ಭಾನುವಾರ, ಅಕ್ಟೋಬರ್ 25, 2020
28 °C
ನಳಿನ್ ಕುಮಾರ್‌ ಕಟೀಲ್ ಭೇಟಿಯಾದ ಆಕಾಂಕ್ಷಿಗಳು

ಬೆಳಗಾವಿ: ಚುನಾವಣೆ ಕಸರತ್ತು ಆರಂಭಿಸಿದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತಯಾರಿ ಆರಂಭಿಸಿದೆ.

ಅಂಗಡಿ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂದು ಅವರ ಬಂಧುಗಳು, ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇದಲ್ಲದೇ, ಮತ್ತಷ್ಟು ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಹೀಗಾಗಿ, ಮುಖಂಡರ ಅಭಿಪ್ರಾಯ ಆಲಿಸುವ ಕಸರತ್ತನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಪ್ರಾರಂಭಿಸಿದ್ದಾರೆ. ಶನಿವಾರ ಇಲ್ಲಿಗೆ ಬಂದು ವಾಸ್ತವ್ಯ ಹೂಡಿರುವ ಅವರು, ‘ಯಾರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಪ್ರಯೋಜನವಾಗಬಹುದು’ ಎನ್ನುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಚರ್ಚಿಸಿದರು. ಅವರನ್ನು ಆಕಾಂಕ್ಷಿಗಳು ಕೂಡ ಭೇಟಿಯಾಗಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ಪೂರ್ವ ತಯಾರಿಗೆ: ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಕಟೀಲ್, ‘ಪಕ್ಷದ ಸಂಘಟನೆಗಾಗಿ ಇಲ್ಲಿ ಸಭೆ ಕರೆಯಲಾಗಿದೆ. ಬರುವ ದಿನಗಳಲ್ಲಿ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆ ಬಲಪಡಿಸಲು ಚರ್ಚಿಸಲಾಗುತ್ತಿದೆ ಮತ್ತು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆ ನಂತರ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ’ ಎಂದು ಹೇಳಿದರು.

‘ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ಪಕ್ಷ ಬೆಳೆದಂತೆಯೇ ಲೆಕ್ಕ. ಅದೇನೇ ಅಸಮಾಧಾನ ಉಂಟಾದರೂ ಸರಿಪಡಿಸುವ ಸಾಮರ್ಥ್ಯ ಪಕ್ಷಕ್ಕಿದೆ. ಆಕಾಂಕ್ಷಿಗಳನ್ನೆಲ್ಲಾ ಸಮಾಧಾನಪಡಿಸಿ, ಈ ಚುನಾವಣೆಯಲ್ಲೂ ನಾವು ಗೆಲ್ಲಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರಿಂದ ಕಣ್ಣೀರು ಹಾಕಿಸಿದ್ದಾರೆ. ಅವರಿಗೆ ರೈತರ ಬಗ್ಗೆ ಮಾತನಾಡುವ  ನೈತಿಕತೆ ಇಲ್ಲ. ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿ ವಿರೋಧಿಸುವ ಯೋಗ್ಯತೆಯೂ ಇಲ್ಲ’ ಎಂದು ಟೀಕಿಸಿದರು.

‘ನಾಟಕದಿಂದಾಗಿ ಕಾಂಗ್ರೆಸ್‌ ಮನೆತನ ಹಾಳಾಗಿದೆ. ಮತ್ತಷ್ಟು ನಾಟಕ ಮಾಡಿದರೆ ಜನರು ಆ ಪಕ್ಷವನ್ನು ಅರಬ್ಬಿ ಸಮುದ್ರಕ್ಕೆ ಬಿಸಾಕುತ್ತಾರೆ’ ಎಂದರು.

‘ತಿದ್ದುಪಡಿ ಕಾಯ್ದೆಗಳಿಂದ ರೈತರು ಆನಂದ ಕಾಣಬಹುದು. ತಮ್ಮ ಬೆಳೆಗೆ ಬೆಲೆ ನಿಗದಿಪಡಿಸಿ, ನೆರವಾಗಿ ಮಾರಬಹುದು. ಕಾಂಗ್ರೆಸ್ ಎಂದಿಗೂ ರೈತರ ಪರವಾಗಿ ಚಿಂತಿಸಿರಲಿಲ್ಲ. ಅಧಿಕಾರದಲ್ಲಿದ್ದಾಗ ಯಾವುದೇ ಕೊಡುಗೆ ಕೊಡಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಫಸಲ್ ವಿಮೆ ಯೋಜನೆ ಜಾರಿಗೆ ತಂದರು. ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿದರು. ಸಾವಯವ ಕೃಷಿ ಆಯೋಗ ರಚಿಸಿದ್ದರು. ಅದನ್ನು ಸಿದ್ದರಾಮಯ್ಯ ರದ್ದುಪಡಿಸಿದರು ಮತ್ತು ಗೋಹತ್ಯೆ ನಿಷೇಧ ಕಾನೂನು ತೆಗೆದರು’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು