ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿಯಲ್ಲಿ ರೋಗಿಗಳಿಗೆ, ಯೋಧರಿಗೆ ಆಹಾರ ಪೂರೈಕೆ

ಸಂಕಷ್ಟದ ಸಂದರ್ಭದಲ್ಲಿ ಧರೆಪ್ಪ ಸೇವಾ ಕಾರ್ಯ
Last Updated 8 ಜೂನ್ 2021, 12:13 IST
ಅಕ್ಷರ ಗಾತ್ರ

ಅಥಣಿ (ಬೆಳಗಾವಿ ಜಿಲ್ಲೆ): ಇಲ್ಲಿನ ಕೊರೊನಾ ಯೋಧರು ಹಾಗೂ ಕೋವಿಡ್ ರೋಗಿಗಳಿಗೆ ಮುಖಂಡ ಧರೆಪ್ಪ ಶಿವಪ್ಪ ಠಕ್ಕಣ್ಣವರ ಹಲವು ದಿನಗಳಿಂದ ನಿತ್ಯ ಆಹಾರ ಪೂರೈಸಿ ಗಮನಸೆಳೆದಿದ್ದಾರೆ.

ನಿತ್ಯ ಮನೆಯಲ್ಲಿ ತಯಾರಿಸಿದ 600 ಆಹಾರದ ಪೊಟ್ಟಣಗಳನ್ನು ಶುದ್ಧ ಕುಡಿಯುವ ನೀರಿನ ಬಾಟಲಿ ಜೊತೆಗೆ ಮಧ್ಯಾಹ್ನ ನೀಡಿ ನೆರವಾಗುತ್ತಿದ್ದಾರೆ. ಬೆಳಿಗ್ಗೆ 6ರಿಂದಲೇ ಕುಟುಂಬದ ಸದಸ್ಯರೆಲ್ಲರೂ ಅಡುಗೆ ತಯಾರಿಸುವ ಕಾಯಕದಲ್ಲಿ ತೊಡಗುತ್ತಿದ್ದಾರೆ.

ಧರೆಪ್ಪ ಅವರಿಗೆ ಸ್ನೇಹಿತರಾದ ರಾಜು ಜಮಖಂಡಿಕರ, ನಿಶಾಂತ ದಳವಾಯಿ, ರವಿ ಬಡಕಂಬಿ, ತೌಸಿಫ ಸಾಂಗಲಿಕರ, ರಮೇಶ ಮಾಳಿ, ಸೋಹೇಲ ಖಾನವಾಡೆ, ಸಂತೋಷ ಗಾಳಿ, ಪವನ ಡಂಗಿ ಮೊದಲಾದವರು ಕೈಜೊಡಿಸುತ್ತಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯ ಸಿಬ್ಬಂದಿಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಗೆ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ, ಪೌರಕಾರ್ಮಿಕರಿಗೆ, ಬೀದಿ ಬದಿಗಳಲ್ಲಿ ತರಕಾರಿ–ಹಣ್ಣು ಮಾರುವ ವ್ಯಾಪಾರಿಗಳಿಗೆ, ಅಲೆಮಾರಿ ಜನಾಂಗದವರಿಗೆ, ನಿರ್ಗತಿಕರಿಗೆ, ಅಂಧ ಮಕ್ಕಳ ಶಾಲೆಗೆ, ಕೃಷಿ ಮಾರುಕಟ್ಟೆಯ ಹಮಾಲರಿಗೆ ಹೀಗೆ... ಹಲವು ವರ್ಗದವರಿಗೆ ಆಹಾರ ಪೂರೈಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಈ ಸೇವಾ ಕಾರ್ಯ ಮಾಡುತ್ತಿದ್ದಾರೆ.

‘ಕೋವಿಡ್ ಲಾಕ್‌ಡೌನ್ ಕಾರಣದಿಂದ ಹೋಟೆಲ್‌ಗಳು, ಖಾನಾವಳಿಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಕೊರೊನಾ ಮುಂಚೂಣಿ ಯೋಧರು ಮತ್ತು ರೋಗಿಗಳಿಗೆ ಮಧ್ಯಾಹ್ನ ಊಟದ ತೊಂದರೆ ಆಗದಿರಲೆಂದು ಈ ಅಳಿಲು ಸೇವೆ ಮಾಡುತ್ತಿದ್ದೇನೆ. ಲಾಕ್‌ಡೌನ್‌ ಮುಗಿಯುವವರೆಗೂ ಈ ಕಾರ್ಯ ಮುಂದುವರಿಸುತ್ತೇನೆ’ ಎನ್ನುತ್ತಾರೆ ಧರೆಪ್ಪ.

‘ಸಂಕಷ್ಟದ ಸಮಯದಲ್ಲಿ ಮಾನವೀಯತೆ ತೋರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಕೋವಿಡ್ ಸಮಯದಲ್ಲಿ ನಮಗಾಗಿ ದುಡಿಯುತ್ತಿರುವ ಸೇನಾನಿಗಳಿಗೆ ನಾವು ಸ್ವಲ್ಪವಾದರೂ ಸಹಾಯ ಮಾಡದಿದ್ದರೆ ಹೇಗೆ? ಕೋವಿಡ್ ರೋಗಿಗಳನ್ನು ಒಳಗೊಂಡು ಆಸ್ಪತ್ರೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಗೆ ಆಹಾರದ ಪೊಟ್ಟಣ ಕೊಡುತ್ತಿದ್ದೇವೆ’ ಎಂದು ತಿಳಿಸಿದರು.

‘ವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾನೂ ಸೇರಿದಂತೆ ಹಲವರಿಗೆ ಧರೆಪ್ಪ ಊಟ ತಂದು ಕೊಟ್ಟು ನೆರವಾಗಿದ್ದಾರೆ. ಇದರಿಂದ ನನಗೆ ಅನುಕೂಲವಾಗಿದೆ’ ಎಂದು ರೋಗಿಯೊಬ್ಬರು ಹೇಳಿದರು.

2019ರಲ್ಲಿ ಕೃಷ್ಣಾ ನದಿ ಪ್ರವಾಹ ಬಂದಾಗ ಲಾರಿಯನ್ನೆ ಅಡುಗೆ ಮನೆಯಾಗಿ ಪರಿವರ್ತಿಸಿ ಬಿಸಿಯೂಟ ತಯಾರಿಸುತ್ತಾ 10 ದಿನಗಳವರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಆಹಾರ ಒದಗಿಸಿದ್ದರು. ಬರಗಾಲ ಉಂಟಾಗಿದ್ದಾಗ ಟ್ಯಾಂಕರ್ ಮೂಲಕ ಮನೆ ಮನೆಗೆ ನೀರು ಪೂರೈಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT