ಶನಿವಾರ, ಆಗಸ್ಟ್ 13, 2022
24 °C

ಹಿಂದಿ ಹೇರಿಕೆ ನೀತಿ ಬಿಡಿ: ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ನೀತಿ ಮತ್ತು ಹಿಂದಿ ದಿವಸ್ ಆಚರಣೆಯನ್ನು ತಕ್ಷಣವೇ ಕೈಬಿಡಬೇಕು. ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಸಮಾನ ಗೌರವ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಕೇಂದ್ರ ಸರ್ಕಾರವು ಪ್ರಾದೇಶಿಕ ಭಾಷೆಗಳಿಗೆ ಕುತ್ತು ತರಲು ಹೊರಟಿರುವುದು ಸರಿಯಲ್ಲ. ಸದ್ಯದ ಭಾಷಾ ನೀತಿ ಕೂಡ ಸರಿ ಇಲ್ಲ. ದೇಶದಲ್ಲಿ ಭಾಷಾವಾರು  ಪ್ರಾಂತ್ಯಗಳನ್ನು ರಚಿಸಲಾಗಿದೆ. ಹೀಗಾಗಿ, ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಿಗೆ ಈ ಅವಕಾಶ ಈಗಾಗಲೇ ಇದೆ. ಅದನ್ನು ಇತರ ಎಲ್ಲ ಭಾಷೆಗಳಿಗೂ ವಿಸ್ತರಿಸಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ  ಭಾಷೆಗಳಿಗೂ ಸಮಾನ ಅವಕಾಶ ಮತ್ತು ಹಕ್ಕುಗಳು ಇರಬೇಕು. ಹಿಂದಿ ದಿವಸ್, ಹಿಂದಿ ಸಪ್ತಾಹದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು ಮತ್ತು ಯಾವ ಭಾಷೆಯನ್ನೂ ನಿರ್ಲಕ್ಷಿಸಕೂಡದು’ ಎಂದು ಒತ್ತಾಯಿಸಿದರು.

ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ‘ಕೇಂದ್ರ ಸರ್ಕಾರ ಕೆಲವೇ ರಾಜ್ಯಗಳ ಹಿತ ಕಾಪಾಡುವುದಕ್ಕಾಗಿ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಇದು ಖಂಡನೀಯ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನಿಂಗರಾಜ ಗುಂಡ್ಯಾಗೊಳ, ಗಣೇಶ ರೋಕಡೆ, ಬಸವರಾಜ ಅವರೊಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು