ಭಾನುವಾರ, ಸೆಪ್ಟೆಂಬರ್ 19, 2021
24 °C

ಬೆಳಗಾವಿ: 51 ಗ್ರಾಮಗಳು ಜಲಾವೃತ, 36 ಸೇತುವೆಗಳು ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯಲ್ಲಿ 47 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. 36 ಸೇತುವೆಗಳು ಮುಳುಗಡೆಯಾಗಿವೆ. 51 ಗ್ರಾಮಗಳು ಜಲಾವೃತವಾಗಿವೆ. 224 ಮನೆಗಳು ಭಾಗಶಃ ಹಾಗೂ ಒಂದು ಮನೆ ಸಂಪೂರ್ಣ ಕುಸಿದಿದ್ದು, ಇದರಿಂದ ಯಾವುದೇ ಜೀವ ಹಾನಿ ಆಗಿಲ್ಲ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಅತಿವೃಷ್ಟಿ ಮತ್ತು ಪ್ರವಾಹ ನಿರ್ವಹಣೆಗೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಸಚಿವರು ಇಲ್ಲಿಂದ ಭಾಗವಹಿಸಿ ಮಾತನಾಡಿದರು.

‘ಜಿಲ್ಲೆಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆ ಆಗಿದೆ. ಭೂಕುಸಿತ ಉಂಟಾಗಿದೆ. ನಿಪ್ಪಾಣಿಯ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಜಿಲ್ಲೆಯ ಐದು ತಾಲ್ಲೂಕುಗಳ 51 ಗ್ರಾಮಗಳಲ್ಲಿ ನೀರು ನುಗ್ಗಿದೆ. 26 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ 2 ಸಾವಿರ ಮಂದಿಗೆ ಆಶ್ರಯ ನೀಡಲಾಗಿದೆ’ ಎಂದು ಹೇಳಿದರು.

ಪರಿಹಾರ ಕಲ್ಪಿಸಲು ಕ್ರಮ: ‘ಖಾನಾಪುರ ತಾಲ್ಲೂಕಿನಲ್ಲಿ ವಿದ್ಯುತ್ ಅಪಘಡದಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಮನೆ ಹಾನಿಗೂ ಪರಿಹಾರ ಕೊಡುವಂತೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

'ರಸ್ತೆ ಕಟ್ಟಡಗಳು ಸೇರಿದಂತೆ ಮೂಲ ಸೌಕರ್ಯಗಳ ದುರಸ್ತಿಗೆ ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆ ಸೇರಿ ಲೋಕೋಪಯೋಗಿ ಇಲಾಖೆಗೆ ತಕ್ಷಣವೇ ₹ 50 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಬೆಳಗಾವಿ ಹಾಗೂ ಬಾಗಲಕೋಟೆಗೆ ತಲಾ ಮತ್ತೊಂದು ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಬೇಕು' ಎಂದರು. 

‘ಶುಕ್ರವಾರ ಸಂಜೆ ವೇಳೆಗೆ, 95 ಸಾವಿರ ಕ್ಯುಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದ್ದು, ಇದರಿಂದ ಬಾಗಲಕೋಟೆ ಜಿಲ್ಲೆಗೂ ಪ್ರವಾಹ ಭೀತಿ ಎದುರಾಗಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ಮತ್ತಿತರ ಮೂಲಸೌಕರ್ಯಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ’ ಎಂದು ಹೇಳಿದರು.

ಮಳೆ ಮುಂದುವರಿದರೆ ತೊಂದರೆ: ‘40 ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ನಿರ್ಮಾಣಕ್ಕೆ ₹ 35 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಬೇಕು. ನೀರಾವರಿ ನಿಗಮದ ಮಂಡಳಿ ಸಭೆಯಲ್ಲಿ ಈಗಾಗಲೇ ಅನುಮೋದನೆ ಕೊಡಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ಬಾಕಿ‌ ಉಳಿದಿದೆ. ಅನುಮೋದನೆ ಸಿಕ್ಕಲ್ಲಿ ಅಕ್ಟೋಬರ್‌ನಿಂದ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಬೆಳಗಾವಿಯಲ್ಲಿ ಪ್ರವಾಹ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಕಡಿಮೆಯಾದರೆ ಸದ್ಯಕ್ಕೆ ತೊಂದರೆ ಆಗುವುದಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಸ್ವಲ್ಪಮಟ್ಟಿಗೆ ತೊಂದರೆ ಆಗಲಿದೆ’ ಎಂದರು.

‘ಆಲಮಟ್ಟಿ‌ ಜಲಾಶಯಕ್ಕೆ ಸದ್ಯಕ್ಕೆ 1.50 ಲಕ್ಷ ಕ್ಯುಸೆಕ್ ಒಳಹರಿವು ಇದ್ದು, ಪ್ರವಾಹ ಪರಿಸ್ಥಿತಿ ಉದ್ಭವಿಸದಂತೆ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ 3 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮುಂದಿನ ಮೂರು ದಿನಗಳವರಗೆ ಮಳೆಯಾಗುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ವಿವರಿಸಿದರು.

ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ‘ವ್ಯಾಪಕ‌ ಮಳೆ ಆಗುತ್ತಿರುವುದರಿಂದ ಯಾವುದೇ ಸಾವು-ನೋವುಗಳಾಗದಂತೆ ಅಧಿಕಾರಿಗಳು 24 ಗಂಟೆಯೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ತುರ್ತು ಪರಿಹಾರ ಕಾರ್ಯಕ್ಕೆ ಹಣಕಾಸಿನ ಕೊರತೆಯಿಲ್ಲ; ಯಾವುದೇ ರೀತಿಯ ನೆರವಿನ‌ ಅಗತ್ಯವಿದ್ದರೆ ತಕ್ಷಣವೇ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.‌

‘ಮಳೆಯಿಂದ‌ ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಜನರ ಸಂಚಾರಕ್ಕೆ ಆದ್ಯತೆ ಮೇರೆಗೆ ಮೊದಲು ರಸ್ತೆಗಳನ್ನು ಮುಕ್ತಗೊಳಿಸಬೇಕು’ ಎಂದು ಸೂಚಿಸಿದರು.

ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌, ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು