ಬೆಳಗಾವಿ: ‘ವಿಘ್ನ ನಿವಾರಕ’ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಒಂದೆಡೆ ಅದ್ದೂರಿಯಾಗಿ ‘ಚೌತಿ’ ಆಚರಣೆಗೆ ಜನರು ತಯಾರಿ ನಡೆಸಿದ್ದರೆ, ಮತ್ತೊಂದೆಡೆ ಮೂರ್ತಿಕಾರರು ತಾವು ಸಿದ್ಧಪಡಿಸಿದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ.
‘ಪ್ಲಾಸ್ಟಿಕ್ ಆಫ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿದ ಗಣೇಶನ ಮೂರ್ತಿ ನಿಷೇಧಿಸಲಾಗುವುದು’ ಎನ್ನುವ ಈ ಸಲವೂ ಕಡತಕ್ಕೇ ಸೀಮಿತವಾಗಿದೆ. ಹಲವು ಮೂರ್ತಿಕಾರರು ನಿಯಮ ಗಾಳಿಗೆ ತೂರಿ, ಇಂಥ ಮೂರ್ತಿ ತಯಾರಿಕೆಯಲ್ಲಿ ನಿರತವಾಗಿದ್ದಾರೆ. ಜತೆಗೆ, ಮಹಾರಾಷ್ಟ್ರದಿಂದಲೂ ಅಪಾರ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳು ಬೆಳಗಾವಿ ಮಾರುಕಟ್ಟೆ ಪ್ರವೇಶಿಸಿವೆ.
ಈ ಮಧ್ಯೆ, ಕೆಲವರು ಮಣ್ಣಿನಲ್ಲಿ ಗಣೇಶನನ್ನು ತಯಾರಿಸಿ, ರಾಸಾಯನಿಕ ರಹಿತವಾದ ಬಣ್ಣ ಬಳಿದು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಆದರೆ, ಮಣ್ಣಿನ ಮೂರ್ತಿಗೆ ಹೋಲಿಸಿದರೆ ಪಿಒಪಿ ಮೂರ್ತಿ ಅಗ್ಗ. ಹಾಗಾಗಿ ಜನರೂ ಪಿಒಪಿ ವಿಗ್ರಹಕ್ಕೆ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಿರುವುದು ಕಂಡುಬರುತ್ತಿದೆ.
ಪರಿಸರ ಸ್ನೇಹಿ ಗಣಪ: ‘ಯಾವುದೇ ಊರಲ್ಲಿ ಮಣ್ಣಿನಲ್ಲಿ ತಯಾರಿಸಿದ ಮತ್ತು ಪಿಒಪಿಯಲ್ಲಿ ನಿರ್ಮಿಸಿದ ಮೂರ್ತಿ ಖರೀದಿಸುವ ಎರಡೂ ಮಾದರಿ ಗ್ರಾಹಕ ಇರುತ್ತಾರೆ. ಆದರೆ, ನಾವು ಮೂರು ತಲೆಮಾರಿನಿಂದ ಪರಿಸರ ಸ್ನೇಹಿ ಗಣಪನನ್ನೇ ತಯಾರಿಸುತ್ತಿದ್ದೇವೆ. ಈ ವರ್ಷ 250 ಮೂರ್ತಿ ತಯಾರಾಗುತ್ತಿವೆ. ಪ್ರತಿ ಮೂರ್ತಿಯ ದರ ₹600ರಿಂದ ₹2 ಸಾವಿರದವರೆಗೆ ಇದೆ’ ಎಂದು ತಾಲ್ಲೂಕಿನ ಶಿಂಧೊಳ್ಳಿಯ ಮೂರ್ತಿಕಾರ ಸುರೇಶ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಬಾರಿ ಮೇ ತಿಂಗಳಲ್ಲಿ ಕೆಲಸ ಆರಂಭಿಸಿದ್ದೇವೆ. ಹಂತ–ಹಂತವಾಗಿ ತಯಾರಾಗುತ್ತಿರುವ ಮೂರ್ತಿಗಳಿಗೆ ಬಣ್ಣ ಬಳಿಯುತ್ತೇವೆ. ಹಬ್ಬ ಸಮೀಪಿಸಿದಂತೆ, ಗ್ರಾಹಕರ ಬೇಡಿಕೆ ಪೂರೈಸಲು ಹಗಲು–ರಾತ್ರಿಯಿಡೀ ದುಡಿಯುತ್ತೇವೆ’ ಎಂದರು.
ಪರಿಸರಕ್ಕೆ ಹಾನಿ ಮಾಡಲ್ಲ:
‘ಬದುಕಿನ ಬಂಡಿ ದೂಡಲು ನನಗೆ ಪಾನ್‌ಶಾಪ್ ಇದೆ. ಇದರ ಮಧ್ಯೆ ಹವ್ಯಾಸವೆಂದು ಕಳೆದ ಆರು ವರ್ಷಗಳಿಂದ ಮಣ್ಣಿನ ಗಣೇಶನನ್ನು ಸಿದ್ಧಪಡಿಸುತ್ತಿದ್ದೇನೆ. ಈ ವರ್ಷ ನನ್ನ ಕೈಚಳಕದಲ್ಲಿ 25ಕ್ಕೂ ಅಧಿಕ ಮೂರ್ತಿ ಅರಳಲಿವೆ. ಲಾಭ ಕಡಿಮೆ ಬಂದರೂ ಪರವಾಗಿಲ್ಲ. ಆದರೆ, ಪಿಒಪಿ ಮೂರ್ತಿ ತಯಾರಿಸಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ’ ಎನ್ನುತ್ತಾರೆ ಇಲ್ಲಿನ ಮಹಾದ್ವಾರ ರಸ್ತೆಯ ಮೂರ್ತಿಕಾರ ವಸಂತ ವೆಂಕಪ್ಪ ನಾಯ್ಕ.
ಪಿಒಪಿ ಮೂರ್ತಿ ತಯಾರಿಕೆ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.
ನಾವು ಪೂಜಿಸಿದ ನಂತರ ವಿಸರ್ಜಿಸುವ ಮೂರ್ತಿ ನೀರಿನಲ್ಲಿ ಸಂಪೂರ್ಣ ಕರಗಬೇಕು. ಮಣ್ಣು ಮರುಬಳಕೆಯಾಗಬೇಕು. ಜತೆಗೆ ನೀರು ಕಲುಷಿತವಾಗಬಾರದು. ಅದಕ್ಕಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣಪನ ತಯಾರಿಕೆಗೆ ಒತ್ತು ನೀಡಬೇಕು–ವಸಂತ ನಾಯ್ಕ ಮೂರ್ತಿಕಾರ
‘ಪಿಒಪಿ ಮೂರ್ತಿ ತಯಾರಿಕೆ ಅನಿವಾರ್ಯ’
‘ನಮಗೂ ಪರಿಸರ ಸ್ನೇಹಿ ಗಣಪನನ್ನೇ ತಯಾರಿಸಲು ಆಸೆ ಇದೆ. ಆದರೆ ಈಗಿನ ಗ್ರಾಹಕರು ಪಿಒಪಿ ಮೂರ್ತಿಗಳಿಗೆ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಗ್ರಾಹಕರನ್ನು ಕಳೆದುಕೊಳ್ಳಬಾರದೆಂದು ಅನಿವಾರ್ಯವಾಗಿ ಪಿಒಪಿ ಮೂರ್ತಿ ಸಿದ್ಧಪಡಿಸುತ್ತಿದ್ದೇವೆ. ಬೇರೆಡೆಯಿಂದಲೂ ತರಿಸಿಕೊಡುತ್ತೇವೆ’ ಎಂದು ಮೂರ್ತಿಕಾರರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.