ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ-ಬೆಳಗಾವಿ ರೈಲು ಮಾರ್ಗ ಈ ಅವಧಿಯಲ್ಲೇ ಪೂರ್ಣಗೊಳಿಸಿ: ಪ್ರಕಾಶ ಹುಕ್ಕೇರಿ

ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಆಗ್ರಹ
Last Updated 26 ಸೆಪ್ಟೆಂಬರ್ 2021, 13:42 IST
ಅಕ್ಷರ ಗಾತ್ರ

ಬೆಳಗಾವಿ: ‘ಧಾರವಾಡ- ಬೆಳಗಾವಿ ರೈಲು ಮಾರ್ಗವನ್ನು ಈಗಿನ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಒತ್ತಾಯಿಸಿದರು.

ಇಲ್ಲಿನ ಸಾಂವಗಾಂವ ರಸ್ತೆಯ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಭಾನುವಾರ ನಡೆದ ದಿ.ಸುರೇಶ ಅಂಗಡಿ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯೋಜನೆಗೆ ಕೇಂದ್ರ ಸರ್ಕಾರವು ₹ 900 ಕೋಟಿ ಮಂಜೂರು ಮಾಡಿದೆ‌. ಅದನ್ನು ಬಳಸಿ ಅನುಷ್ಠಾನ ಮಾಡಿಕೊಟ್ಟರೆ ಮಂಗಲಾ ಅಂಗಡಿ ಅವರು 2ನೇ ಬಾರಿಗೆ ಸಂಸದೆಯಾಗಿ ಆಯ್ಕೆ ಆಗುತ್ತಾರೆ’ ಎಂದು ಎಚ್ಚರಿಕೆ ದಾಟಿಯಲ್ಲಿ ಹೇಳಿದರು.

ಸುರೇಶ ಅಂಗಡಿ ಪುತ್ರಿ ಸ್ಫೂರ್ತಿ ಪಾಟೀಲ, ‘ತಂದೆಯು ಬಸವಣ್ಣನವರ ತತ್ವವಾದ ಕಾಯಕ‌ ಮತ್ತು ದಾಸೋಹ ಪಾಲಿಸಿದರು. ಸರಳ- ಸಜ್ಜನ ಸ್ವಭಾವದಿಂದ ಜನರ ಮನಗೆದ್ದಿದ್ದರು. ಅವರು ಆರಂಭಿಸಿದ ಬೆಳಗಾವಿ–ಬೆಂಗಳೂರು ರೈಲನ್ನು ಜನರು ಅಂಗಡಿ ರೈಲು ಎಂದೇ ಪ್ರೀತಿಯಿಂದ ಕರೆಯುತ್ತಿದ್ದಾರೆ’ ಎಂದರು.

ಅಪರೂಪದ ರಾಜಕಾರಣಿ:

ಜಿಲ್ಲಾ ಉಸ್ತುವಾರಿ ‌ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಅಂಗಡಿ ಅಪರೂಪದ ರಾಜಕಾರಣಿ. ಮುಖ ಕೆಡಿಸಿಕೊಂಡು ಮಾತನಾಡಿದ್ದನ್ನು ನೋಡಲಿಲ್ಲ. ಕೊನೆವರೆಗೂ ನನ್ನನ್ನು ಸಾಹೇಬ್ರೇ ಎಂದೇ ಗೌರವದಿಂದ ಕಂಡರು. ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಮುಂದೆಯೂ ಹೆಜ್ಜೆಗುರುತುಗಳಾಗಿ ಉಳಿಯಲಿವೆ’ ಎಂದು ಹೇಳಿದರು.

ಅರಣ್ಯ ಸಚಿವ ಉಮೇಶ ಕತ್ತಿ, ‘ಅವರೊಂದಿಗೆ ಉತ್ತಮ ಸಂಬಂಧವಿತ್ತು. ಅವರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ರಾಜಕಾರಣಿ ಅಲ್ಲದಿದ್ದರೂ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ದೇಶದಾದ್ಯಂತ ಹಲವು ಕೊಡುಗೆಗಳನ್ನು ನೀಡಿದ್ದಾರೆ’ ಎಂದು ಸ್ಮರಿಸಿದರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ‌ ಕೋರೆ ಮಾತನಾಡಿ, ‘ನಾನು ಕಾಂಗ್ರೆಸ್‌ನಲ್ಲಿದ್ದಾಗ ಅವರು ಬಿಜೆಪಿ‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ನಾಲ್ಕೈದು ಜನರೊಂದಿಗೆ ಧ್ವಜ ಹಿಡಿದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ನಿನ್ನ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆ. ಕೊನೆಗೆ ಅವರೇ ನನ್ನನ್ನು ಒತ್ತಾಯ ಮಾಡಿ ಬಿಜೆಪಿಗೆ ಸೇರಿಸಿಕೊಂಡರು’ ಎಂದು ನೆನೆದರು.

ಹಸಿರುನಿಶಾನೆ ತೋರಬೇಕು:

ಸಂಸದೆ ಮಂಗಲಾ ಅಂಗಡಿ ಮಾತನಾಡಿ, ‘ಬೆಳಗಾವಿ– ಬೆಂಗಳೂರು ರೈಲು ಮಾರ್ಗದ ಕಾಮಗಾರಿಗೆ ಅನುದಾನ ನೀಡಿ ಹಸಿರುನಿಶಾನೆ ತೋರಿಸಬೇಕು. ಈ‌ ಮೂಲಕ ಅಂಗಡಿ ಅವರ ಹೆಸರು ಹಸಿರಾಗಿರುವಂತೆ ಮಾಡಬೇಕು’ ಎಂದು ಕೋರಿದರು.

ಶಾಸಕ ಜಗದೀಶ ಶೆಟ್ಟರ್, ‘ಜಿಲ್ಲೆಯಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬುವ ಕೆಲಸವನ್ನು ಅಂಗಡಿ ಮಾಡಿದ್ದರು. ಪ್ರತಿ‌ ಚುನಾವಣೆಯಲ್ಲೂ ಲೀಡ್ ಹೆಚ್ಚೇ ಆಗುತ್ತಿತ್ತು. ಆ ರೀತಿಯ ಜನಪ್ರಿಯತೆ ಗಳಿಸಿದ್ದರು. ಬೆಳಗಾವಿ-ಬೆಂಗಳೂರು ರೈಲಿಗೆ ಅಂಗಡಿ ಅವರ ಹೆಸರು ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

‘ಯೋಜನೆಗೆ ಬೇಕಾದ ಭೂಸ್ವಾಧೀನಕ್ಕೆ ಹಾಗೂ ರಾಜ್ಯದ ಪಾಲಿನ ಹಣವನ್ನು ಮುಖ್ಯಮಂತ್ರಿ ‌ಒದಗಿಸಿದರೆ ಅದು ನಿಜವಾದ ಶ್ರದ್ಧಾಂಜಲಿ ಆಗುತ್ತದೆ’ ಎಂದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇದ್ದರು. ಮುಗಳಖೋಡ- ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ,‌ ಇಂಚಲದ ಶಿವಾನಂದ ಭಾರತಿ ಸ್ವಾಮೀಜಿ, ಮುರಗೋಡ ದುರದುಂಡೇಶ್ವರ ಶ್ರೀ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ‌ಹಿರೇಮಠದ ಚಂದ್ರಶೇಖರ ‌ಶಿಬಾಚಾರ್ಯ ಸ್ವಾಮೀಜಿ, ಹೂಲಿಯ ಉಮೇಶ ಶಿವಾಚಾರ್ಯ ಸ್ವಾಮೀಜಿ, ಗೋಕಾಕದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಮುತ್ನಾಳ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT