ಭಾನುವಾರ, ಮೇ 22, 2022
22 °C

ರೈತ ಹೋರಾಟಕ್ಕೆ ಮಂಡಿಯೂರಿದ ಕೇಂದ್ರ; ಬೆಳಗಾವಿಯಲ್ಲಿ ರೈತ ಮುಖಂಡರಿಂದ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು‌ ನಿರ್ಧರಿಸಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದನ್ನು ಸ್ವಾಗತಿಸಿ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ರೈತ ಮುಖಂಡರು ಶುಕ್ರವಾರ ವಿಜಯೋತ್ಸವ ಆಚರಿಸಿದರು.

ಪಟಾಕಿಗಳನ್ನು ಸಿಡಿಸಿ, ಅಲ್ಲಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ‘ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಇದಾಗಿದೆ. ಮಾರಕವಾಗಿದ್ದ ಆ ಕಾಯ್ದೆಗಳಿಂದ ರೈತರಿಗೆ ತೊಂದರೆ ಆಗುತ್ತದೆ ಎನ್ನುವುದು ಸರ್ಕಾರಕ್ಕೆ ತಡವಾಗಿಯಾದರೂ ಅರಿವಾಗಿರುವುದು ಸ್ವಾಗತಾರ್ಹ. ಪ್ರಧಾನಿ ನರೇಂದ್ರ ಮೋದಿ ಅವರು ಹೆದರಿದ್ದಾರೆ ಎಂದು ಹೇಳುವುದಿಲ್ಲ. ಆದರೆ, ನಮ್ಮ ಹೋರಾಟಕ್ಕೆ ಮನ್ನಣೆ ಕೊಟ್ಟಿರುವುದು ಅಭಿನಂದನಾರ್ಹ’ ಎಂದರು.

ಮಾಧ್ಯಮದ ಪಾತ್ರವಿದೆ:

‘ಘೋಷಿಸಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಶಾಸನಬದ್ಧಗೊಳಿಸಬೇಕು. ಇದಕ್ಕಾಗಿ ಹೋರಾಟ ಮುಂದುವರಿಸಲಾಗುವುದು’ ಎಂದರು.

‘ಪ್ರಧಾನಿಯು ಇಡೀ ದೇಶದ ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಕರಾಳ ಕಾಯ್ದೆ ವಾಪಸ್ ಪಡೆದಿರುವುದು ಸ್ವಾಗತಾರ್ಹ. ರೈತ ಪರ ಸಂಘಟನೆಗಳ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಹೋರಾಟವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮತ್ತು ಈ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರವೂ ದೊಡ್ಡದಿದೆ’ ಎಂದು ತಿಳಿಸಿದರು.

ಕಣ್ಣೀರಿಟ್ಟ ಜಯಶ್ರೀ:

ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ನಡೆದ ಹೋರಾಟಗಳನ್ನು ನೆನೆದು ರೈತ ನಾಯಕಿ ಜಯಶ್ರೀ ಗುರನ್ನವರ ಕಣ್ಣೀರಿಟ್ಟರು. ‘ಈ ಹೋರಾಟದಲ್ಲಿ ಬಹಳಷ್ಟು  ಸಾವು- ನೋವುಗಳಾಗಿವೆ. ತಡವಾಗಿಯಾದರೂ ಕಾಯ್ದೆಗಳನ್ನು ವಾಪಸ್ ಪಡೆದಿದ್ದಕ್ಕೆ ಖುಷಿಯಾಗಿದೆ. ಆ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿದ್ದವು. ಈ ವಿಜಯೋತ್ಸವವನ್ನು ಹುತಾತ್ಮರಾದ ರೈತರಿಗೆ ಸಮರ್ಪಣೆ ಮಾಡುತ್ತೇವೆ’ ಎಂದು ಹೇಳಿದರು.

ಮುಖಂಡ ಪ್ರಕಾಶ್ ನಾಯ್ಕ, ‘ಕೇಂದ್ರ ಸರ್ಕಾರವು ಕೊನೆಗೂ ತಪ್ಪು ತಿದ್ದಿಕೊಂಡಿದ್ದಕ್ಕೆ ಖುಷಿಯಾಗಿದೆ. ಇನ್ಮುಂದೆ ಯಾವುದೇ ಕಾಯ್ದೆ ಅಥವಾ ಯೋಜನೆ ಮಾಡುವಾಗ ದೇಶದಾದ್ಯಂತ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೋರಾಟದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಆಡಿದ್ದ ಮಾತುಗಳನ್ನು ವಾಪಸ್ ಪಡೆಯಬೇಕು. ರೈತರ ಮೇಲೆ ಅನಗತ್ಯವಾಗಿ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಎಂಎಸ್‌‍‍ಪಿಗೆ ಹೋರಾಟ:

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕ ಚೂನಪ್ಪ ಪೂಜಾರಿ, ‘ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತಾಗಲು ಎಂ.ಎಸ್.  ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧಗೊಳಿಸಬೇಕು. ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ₹ 50 ಲಕ್ಷ‌ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಂಶುಪಾಲ ಆನಂದ ಮೆಣಸೆ ಮಾತನಾಡಿ, ‘ದೆಹಲಿಯ ಗಡಿಗಳಲ್ಲಿ ಸೇರಿದಂತೆ ದೇಶದ ಅಲ್ಲಲ್ಲಿ ಒಂದು ವರ್ಷದಿಂದ ಹೋರಾಟ ನಡೆಯುತ್ತಿತ್ತು. ಆದರೆ, ಸರ್ಕಾರ ರೈತರ ಹೋರಾಟವನ್ನು ಗೌರವಿಸಿರಲಿಲ್ಲ. ಅವರನ್ನು ಉಗ್ರರು, ಖಾಲಿಸ್ತಾನಿಗಳು ಎಂದೆಲ್ಲಾ ಟೀಕಿಸಿದರು. ಕೇಂದ್ರ ಸಚಿವರ ಪುತ್ರನೊಬ್ಬ ರೈತರ ಮೇಲೆ ಕಾರು‌ ಹರಿಸಿದ. ಹಲವು ರೈತರು ಹುತಾತ್ಮರಾದರು. ಅನ್ನದಾತನ ಮಾತುಗಳನ್ನು ಕೇಳಿಸಿಕೊಳ್ಳುವ ಸೌಜನ್ಯವನ್ನೂ ತೋರದೆ ಸರ್ಕಾರ  ನಿರ್ಲಕ್ಷ್ಯ ವಹಿಸಿತ್ತು. ಈಗ ರೈತರ ಹೋರಾಟಕ್ಕೆ ಮಂಡಿಯೂರಿದೆ’ ಎಂದು ‍‍ಪ್ರತಿಕ್ರಿಯಿಸಿದರು.

‘ಕಾಯ್ದೆಗಳನ್ನು ರದ್ದುಪಡಿಸಲಾಗುವುದು ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಒಪ್ಪ‍ಲಾಗದು. ಸಂಸತ್ತಿನಲ್ಲಿ ಚರ್ಚಿಸಿ, ವಾಪಸ್ ಪಡೆದುಕೊಳ್ಳಬೇಕು. ರಾಷ್ಟ್ರಪತಿಯಿಂದ ಅನುಮೋದನೆ ಪಡೆಯಬೇಕು. ಅಲ್ಲಿವರೆಗೆ ಹೋರಾಟ ನಿಲ್ಲಿಸಬಾರದು’ ಎಂದು ಹೇಳಿದರು.

ಮುಖಂಡರಾದ ರಾಘವೇಂದ್ರ ನಾಯ್ಕ್, ರಾಜು ಗಾಣಗಿ ಮೊದಲಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು