ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಪ್ಪು ಕಲ್ಪನೆ ಬಿಟ್ಟು ಅಂಗಾಂಗ ದಾನ ಮಾಡಿ: ಸಚಿವ ದಿನೇಶ್‌ ಗುಂಡೂರಾವ್‌

Published : 3 ಆಗಸ್ಟ್ 2024, 11:43 IST
Last Updated : 3 ಆಗಸ್ಟ್ 2024, 11:43 IST
ಫಾಲೋ ಮಾಡಿ
Comments

ಬೆಳಗಾವಿ: ‘ಯಾವ ಧರ್ಮವೂ ಅಂಗಾಂಗ ದಾನ ನಿಷೇಧಿಸಿಲ್ಲ. ಈ ಪದ್ಧತಿ ಅನುಸರಿಸಿದರೆ ಬದುಕಿನಲ್ಲಿ ಮೋಕ್ಷ ಸಿಗದು, ನಿಧನದ ನಂತರ ಸ್ವರ್ಗಕ್ಕೆ ಹೋಗಲಾಗದು ಎಂಬೆಲ್ಲ ತಪ್ಪು ಕಲ್ಪನೆ ಜನರಲ್ಲಿವೆ. ಇದರಿಂದ ಎಲ್ಲರೂ ಹೊರಬಂದು ಅಂಗಾಂಗ ದಾನಕ್ಕೆ ಮುಂದಾಗಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌ನ (ಕಾಹೇರ್‌) ಡಾ.ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ಭಾರತೀಯ ಅಂಗಾಂಗ ದಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಕಸಿ ಮಾಡಲು ಇಂದು ಅಂಗಾಂಗಗಳ ಅಗತ್ಯವಿದೆ. ಅಂಗಾಂಗ ದಾನದ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ಕಸಿಗಾಗಿ ಕಾಯುತ್ತಿರುವವರ ಬೇಡಿಕೆಯಂತೆ ಅಂಗಾಂಗ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಆಂದೋಲನ ರೂಪದಲ್ಲಿ ನಡೆಯಬೇಕಿದೆ’ ಎಂದರು.

‘ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದವರು ಮತ್ತು ಪ್ರೀತಿಪಾತ್ರರು ಸಾವನ್ನಪ್ಪುವ ಸ್ಥಿತಿ ಎದುರಾದಾಗ, ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. ಆದರೂ, ಕಷ್ಟಕಾಲದಲ್ಲೂ ಕೆಲವು ಕುಟುಂಬದವರು ಉತ್ತಮ ನಿರ್ಧಾರ ಕೈಗೊಂಡು, ಅಂಗಾಂಗ ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಅಂಥವರನ್ನು ಇಂದು ಗೌರವಿಸುತ್ತಿದ್ದೇವೆ. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಅವರನ್ನು ಗೌರವಿಸಿ, ಅಂಗಾಂಗ ದಾನದ ಮಹತ್ವ ಸಾರಲಾಗುವುದು. ಅಂಗಾಂಗ ದಾನಕ್ಕೆ ಇತರರಲ್ಲೂ ಪ್ರೇರಣೆ ತುಂಬಲಾಗುವುದು. ಜತೆಗೆ, ಅಂಗಾಂಗ ದಾನಿಗಳ ಕುಟುಂಬದವರ ಮನೆಗೆ ಭೇಟಿ ನೀಡಿ, ಪ್ರಶಂಸಾ ಪತ್ರಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಒಂದು ಜೀವ ಉಳಿಸಿದರೆ, ನಾವು ಇಡೀ ಕುಟುಂಬ ಉಳಿಸಿದಂತೆ. ಅಪಘಾತ, ಅನಾರೋಗ್ಯದ ಕಾರಣದಿಂದ ಯಾವುದೇ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಾಗ, ಬೇರೆಯವರಿಗೆ ಅಂಗಾಂಗ ದಾನ ಮಾಡಿದರೆ ಎಂಟು ಜನರ ಜೀವ ಉಳಿಸಬಹುದು. ಕಳೆದ ವರ್ಷ ರಾಜ್ಯದಲ್ಲಿ 178 ಮಂದಿ ಅಂಗಾಂಗ ದಾನ ಮಾಡಿದ್ದರು. ಇದರಿಂದ 878 ಜನರ ಕಸಿಗೆ ಅನುಕೂಲವಾಯಿತು. ಈಗ ಅಂಗಾಂಗ ದಾನದ ಕಸಿಗಾಗಿ 8,552 ಜನರು ಕಾಯುತ್ತಿದ್ದಾರೆ. ಆದರೆ, ಅವರು ಮತ್ತು ದಾನಿಗಳ ಮಧ್ಯೆ ದೊಡ್ಡ ಅಂತರವಿದೆ. ಅದನ್ನು ನೀಗಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ತಿಳಿಸಿದರು.

‘ಇಂದು ಜನರ ಆರೋಗ್ಯ ಹದಗೆಡಲು ಜೀವನಶೈಲಿಯೂ ಕಾರಣ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ರೂಢಿಸಿಕೊಂಡು, ಸದೃಢ ಆರೋಗ್ಯ ಹೊಂದಬೇಕು’ ಎಂದು ಕರೆ ನೀಡಿದರು.

ಶಾಸಕರಾದ ಆಸೀಫ್‌ ಸೇಠ್‌, ಬಾಬಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್‌, ಜೀವಸಾರ್ಥಕತೆ/ಸೋಟೊ(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು) ಸಹ ನಿರ್ದೇಶಕಿ ಡಾ.ರಜನಿ ಎಂ., ಜಿ.ಪಂ ಸಿಇಒ ರಾಹುಲ್‌ ಶಿಂಧೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಬೆಳಗಾವಿ ವಿಭಾಗೀಯ ಸಹ ನಿರ್ದೇಶಕಿ ಡಾ.ಎಸ್‌.ವಿ.ಮುನ್ಯಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT