.

‘ಪ್ರವಾಹ, ಅತಿವೃಷ್ಟಿ ಬಳಿಕ ಸಾಂಕ್ರಾಮಿಕ ರೋಗಗಳ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಜನರು ಮತ್ತು ಜಾನುವಾರುಗೆ ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ರೈತ ಕುಟುಂಬಗಳ ಜಾನುವಾರುಗೆ ಮೇವು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಮಾರ್ಗಸೂಚಿ ಪಾಲನೆಗೆ ಸೂಚನೆ:

‘ಈ ಬಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪರಿಹಾರ ಕೇಂದ್ರಗಳಲ್ಲಿ ಮಾರ್ಗಸೂಚಿ ಪಾಲನೆಗೆ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು’ ಎಂದು ತಿಳಿಸಿದರು.

‘ತುರ್ತು ಪರಿಸ್ಥಿತಿಯಲ್ಲಿ ಜನರ ರಕ್ಷಣೆಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಸೇನೆಯ ಅಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ವಿ. ದರ್ಶನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ವಿಕ್ರಮ್ ಆಮಟೆ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್ ಇದ್ದರು.

ನಾಲಾಗಳ ಸ್ವಚ್ಛತೆಗೆ ನಿರ್ದೇಶನ

‘ನದಿ ತೀರಗಳು ಮಾತ್ರವಲ್ಲದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ನಾಲಾ ಹಾಗೂ ದೊಡ್ಡ ಚರಂಡಿಗಳನ್ನು ಸ್ವಚ್ಛ ಮಾಡಬೇಕು. ಪ್ರವಾಹ ಸಂದರ್ಭದಲ್ಲಿ ಬಳ್ಳಾರಿ ನಾಲಾದಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇದನ್ನೂ‌ ಸ್ವಚ್ಛಗೊಳಿಸುವ ಕೆಲಸವನ್ನು ಸಂಬಂಧಿಸಿದ ‌ಇಲಾಖೆಯ ಅಧಿಕಾರಿಗಳು ತಕ್ಷಣವೇ ಕೈಗೊಳ್ಳಬೇಕು. ಇದರಿಂದ ಮಳೆಗಾಲದಲ್ಲಿ ಅನುಕೂಲ ಆಗಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಜಿಲ್ಲೆಯ ಹಾಗೂ ನೆರೆಯ ಮಹಾರಾಷ್ಟ್ರದ ಜಲಾಶಯಗಳ ಅಧಿಕಾರಿಗಳ ಜತೆ ನಿರಂತರ ಸಂಪರ್ಕವಿಟ್ಟುಕೊಂಡು ಜಲಾಶಯ ಮಟ್ಟ ಹಾಗೂ ನೀರು ಬಿಡುಗಡೆ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ‌ ಮಾಡಿಕೊಳ್ಳಬೇಕು. ನೀರು ಬಿಡುಗಡೆ ಕುರಿತು ಮುಂಚಿತವಾಗಿಯೇ ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಇದರಿಂದ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟಬಹುದು’ ಎಂದರು.

ತುರ್ತು ಸಂದರ್ಭದಲ್ಲಿ ಜನರ ಸ್ಥಳಾಂತರ ಹಾಗೂ ಪರಿಹಾರ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸ್ವಯಂಸೇವಾ ಸಂಸ್ಥೆಗಳ ಪಟ್ಟಿ ಸಿದ್ಧವಾಗಿಟ್ಟುಕೊಳ್ಳಬೇಕು.
ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು