ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಾಯಪೂರ್ವಕ ಸಾಲ ವಸೂಲಿ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಬ್ಯಾಂಕ್‌ಗಳವರಿಗೆ ಜಿಲ್ಲಾಧಿಕಾರಿ ಸೂಚನೆ
Last Updated 29 ಜೂನ್ 2021, 16:09 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್-19 ಸಂಕಷ್ಟದ ಸಮಯದಲ್ಲಿ ಮೈಕ್ರೋಫೈನಾನ್ಸ್ ಹಾಗೂ ಇತರ ಹಣಕಾಸು ಸಂಸ್ಥೆಗಳು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಸಮೀಕ್ಷಾ ಸಮಿತಿಯಿಂದ ಇಲ್ಲಿ ಮಂಗಳವಾರ ನಡೆದ ಮೈಕ್ರೋಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೊರೊನಾದಿಂದಾಗಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದು, ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬಾರದು. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬ್ಯಾಂಕ್‌ಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಸದ್ಯದ ಕಠಿಣ ಪರಿಸ್ಥಿತಿಗಳಿಂದಾಗಿ ಎಂಎಫ್‌ಐ ಮತ್ತು ಎನ್‌ಬಿಎಫ್‌ಸಿಗಳು ಕಠಿಣ ಚೇತರಿಕೆ ಕ್ರಮಗಳಿಗೆ ಹೋಗಬಾರದು’ ಎಂದು ಸಲಹೆ ನೀಡಿದರು.

‘ಕೈಗೆಟುಕುವ ವಸತಿ ಯೋಜನೆಗಳು ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ಪ್ರಾರಂಭವಾಗಿವೆ. ಸಾಲವನ್ನು ಶೀಘ್ರವಾಗಿ ಮಂಜೂರು ಮಾಡಬೇಕು. ಆತ್ಮನಿರ್ಭರ್ ನಿಧಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಆದ್ಯತೆ ನೀಡಬೇಕು. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಬೇಕು’ ಎಂದು ತಿಳಿಸಿದರು.

ಇದೇ ವೇಳೆ, 2020-21ನೇ ವಾರ್ಷಿಕ ಜಮಾ ಯೋಜನೆ ಮಂಡಿಸಲಾಯಿತು. ಆ ಪ್ರಕಾರ ₹ 17,052 ಕೋಟಿ ಗುರಿ ಹೊಂದಲಾಗಿತ್ತು. ಜಿಲ್ಲೆಯು ₹21,232 ಕೋಟಿ ಗುರಿ ತಲುಪಲಾಗಿದೆ. ಎಲ್ಲ ಬ್ಯಾಂಕುಗಳು ವಲಯವಾರು ಸಾಧನೆ ಮಾಡಿವೆ. ಕೃಷಿ ಕ್ಷೇತ್ರದಿಂದ ₹ 9,566 ಕೋಟಿ ಗುರಿ ಹೊಂದಿದ್ದು, ₹9,727 ಕೋಟಿ ಜಮೆ ಆಗಿದೆ. ಶೇ 102ರಷ್ಟು ಜಮೆಯಾಗಿದೆ. ಅಂತೆಯೇ, ಎಂಎಸ್‌ಎಂಇ ಕ್ಷೇತ್ರದಿಂದ ₹ 3,225 ಕೋಟಿ ಗುರಿಯಲ್ಲಿ ₹ 4,233 ಕೋಟಿ ಜಮೆ ಆಗಿದೆ. ಶೇ 131ರಷ್ಟು ಸಾಧನೆಯಾಗಿದೆ. ಆದ್ಯತೆ ಹಾಗೂ ಆದ್ಯತೇತರ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಲಾಗಿದೆ. 2012-22ನೇ ಸಾಲಿಗೆ ಆದ್ಯತೆ ಹಾಗೂ ಆದ್ಯತೇತರ ಕ್ಷೇತ್ರಗಳಿಗೆ ₹ 19,674 ಕೋಟಿ ಗುರಿ‌ ನೀಡಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ರಾಹುಲ್ ವಿಂಜಮುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT