ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ದರ ದುಬಾರಿ, ಖರೀದಿ ಭರ್ಜರಿ

ಮಾರುಕಟ್ಟೆಗಳಲ್ಲಿ ಜನಸಾಗರ, ಗಣೇಶ ಚತುರ್ಥಿ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಭಕ್ತರು
Published : 6 ಸೆಪ್ಟೆಂಬರ್ 2024, 16:08 IST
Last Updated : 6 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಬೆಳಗಾವಿ: ನಗರದ ಎಲ್ಲ ಮಾರುಕಟ್ಟೆಗಳಲ್ಲೂ ಶುಕ್ರವಾರ ಇಡೀ ದಿನ ಜನವೋ ಜನ. ಚತುರ್ಥಿ ಸಿದ್ಧತೆಗಾಗಿ, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನ ಸಾಗರೋಪಾದಿಯಲ್ಲಿ ಮಾರುಕಟ್ಟೆಗೆ ಧಾವಿಸಿದರು. ಇದರಿಂದ ಎಲ್ಲ ವಸ್ತುಗಳ ದರವೂ ದುಪ್ಪಟ್ಟು ಏರಿಕೆಯಾಗಿದ್ದು ಕಂಡುಬಂತು.

ಇಲ್ಲಿನ ಕಾಕತಿವೇಸ್‌, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಟೆ, ಮಾರ್ಕೆಟ್‌, ಕಿರ್ಲೊಸ್ಕರ್‌ ರಸ್ತೆ, ಖಡೇಬಜಾರ್‌, ರಾಮಲಿಂಗಖಿಂಡ ಗಲ್ಲಿ, ಕಂಬಳಿಕೂಟ ಸೇರಿದಂತೆ ಎಲ್ಲ ಕಡೆ ಜನಜಂಗುಳಿ ಕಂಡುಬಂತು. ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹೈರಾಣಾದರು. ಪರಿಣಾಮ ರಾಣಿ ಚನ್ನಮ್ಮ ವೃತ್ತದಲ್ಲೇ ಎಲ್ಲ ವಾಹನಗಳಿಗೂ ತಡೆಯೊಡ್ಡಿದರು.

ಹಣ್ಣು, ಹೂವು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳ ಮಳಿಗೆಗಳ ಮುಂದೆ ಜನ ಕಿಕ್ಕಿರಿದು ಸೇರಿದರು. ರಾತ್ರಿ 11ರವರೆಗೂ ಖರೀದಿ ಭರಾಟೆ ಜೋರಾಗಿಯೇ ಇತ್ತು.

ಮನೆಗಳಲ್ಲಿ ಗಣಪತಿ ‍ಪ್ರತಿಷ್ಠಾ‍ಪಿಸುವ ಮಂಟಪ, ವಿದ್ಯುದ್ದೀಪಗಳ ಸರಮಾಲೆ, ಥರ್ಮೋಕೋಲ್‌ನಿಂದ ಮಾಡಿರುವ ಮಂಟಪಗಳು, ಬಣ್ಣದ ಕಾಗದಗಳು, ಪರಪರಿಗಳ ಖರೀದಿ ಜೋರಾಗಿ ನಡೆಯಿತು. ಎಲ್ಲ ಬಟ್ಟೆ, ವಾಹನ ಅಂಗಡಿಗಳಲ್ಲೂ ಖರೀದಿ ಭರ್ಜರಿಯಾಗಿ ನಡೆಯಿತು.

ದರ ದುಬಾರಿ: ಹಣ್ಣು, ಹೂವು, ಕಾಯಿಗಳ ದುಪ್ಪಟ್ಟಾಗಿದ್ದು ಕಂಡುಬಂತು. ಕೆಜಿ ಚೆಂಡು ಹೂವಿಗೆ ₹60ರಿಮದ ₹80. ಸೇವಂತಿಗೆ ₹250, 15 ಹೂಗಳ ಒಂದು ಗುಲಾಬಿ ಗುಚ್ಚಕ್ಕೆ ₹200, ಮಾರುದ್ದ ಮಲ್ಲಿಗೆ ಮಾಲೆಗೆ ₹100 ದರ ಕೇಳಿಬಂತು.

ಐದು ಸೇಬುಗಳಿಗೆ ₹220, ವಿವಿಧ ಹಣ್ಣುಗಳು ಸೇರಿದ ಒಂದು ಗುಂಪಿಗೆ ₹120, ಐದು ದಾಳಿಂಬೆಗೆ ₹300, ಡಜನ್‌ ಬಾಳೆಹಣ್ಣಿಗೆ ₹80ರಿಂದ ₹160 ದರ ಇತ್ತು. ಕಬ್ಬಿನ ಜಲ್ಲೆ ಹಾಗೂ ಬಾಳೆದಿಂಡುಗಳನ್ನೂ ಜನ ಮುಗಿಬಿದ್ದು ಖರೀದಿಸಿದರು.

ಈದ್‌ ಮೆರವಣಿಗೆ ಮುಂದೂಡಿಕೆ

ನಗರದಲ್ಲಿ ಸೆ.16ರಂದು ನಡೆಯಬೇಕಿದ್ದ ಈದ್‌ ಮಿಲಾದ್‌ ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡಲಾಯಿತು. ಈ ಸಂಬಂಧ ನಗರದಲ್ಲಿ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಂ ಸಮಾಜದ ಹಿರಿಯರು ವಿವಿಧ ಕಮಿಟಿಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಒಮ್ಮತದ ನಿರ್ಣಯ ಕೈಗೊಂಡರು. ‘ಕ್ಯಾಲೆಂಡರ್‌ ಪ್ರಕಾರ ಈದ್‌ ಮಿಲಾದ್‌ ಮೆರವಣಿಗೆ ಸೆ.16ಕ್ಕೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೆ.17ಕ್ಕೆ ನಡೆಯಬೇಕಿದೆ. ಆದರೆ ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಬಹಳ ಅದ್ಧೂರಿಯಾಗಿ ನಡೆಯಲಿದೆ. ಆ ಹಬ್ಬಕ್ಕೆ ತೊಡಕಾಗಬಾರದು ಉತ್ಸವ ಸುಸೂತ್ರವಾಗಿ ನಡೆಯಬೇಕು ಶಾಂತಿ– ಸಹಬಾಳ್ವೆ ಕಾಪಾಡಲು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಈದ್‌ ಮೆರವಣಿಗೆ ಮುಂದೂಡಲಾಗಿದೆ’ ಎಂದು ಹಿರಿಯರು ತಿಳಿಸಿದರು. ‘ಸೆ.16ರಂದು ಪದ್ಧತಿ ಪ್ರಕಾರ ಎಲ್ಲ ಮಸೀದಿ ಹಾಗೂ ಮನೆಗಳಲ್ಲಿ ಈದ್‌ ಆಚರಣೆಗಳು ನಡೆಯಲಿವೆ. ಮೆರವಣಿಗೆ ಮಾತ್ರ ಮುಂದೂಡಲಾಗಿದೆ’ ಎಂದು ಶಾಸಕ ಆಸಿಫ್‌ ಸೇಠ್‌ ತಿಳಿಸಿದರು. ಇಸ್ಲಾಂ ಧರ್ಮಗುರುಗಳಾದ ಮುಫ್ತಿ ಮಂಜೂರ್ ಅಹ್ಮದ್‌ ರಿಜ್ವಿ ಹಫೀಜ್ ನಜೀರುಲ್ಲಾ ಖಾದ್ರಿ ಸರ್ದಾರ್ ಅಹ್ಮದ್ ಮುಷ್ತಾಕ್ ನಯೀಮ್ ಅಹ್ಮದ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT