ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೇಬಾಗೇವಾಡಿ: 25 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮದೇವಿ ಜಾತ್ರೆ

ಶಿವಕುಮಾರ ಪಾಟೀಲ
Published 8 ಏಪ್ರಿಲ್ 2024, 8:19 IST
Last Updated 8 ಏಪ್ರಿಲ್ 2024, 8:19 IST
ಅಕ್ಷರ ಗಾತ್ರ

ಹಿರೇಬಾಗೇವಾಡಿ: 25 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಗೆ ಹಿರೇಬಾಗೇವಾಡಿ ಸಜ್ಜಾಗುತ್ತಿದ್ದು, ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

1998ರ ಮೇ ತಿಂಗಳಲ್ಲಿ ಹಿರೇಬಾಗೇವಾಡಿಯಲ್ಲಿ ಜಾತ್ರೆ ನಡೆದಿತ್ತು. ಈ ಬಾರಿ ಏಪ್ರಿಲ್‌ 12ರಿಂದ ಮೇ 3ರವರೆಗೆ ಜಾತ್ರೆ ನಡೆಯಲಿದ್ದು, 21 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಾತ್ರೆ ಪ್ರಯುಕ್ತ, ಗ್ರಾಮಸ್ಥರು ತಮ್ಮ ಮನೆಗಳಿಗೆ ಸುಣ್ಣ–ಬಣ್ಣ ಬಳಿದು ಅಲಂಕರಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡವರು, ತ್ವರಿತವಾಗಿ ಮುಗಿಸುವುದರಲ್ಲಿ ನಿರತವಾಗಿದ್ದಾರೆ. ಇನ್ನೂ ಕೆಲವರು ತರಾತುರಿಯಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ಆಯೋಜಿಸುತ್ತಿದ್ದರೆ, ಮದುವೆ ನಿಶ್ಚಯವಾಗಿರುವಂಥ ಯುವ ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಿವೆ. ಮಹಿಳೆಯರು ತಮ್ಮ ಮನೆಗೆ ಬರುವ ಸಂಬಂಧಿಕರಿಗೆ ತಿಂಡಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ಬಹುತೇಕರು ಜಾತ್ರೆಯಲ್ಲೇ ನಿರತವಾಗಿದ್ದರಿಂದ ಕೂಲಿ ಕೆಲಸಕ್ಕೆ ಜನರೇ ಸಿಗದಂತಾಗಿದೆ.

ಹಲವು ಕಾರ್ಯಕ್ರಮ: ಗ್ರಾಮದ ಹೃದಯಭಾಗದಲ್ಲಿರುವ ಗ್ರಾಮದೇವತೆ ದೇವಸ್ಥಾನ ಸರ್ವಧರ್ಮೀಯರ ಶ್ರದ್ಧಾಕೇಂದ್ರವಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಪೂಜಾ ಕೈಂಕರ್ಯ ಕೈಗೊಳ್ಳುತ್ತಾರೆ. ನಿತ್ಯ ಪೂಜೆ–ಪುನಸ್ಕಾರ ನೆರವೇರುತ್ತವೆ. ಜಾತ್ರೆ ಅಂಗವಾಗಿ ಇತ್ತೀಚಿನ ವರ್ಷಗಳಲ್ಲಿ ಗ್ರಾಮದೇವತೆಯ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಸಾಮರಸ್ಯಕ್ಕೆ ಹೆಸರಾದ ಈ ಊರಿನ ಜಾತ್ರೆಯ ಕಾರ್ಯಕ್ರಮಗಳಲ್ಲಿ ವಾಡಿಕೆಯಂತೆ ಸರ್ವಧರ್ಮೀಯರು ಪಾಲ್ಗೊಳ್ಳಲಿದ್ದಾರೆ.

ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಗ್ರಾಮದೇವಿ ಜಾತ್ರಾ ಸಮಿತಿಯವರು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ. ದೇವಿಯ ಹೊನ್ನಾಟ, ಉಡಿ ತುಂಬುವುದು, ರಂಗೋಲಿ ಸ್ಪರ್ಧೆ, ಜೋಡೆತ್ತಿನ ಖಾಲಿ ಬಂಡೆ ಓಡಿಸುವ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ರಸಮಂಜರಿ, ನಾಟಕ, ಗೀಗಿ ಪದಗಳ ಗಾಯನ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗ್ರಾಮದ ಹೊರವಲಯದ ಪಡಿಬಸವೇಶ್ವರ ದೇವಸ್ಥಾನದ ಬಳಿ ದೇವಿ ಗದ್ದುಗೆಯನ್ನು ನಿರ್ಮಿಸುತ್ತಿದ್ದು, ಅಲ್ಲಿಯೇ ಮನರಂಜನೆ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ಮಹಾಪ್ರಸಾದ ವ್ಯವಸ್ಥೆ ಮಾಡಿಲಾಗಿದೆ. ಗ್ರಾಮ ಪಂಚಾಯ್ತಿಯಿಂದಲೂ ಹಲವು ಸೌಕರ್ಯ ಕಲ್ಪಿಸಲಾಗುತ್ತಿದೆ.

ಗ್ರಾಮದೇವಿ ಜಾತ್ರೆ ಪ್ರಯುಕ್ತ ಬೃಹತ್ ರಥವನ್ನು ಸಿದ್ಧಪಡಿಸಿರುವುದು
ಗ್ರಾಮದೇವಿ ಜಾತ್ರೆ ಪ್ರಯುಕ್ತ ಬೃಹತ್ ರಥವನ್ನು ಸಿದ್ಧಪಡಿಸಿರುವುದು
ಸಿದ್ಧವಾಗಿದೆ ಬೃಹತ್‌ ರಥ
ಗ್ರಾಮದೇವಿ ಜಾತ್ರೆ ಅಂಗವಾಗಿ ಬೈಲಹೊಂಗಲ ತಾಲ್ಲೂಕಿನ ತಿಗಡಿಯ ಮೂರ್ತಿಕಾರರು ಬೃಹತ್ ರಥ ಸಿದ್ಧಪಡಿಸಿದ್ದಾರೆ. ಕಳಸ ಸೇರಿ 39 ಅಡಿ ಎತ್ತರ ಹೊಂದಿರುವ ತೇರು ಆಕರ್ಷಕವಾಗಿದೆ. 17ರಿಂದ 18 ಟನ್ ಭಾರವಿದ್ದು ₹70 ಲಕ್ಷ ವೆಚ್ಚದಲ್ಲಿ ಸಾಗವಾಣಿ ಹೊನ್ನೆ ಮರದ ಕಟ್ಟಿಗೆಯಲ್ಲಿ ಜೀವ ತಳೆದಿದೆ. ಕೆತ್ತನೆ ಕಾರ್ಯ ಮುಗಿದಿದೆ. ಈ ಜಾತ್ರೆಯಲ್ಲಿ ಭಾಗವಹಿಸುವ ಸಹಸ್ರಾರು ಭಕ್ತರು ತೇರು ಎಳೆದು ಸಂಭ್ರಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT