ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಕ್ಕಲೆಬ್ಬಿಸಲು ಬಂದ ಅರಣ್ಯಾಧಿಕಾರಿಗಳು: ವಿಷದ ಬಾಟಲಿ ಹಿಡಿದು ಕುಳಿತ ಮಹಿಳೆಯರು

Published 20 ಆಗಸ್ಟ್ 2024, 15:39 IST
Last Updated 20 ಆಗಸ್ಟ್ 2024, 15:39 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತೆನೆಗಟ್ಟಿರುವ ಗೋವಿನ ಜೋಳ, ಎದೆ ಎತ್ತರ ಬೆಳೆದು ನಿಂತಿರುವ ಕಬ್ಬು ಬೆಳೆ ನಾಶ ಮಾಡಿ ಒಕ್ಕಲೆಬ್ಬಿಸಲು ಆಗಮಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ತಾಲ್ಲೂಕಿನ ದೇವಗಾಂವ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೆಲವು ಮಹಿಳೆಯರು ವಿಷದ ಬಾಟಲಿಗಳನ್ನೂ ಹಿಡಿದು ಕುಳಿತರು.

12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಬಂದಿದ್ದ ಅರಣ್ಯಾಧಿಕಾರಿಗಳನ್ನು ಜಮೀನಿನ ಬಳಿ ತಡೆದರು. ಪೊಲೀಸ್ ಅಧಿಕಾರಿಗಳು ಸಂಧಾನಕ್ಕೆ ಯತ್ನಿಸಿದರು. ಬೆಳೆ ನಾಶಕ್ಕೆ ಒಪ್ಪದ ರೈತರು, ‘ಇನ್ನೆರಡು ತಿಂಗಳಲ್ಲಿ ಬೆಳೆ ಕೈಗೆ ಬರುತ್ತದೆ. ಕೊಯ್ಲು ಮಾಡಲು ಅವಕಾಶ ನೀಡಬೇಕು’ ಎಂದು ರಮೇಶ ಉಗರಖೋಡ ಸೇರಿ ಹಲವಾರು ರೈತರು ವಾದಿಸಿದರು.

‘1957ರಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಬಂದಿದ್ದೇವೆ. ಪಹಣಿ ಪತ್ರಿಕೆಯ ಸಾಗುವಳಿದಾರರ ಕಾಲಮ್ಮಿನಲ್ಲಿ ಕೆಲವರ ಹೆಸರುಗಳಿವೆ. ಅನಂತರ ಈ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲಾಗಿದೆ’ ಎಂದು ರೈತರು ದೂರಿದರು.

‘ನಮ್ಮ ಪಕ್ಕಕ್ಕಿರುವ ಜಮೀನು ಸಾಗುವಳಿ ಮಾಡುತ್ತ ಬಂದಿದ್ದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲಾಗಿದೆ. ಅವರಿಗೆ ನೀಡಿದ ಭೂಮಿ ಹಕ್ಕು ನಮಗೇಕೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಇದೇ ಭೂಮಿಯಲ್ಲಿ ನಮ್ಮ ಬದುಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮದೆಂದು ಒಕ್ಕಲೆಬ್ಬಿಸಲು ಬಂದಿದ್ದಾರೆ. ಸಾಲಮಾಡಿ ಬಿತ್ತನೆ ಮಾಡಿದ್ದೇವೆ. ಇನ್ನೇನು ಬೆಳೆ ಕೈಗೆ ಬರಲಿದೆ. ಆದರೆ ಅರಣ್ಯಾಧಿಕಾರಿಗಳು ಬೆಳೆನಾಶ ಮಾಡಿ, ಟ್ರೆಂಚ್ ಹೊಡೆದು, ಸಸಿ ನೆಡಲು ಬಂದಿದ್ದಾರೆ. ಜಾಗ ಬಿಟ್ಟು ನಾವು ಕದಲುವುದಿಲ್ಲ. ನೀವು ತೋಡಿದ ಟ್ರೆಂಚ್ ನಲ್ಲಿ ನಮ್ಮನ್ನೂ ಮುಚ್ಚಿ ಹೋಗಿ’ ಎಂದು ಮಹಿಳೆಯರು ಆಕ್ರೋಶದಿಂದ ನುಡಿದರು.

ಪ್ರಕರಣ ಸುಖಾಂತ್ಯ:

ಸ್ಥಳಕ್ಕೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆ ಪದಾಧಿಕಾರಿಗಳಾದ ಬಿಷ್ಟಪ್ಪ ಶಿಂಧೆ, ಎಂ. ಎಫ್. ಜಕಾತಿ, ಅಪ್ಪೇಶ ದಳವಾಯಿ ಆಗಮಿಸಿದರು. ಟ್ರೆಂಚ್ ನಿರ್ಮಿಸಲು ಅನುಕೂಲ ಮಾಡಿಕೊಡುತ್ತೇವೆ. ಆದರೆ ರೈತರ ಬೆಳೆ ನಾಶ ಪಡಿಸಲು ಅವಕಾಶ ನೀಡುವುದಿಲ್ಲ ಎಂದರು.

ಇದಕ್ಕೆ ಅರಣ್ಯಾಧಿಕಾರಿಗಳು ಮತ್ತು ರೈತರು ಒಪ್ಪಿಕೊಂಡರು. ಇದರಿಂದಾಗಿ ಸ್ಥಳದಲ್ಲಿದ್ದ ಬಿಗುವಿನ ವಾತಾವರಣ ತಿಳಿಗೊಂಡಿತು. ಅರಣ್ಯಾಧಿಕಾರಿಗಳು ಟ್ರೆಂಚ್ ತೊಡುವ ಕಾಮಗಾರಿ ಕೈಗೊಂಡರು.

ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಅರಣ್ಯ ಇಲಾಖೆ ಭೂಮಿ ಅತಿಕ್ರಮಣ ಮಾಡಿ ಕೆಲವು ರೈತರು ಸಾಗುವಳಿ ಮಾಡಿದ್ದಾರೆ. ಕೋರ್ಟ್ ಆದೇಶದಂತೆ ಅವರನ್ನು ತೆರವುಗೊಳಿಸಲಾಗುತ್ತದೆ
ಶಿವಾನಂದ ಮಗದುಮ್ ಉಪ ಸಂರಕ್ಷಣಾಧಿಕಾರಿ ಗೋಲಿಹಳ್ಳಿ
36 ಎಕರೆಯಲ್ಲಿ ಮುತ್ತಜ್ಜನ ಕಾಲದಿಂದಲೂ ಸಾಗುವಳಿ ಮಾಡುತ್ತ ಬಂದಿದ್ದೇವೆ. ಅರಣ್ಯ ಇಲಾಖೆಯವರು ನಮ್ಮದೆಂದು ಬಂದಿದ್ದಾರೆ. ಯಾರದೇ ಆಗಿರಲಿ ನಮಗೆ ಭೂಮಿ ಹಕ್ಕು ನೀಡಬೇಕು
ರಮೇಶ ಉಗರಖೋಡ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT