ಶನಿವಾರ, ಮಾರ್ಚ್ 25, 2023
27 °C

ಭಾರತವನ್ನು ವಿಶ್ವಗುರುವಾಗಿಸಲು ಹೆಜ್ಜೆ ಇಡಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿಸುವ ದಿಸೆಯಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕು’ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಲಹೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದ ಸೆಂಟ್ರಲ್‌ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ 9ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲದಲ್ಲಿ ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತ ವಿಶ್ವಗುರುವಾಗಿತ್ತು. ಈಗಲೂ ಸಹ ಆ ಸಾಮರ್ಥ್ಯವಿದೆ’ ಎಂದು ಪ್ರತಿಪಾದಿಸಿದರು.

‌‘ಪ್ರಸ್ತುತ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ–ಯುವತಿಯರು ಇರುವುದೇ ಭಾರತದಲ್ಲಿ. ಹಾಗಾಗಿ ಯುವಜನಾಂಗ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ, ‘ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಾಣದ ಗುರಿ ಹೊಂದಬೇಕು. 21ನೇ ಶತಮಾನ ಭಾರತದ್ದಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಯಾಗಿಯೇ ಇರಬೇಕು: ‘ಪ್ರತಿ ವ್ಯಕ್ತಿಯೂ ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಯಾಗಿಯೇ ಇರಬೇಕು. ಆಗ ಹೊಸತನಕ್ಕೆ ನಾವು ತೆರೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ನವದೆಹಲಿಯ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಜೆನೆಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಬಯೊಟೆಕ್ನಾಲಜಿ ನಿರ್ದೇಶಕ ಪ್ರೊ.ವಿ.ಎಸ್‌. ಚವ್ಹಾಣ, ‘ಬದುಕಿನಲ್ಲಿ ಯಶಸ್ಸು ಗಳಿಸಲು ಶ್ರಮ ಹಾಗೂ ಶಿಸ್ತು ರಹದಾರಿಗಳಾಗಿವೆ. ಕಡಿಮೆ ಅಂಕ ಗಳಿಸಿದ ಯಾವುದೇ ವಿದ್ಯಾರ್ಥಿಯೂ ಕುಗ್ಗಬಾರದು. ಪ್ರಪಂಚದಲ್ಲಿ ಸೂರ್ಯನ ಬೆಳಕು ಎಲ್ಲರಿಗೂ ಸಮನಾಗಿ ಸಿಗುವಂತೆಯೇ, ವೃತ್ತಿಯಲ್ಲಿ ಅವಕಾಶಗಳು ಎಲ್ಲರಿಗೂ ಸಿಗುತ್ತವೆ. ಶ್ರಮ ಹಾಗೂ ಶಿಸ್ತು ಬಿಡಬಾರದು’ ಎಂದು ಸಲಹೆ ನೀಡಿದರು.

‘ಸ್ವಾತಂತ್ರ್ಯ ಸಿಕ್ಕ ವೇಳೆ ದೇಶದಲ್ಲಿ 25 ವಿಶ್ವವಿದ್ಯಾಲಯಗಳಿದ್ದವು. 20ಸಾವಿರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಈಗ 960ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿದ್ದು, 3.7 ಕೋಟಿ ವಿದ್ಯಾರ್ಥಿಗಳಿದ್ದಾರೆ. ಭಾರತದ ಉನ್ನತ ಶೈಕ್ಷಣಿಕ ವ್ಯವಸ್ಥೆ ಜಗತ್ತಿನ ಎರಡನೇ ಸ್ಥಾನದಲ್ಲಿದ್ದರೂ ಸಂಕೀರ್ಣಾವಸ್ಥೆಯಲ್ಲಿದೆ’ ಎಂದರು.

ಕುಲಪತಿ ಪ್ರೊ.ಎಂ. ರಾಮಚಂದ್ರೇಗೌಡ, ‘ಪ್ರಸಕ್ತ ವರ್ಷ 35,484 ಸ್ನಾತಕ ವಿದ್ಯಾರ್ಥಿಗಳು, 2,749 ಸ್ನಾತಕೋತ್ತರ, 188 ಪಿ.ಜಿ. ಡಿಪ್ಲೊಮಾ, 86 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತಿದೆ. 10 ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಹಾಗೂ 148 ವಿದ್ಯಾರ್ಥಿಗಳಿಗೆ ರ‍್ಯಾಂಕ್‌ ಪ್ರಮಾಣಪತ್ರ ವಿತರಿಸಲಾಗುತ್ತಿದೆ’ ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಎಚ್‌. ಸುದರ್ಶನ್‌ ಬಲ್ಲಾಳ್‌ ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’, ಸಾಹಿತಿ ವಾದಿರಾಜ ದೇಶಪಾಂಡೆ ಅವರಿಗೆ ‘ಡಾಕ್ಟರ್‌ ಆಫ್‌ ಲೆಟರ್ಸ್‌’ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಖ್ಯಾತ ಸರೋದ್ ವಾದಕ ಪಂಡಿತ ರಾಜೀವ್‌ ತಾರಾನಾಥ ಅವರು ಪಾಲ್ಗೊಳ್ಳಲಿಲ್ಲ.

ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ ಮತ್ತು ಪ್ರೊ.ವೀರನಗೌಡ ಪಾಟೀಲ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್‌. ಪಾಟೀಲ, ಸಿಂಡಿಕೇಟ್‌ ಸದಸ್ಯರು ಹಾಗೂ ವಿದ್ಯಾವಿಷಯಕ ಪರಿಷತ್‌ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು