ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಖಾನೆಗಳಿಂದ ಬಿಲ್‌ ಬಾಕಿ: ರೈತರಿಂದ ಪ್ರತಿಭಟನೆ

ಬರ ಪರಿಹಾರ: ತಾರತಮ್ಯವೆಸಗಿದ ಕೃಷಿ, ಕಂದಾಯ ಇಲಾಖೆಗಳು
Published 19 ಜೂನ್ 2024, 14:56 IST
Last Updated 19 ಜೂನ್ 2024, 14:56 IST
ಅಕ್ಷರ ಗಾತ್ರ

ಸವದತ್ತಿ: ಬರ ಪರಿಹಾರ ವಿಳಂಬ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಭಾರತೀಯ ಕಿಸಾನ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಶಿವಾನಂದ ಸರದಾರ ಮಾತನಾಡಿ, ಬರ ಪರಿಹಾರದ ಹಣ ಹಂಚಿಕೆಯಲ್ಲಿ ಕಂದಾಯ ಮತ್ತು ಕೃಷಿ ಇಲಾಖೆ ತಾರತಮ್ಯವೆಸಗಿವೆ. ಸಂಕಷ್ಟದಲ್ಲಿರುವ ರೈತರನ್ನು ಬದುಕಿಸಲು ಸಾಲ ಮನ್ನಾದ ಅನಿವಾರ್ಯತೆ ಇದೆ. ಕಬ್ಬು ಉತ್ಪನ್ನಗಳಿಂದ ಲಾಭ ಗಳಿಸುತ್ತಿರುವ ಕಾರ್ಖಾನೆಗಳು ರೈತರಿಗೆ ಹೆಚ್ಚುವರಿ ಮೊತ್ತು ಮತ್ತು ಬಾಕಿ ಉಳಿದ ಮೊತ್ತ ಭರಿಸುತ್ತಿಲ್ಲ. ಕೂಡಲೇ ಅಂತಹ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಹಣ ಪಾವತಿಸಲು ಸೂಚಿಸಬೇಕು. ರಾಸಾಯನಿಕ ಗೊಬ್ಬರಗಳಿಂದ ಭೂಮಿ ನಾಶವಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ರೈತರಿಗೆ ತರಬೇತಿ ನೀಡಿ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ಕಳಸಾ ಬಂಡೂರಿ ಯೋಜನೆ ಪೂರ್ಣಗೊಳಿಸಬೇಕಿದೆ. ಘಟಪ್ರಭಾದಿಂದ ಯಲ್ಲಮ್ಮಗುಡ್ಡದ ಮಾರ್ಗವಾಗಿ ಧಾರವಾಡಕ್ಕೆ ರೈಲು ಸಂಪರ್ಕ ಕಲ್ಪಿಸಿದರೆ ದೇವಿಯ ಭಕ್ತರಿಗೆ ಸೇರಿ ರೈತರ ಸರಕು ಸಾಗಾಟಕ್ಕೂ ಅನುಕೂಲವಾಗಲಿದೆ. ತೈಲ ಬೆಲೆ ಏರಿಕೆಯಿಂದ ರೈತರು ಸೇರಿ ಸಾರ್ವಜನಿಕರಿಗೆ ಹೊರೆಯಾಗಿದೆ. ಪಂಪಸೆಟ್‌ಗೆ ಹಿಂದಿನ ಯೋಜನೆಯನ್ನು ಮುಂದುವರೆಸಿ, ಪಿಎಂ ಕಿಸಾನ ಯೋಜನೆ ಪುನರಾರಂಭಿಸಬೇಕು. ಜೊತೆಗೆ ಬಾಂಡ್ ಮತ್ತು ನೋಂದಣಿ ಮೇಲಿನ ಶುಲ್ಕ ಕಡಿತಗೊಳಿಸಬೇಕು ಎಂದು ಹೇಳಿದರು.

ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ ಮಾತನಾಡಿ, ಅನಾವೃಷ್ಟಿಯಿಂದಾದ ಬೆಳೆ ಹಾನಿಗೆ ಪರಿಹಾರ ಒದಗಿಸಬೇಕಿದ್ದ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಬರ ಪ್ರದೇಶವೆಂದು ಘೋಷಿಸಿಯೂ ಸಮೀಕ್ಷೆ ನೆಪದಲ್ಲಿ ತಾರತಮ್ಯ ಸಲ್ಲದು. ಎಲ್ಲ ರೈತರಿಗೆ ಪರಿಹಾರ ನೀಡಲೇ ಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಾಸಕ ವಿಶ್ವಾಸ್ ವೈದ್ಯ ಅವರಿಗೆ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ರೈತರ ಸಾಲ ಮನ್ನಾ ಮಾಡಬೇಕೆಂದು ಮನವಿ ಮಾಡಲಾಗಿತ್ತು. ಹಿಂದಿನ ಸರ್ಕಾರಗಳಿಂತ ಎರಡು ಪಟ್ಟು ಹೆಚ್ಚು ಪರಿಹಾರ ಒದಗಿಸುವ ಭರವಸೆ ನೀಡಿದ ಸಚಿವರು ಇದೀಗ ಗ್ಯಾರೆಂಟಿ ಯೋಜನೆಯ ಹಣವನ್ನು ಸಹ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಾಧ್ಯಕ್ಷ ಸುರೇಶ ಸಂಪಗಾವಿ ಮಾತನಾಡಿ, ಬರ ಪರಿಹಾರ ತಾರತಮ್ಯದ ಕುರಿತು ಸರಿಪಡಿಸುವುದಾಗಿ ನೀಡಿದ ಗಡುವು ಮುಕ್ತಾಯವಾಗಿದೆ. ಗಡುವು ನೀಡಿದ ಅಧಿಕಾರಿಗಳು ಸಹ ವರ್ಗಾವಣೆಗೊಂಡಿದ್ದಾರೆ. ಆದರೆ ಈ ಸಮಸ್ಯೆ ಇದುವರೆಗೂ ಪರಿಹರಿಸಲಾಗಿಲ್ಲ. ಇದು ಬಗೆ ಹರಿಯದೇ ಇದ್ದಲ್ಲಿ ತಹಶೀಲ್ದಾರ ಕಚೇರಿ ಎದರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಜೊತೆಗೆ ಬೀಜ-ರಸಗೊಬ್ಬರಗಳಿಗೆ ಅನವಶ್ಯಕ ಲಿಂಕ್ ಹಾಕಿ ಅಂಗಡಿಕಾರರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಅಂತಹ ಅಂಗಡಿಗಳ ಪರವಾನಿಗೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ, ದ್ಯಾಮನಗೌಡ ಪಾಟೀಲ, ರಾಮರಾಜ ಇನಾಮದಾರ, ಮಹಾಂತೇಶ ಮುತವಾಡ, ಶಿವಲಿಂಗಪ್ಪ ಪಾಟೀಲ, ಸಿಂಧೂರ ತೆಗ್ಗಿ, ಸಿದ್ದಪ್ಪ ಪಟ್ಟದಕಲ್ಲ, ಶಂಕರ ಹಿತ್ತಲಮನಿ, ಸುರೇಶ ಅಂಗಡಿ, ರಾಮಣ್ಣ ಸಬಕಾಳೆ ಹಾಗೂ ಪ್ರಮುಖರು ಇದ್ದರು.

- ‘ಚರಂಡಿ ಮಾರ್ಗ ಬದಲಿಸಿ’

ಸ್ಥಳೀಯವಾಗಿ ಉಲ್ಭಣಿಸಿದ ವಾಂತಿ ಬೇಧಿ ಪ್ರಕರಣದಲ್ಲಿ ಪುರಸಭೆ ತನ್ನ ತಪ್ಪು ಮುಚ್ಚಿಡಲು ಹೊಸ ನೀರು ಹಳೆ ನೀರು ಎಂದು ಜನರ ಗಮನ ಬೇರೆಡೆ ಸೆಳೆಯುತ್ತಿದೆ. ಅದರ ಬದಲು ನಗರದ ಚರಂಡಿ ನೀರನ್ನು ಜಾಕ್ವೆಲ್‌ನ ಬಳಿ ಸೇರದಂತೆ ಕ್ರಮ ವಹಿಸಬೇಕಿತ್ತು. ಇಲ್ಲಿಯವರೆಗೆ ತಾಲೂಕನ್ನು ಆಳಿದ ಎಲ್ಲ ಶಾಸಕರು ಈ ಕುರಿತು ಅಸಡ್ಡೆ ಭಾವನೆ ತೋರಿದ್ದಾರೆ. ಸದ್ಯ ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ಕೊಳಚೆ ನೀರು ಜಾಕ್ವೆಲ್‌ಗೆ ಸೇರದಂತೆ ಎಚ್ಚರವಹಿಸಿ ಜನತೆಗೆ ಶುಚಿ ನೀರು ಪೂರೈಕೆ ಮಾಡಲು ಕ್ರಮ ವಹಿಸಬೇಕಿದೆ. ಇಲ್ಲವಾದಲ್ಲಿ ಜನರು ದಂಗೆ ಎಳುವ ಸಂಭವವಿದೆ ಎಂದು ರೈತ ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT