₹ 2.50 ಕೋಟಿ ಮೌಲ್ಯದ ಜಾಗವನ್ನು ₹ 25 ಲಕ್ಷಕ್ಕೆ ಕೊಡಿಸಿದ್ದ ಬಿಎಸ್‌ವೈ: ಕೋರೆ

ಬೆಳಗಾವಿ: ‘ನಗರದಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿನಿಲಯಕ್ಕೆ ಅಗತ್ಯವಿದ್ದ ಜಾಗದ ಮೌಲ್ಯ ₹ 2.50 ಕೋಟಿ ಆಗಿತ್ತು. ಅದು ₹ 25 ಲಕ್ಷಕ್ಕೆ ಸಿಗುವಂತೆ ಮಾಡುವಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ’ ಎಂದು ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.
ಇಲ್ಲಿನ ಸುಭಾಷ್ ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನಿರ್ಮಿಸಲಾಗುತ್ತಿರುವ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿನಿಲಯಕ್ಕೆ ಅಡಿಗಲ್ಲು ನೆರವೇರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
'ಹತ್ತು ವರ್ಷಗಳ ಹಿಂದೆ ಜಂಗಮ ಸಮಾಜದ ಬಡ ವಿದ್ಯಾರ್ಥಿನಿ ತಾಯಿ ಜೊತೆ ನನ್ನ ಬಳಗೆ ಬಂದಿದ್ದಳು. ಹಾಸ್ಟೆಲ್ ಸೀಟು ಪಡೆಯಲು ಅಧಿಕಾರಿಗಳು ಕೊಟ್ಟ ತೊಂದರೆಯನ್ನು ಹೇಳಿಕೊಂಡಿದ್ದಳು. ಅದನ್ನು ಕೇಳಿ ನನಗೆ ಕಣ್ಣೀರು ಬಂತು. ಇಂದಿಗೂ ಅನೇಕ ವಿದ್ಯಾರ್ಥಿನಿಯರು ಹಾಸ್ಟೆಲ್‌ಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇದು ಮುಂದುವರಿಯದಂತೆ ನೋಡಿಕೊಳ್ಳಲು ಹಾಸ್ಟೆಲ್ ನಿರ್ಮಾಣದ ಯೋಜನೆ ರೂಪಿಸಲಾಯಿತು’ ಎಂದರು.
ಕೊಠಡಿಯಲ್ಲಿ ಮೂವರಿಗೆ ಅವಕಾಶ:
‘ಅಂತರರಾಷ್ಟ್ರೀಯ ಗುಣಮಟ್ಟದ ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಒಂದು ಕೊಠಡಿಯಲ್ಲಿ ಮೂವರಿಗೆ ಅವಕಾಶ ಇರುತ್ತದೆ. ಅಟ್ಯಾಚ್ ಬಾತ್ ರೂಂ ಇರಲಿದೆ. ಮೊದಲಿಗೆ ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಪ್ರಭಾಕರ ಕೋರೆ ಸಹಕಾರ ಬ್ಯಾಂಕ್‌ನಿಂದ ಎರಡು ಕೊಠಡಿಗೆ ಆಗುವಷ್ಟು ದೇಣಿಗೆ ಕೊಡುತ್ತೇವೆ. ವೈಯಕ್ತಿಕವಾಗಿಯೂ ಸಹಕಾರ ಕೊಡುತ್ತೇನೆ’ ಎಂದು ತಿಳಿಸಿದರು.
‘ಗೋವಾವೇಸ್ ಸಮೀಪದ ಬಸವೇಶ್ವರ ವೃತ್ತದಲ್ಲಿ ಪ್ರತಿಮೆ ಭಗ್ನವಾಗಿದೆ. ₹ 1 ಕೋಟಿ ವೆಚ್ಚದಲ್ಲಿ ಹೊಸ ಪ್ರತಿಮೆ ಮಾಡಿಸಲಾಗುವುದು. ಸಮಾಜದವರಿಗೆ ಕಲ್ಯಾಣಮಂಟಪ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿ ನಿವಾಸದ ಸಮೀಪ ₹ 7 ಕೋಟಿಯಿಂದ ₹ 8 ಕೋಟಿ ವೆಚ್ಚದಲ್ಲಿ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಸಮಾಜದವರು ನೆರವಾಗಬೇಕು’ ಎಂದು ಕೋರಿದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ: ‘ವೈದ್ಯಕೀಯ ಕೋರ್ಸ್‌ಗೆ ವೀರಶೈವ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಸಂತಸ ವ್ಯಕ್ತಪಡಿಸಿದರು.
ಅಡಿಗಲ್ಲು ನೆರವೇರಿಸಿದ ಶಾಸಕ ಬಿ.ಎಸ್. ಯಡಿಯೂರಪ್ಪ, ‘ಸಮಾಜದ ಉಳ್ಳವರು ಇಂತಹ ಸತ್ಕಾರ್ಯಕ್ಕೆ ಆರ್ಥಿಕವಾಗಿ ನೆರವಾಗಬೇಕು. ಬಡ ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಈ ಹಾಸ್ಟೆಲ್‌ನಿಂದ ನೆರವಾಗಲಿದೆ’ ಎಂದರು.
ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾರುತಿ ಬಿ. ಝಿರಲಿ, ‘ಈ ವಸತಿನಿಲಯವನ್ನು ಸಮಾಜದವರು ನೀಡಿದ ದೇಣಿಗೆಯಿಂದ 24.5 ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಮಹಾಸಭಾದಿಂದಲೇ ನಿರ್ವಹಿಸಲಾಗುವುದು’ ಎಂದರು.
ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಸಂಸದೆ ಮಂಗಲಾ ಅಂಗಡಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಾಣಿ ಚನ್ನಮ್ಮ ಮಹಿಳಾ ಸಹಕಾರ ಸೊಸೈಟಿ ಅಧ್ಯಕ್ಷೆ ಆಶಾ ಕೋರೆ, ಕೆಎಲ್ಇ ಸೊಸೈಟಿ ನಿರ್ದೇಶಕ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಹಾಸಭಾದ ಉಪಾಧ್ಯಕ್ಷ ರುದ್ರಣ್ಣ ಹೊಸಕೇರಿ, ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಇದ್ದರು.
‘ಲಕ್ಷ್ಮಿಯಲ್ಲ, ಚನ್ನಮ್ಮ ಎನ್ನಬೇಕು’
‘ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹುಟ್ಟು ಹೋರಾಟಗಾರ್ತಿ. ಅವರಿಗೆ ಲಕ್ಷ್ಮಿ ಬದಲಿಗೆ ಚನ್ನಮ್ಮ ಎಂದು ಹೆಸರಿಡಬೇಕು’ ಎಂದು ಕೋರೆ ಹೊಗಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.